ಸರಕಾರಿ ನೌಕರರಿಂದ ಮತದಾನ ಜಾಗೃತಿ ಜಾಥಾ…

ಬಳ್ಳಾರಿ

      ಕಡ್ಡಾಯವಾಗಿ ಮತ್ತು ನೈತಿಕ ಮತದಾನ ಮಾಡುವ ಮತ್ತು ಸುತ್ತಮುತ್ತಲಿನ ಜನರನ್ನು ಮತದಾನ ಮಾಡುವ ನಿಟ್ಟಿನಲ್ಲಿ ಪ್ರೇರಿಪಿಸುವ ಮೂಲಕ ಸರಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.

       ಬಳ್ಳಾರಿ ಲೋಕಸಭಾ ಉಪಚುನಾವಣೆ ನಿಮಿತ್ತ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸರಕಾರಿ ಅಧಿಕಾರಿಗಳು ಮತ್ತು ನೌಕರರ ಮತದಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

      ಲೋಕಸಭಾ ಉಪಚುನಾವಣೆಗೆ ನ.3ರಂದು ಮತದಾನ ನಡೆಯಲಿದ್ದು, ತಾವು ಕಡ್ಡಾಯವಾಗಿ ಮತದಾನ ಮಾಡುವುದರ ಜತೆಗೆ ಕನಿಷ್ಠ 10 ಕುಟುಂಬಗಳಿಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸಿ ಅವರು ಮತದಾನ ಮಾಡುವಂತೆ ಪ್ರೇರೆಪಿಸಬೇಕು ಎಂದು ಹೇಳಿದ ಅವರು, ತಮ್ಮ ಅಧೀನದ ಕಚೇರಿಗಳ ಸಿಬ್ಬಂದಿಗೂ ಈ ಕುರಿತು ಸೂಚಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಬೇಕು ಎಂದರು.

       ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಿ ನೌಕರರೇ ಮುಂದಾಳತ್ವ ವಹಿಸುವುದು ಅಗತ್ಯ ಎಂಬುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮನೆಯಿಂದ ಹೊರಬಂದು ಮತದಾನ ಮಾಡುವಂತೆ ಜಾಗೃತಿ ಮೂಡಿಸಿ ಎಂದರು.

       ವಿವಿಧ ಇಲಾಖೆಗಳ ಸರಕಾರಿ ಅಧಿಕಾರಿಗಳು ಮತ್ತು ನೌಕರರು ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು. ಸುಭದ್ರ ಪ್ರಜಾಪ್ರಭುತ್ವಕ್ಕೆ ಮತದಾನ ಮಾಡಿ, ಮನೆಯಿಂದ ಹೊರಬಂದು ಮತದಾನ ಮಾಡಿ, ಯೋಗ್ಯ ಅಭ್ಯರ್ಥಿಗೆ ನಿಮ್ಮ ಮತ ದೇಶಕ್ಕೆ ಹಿತ ಎಂಬುದು ಸೇರಿದಂತೆ ವಿವಿಧ ಸಂದೇಶಗಳ ಫಲಕಗಳು ಜಾಥಾದಲ್ಲಿ ಗಮನಸೆಳೆದವು.

        ಜಾಥಾದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಾಥಾದಲ್ಲಿ ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ತಾಪಂ ಇಒ ಜಾನಕಿರಾಮ್, ಡಿಡಿಪಿಐ ಶ್ರಿಧರನ್, ಡಿಎಚ್‍ಒ ಶಿವರಾಜ ಹೆಡೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ನಿಜಾಮುದ್ದೀನ್,ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೆಹಮತ್ ಉಲ್ಲಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಪಿ.ಶುಭಾ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ, ಸಹಕಾರ ಇಲಾಖೆ ಉಪನಿರ್ದೇಶಕಿ ಸುನೀತಾ ಸಿದ್ರಾಮ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಮತ್ತು ನೌಕರರು ಪಾಲ್ಗೊಂಡಿದ್ದರು.

      ಜಾಥಾವು ಜೋಳದರಾಶಿ ದೊಡ್ಡನಗೌಡ ರಂಗಮಂದಿರದಿಂದ ಆರಂಭವಾಗಿ ಮೋತಿ ವೃತ್ತ(ಎಚ್.ಆರ್.ಗವಿಯಪ್ಪ)ದ ಮೂಲಕ ರಾಜಾರಾಜೇಶ್ವರಿ ಚಿತ್ರಮಂದಿರ ಮಾರ್ಗವಾಗಿ ವಯಾ ಕಲ್ಯಾಣ ಜ್ಯುವೆಲರಿ ಮುಖಾಂತರ ಮೋತಿ ವೃತ್ತ ಮತ್ತು ಜೋಳದರಾಶಿ ದೊಡ್ಡನಗೌಡ ರಂಗಮಂದಿರವರೆಗೆ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap