ದಾವಣಗೆರೆ :
ಪ್ರತಿ ವರ್ಷದಂತೆ ನಗರದ ಹೈಸ್ಕೂಲ್ ಮೈದಾನದಲ್ಲಿ ನ.10ರಂದು ಬೆಳಿಗ್ಗೆ 10.30ಕ್ಕೆ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಟಿಪ್ಪು ಸುಲ್ತಾನ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ಪು ಕುರಿತು ಉಪನ್ಯಾಸ ನೀಡಲು ಸಾಹಿತಿಗಳಾದ ತಲಕಾಡು ಚಿಕ್ಕರಂಗೇಗೌಡ, ಮುಕ್ರಂ ಪಾಷಾ, ಛಲವಾದಿ ಸಂಸ್ಥಾನದ ಜ್ಞಾನಪ್ರಕಾಶ್ ಸ್ವಾಮೀಜಿ ಅಥವಾ ಬೆಳ್ಳೂಡಿಯ ಕನಕಗುರುಪೀಠದ ಸ್ವಾಮೀಜಿಗಳು ಇವರಲ್ಲಿ ಒಬ್ಬರನ್ನು ಉಪನ್ಯಾಸಕರಾಗಿ ಆಹ್ವಾನಿಸಲಾಗುವುದು ಎಂದರು
ಮುಸ್ಲಿಂ ಸಮಾಜದ ಮುಖಂಡರು ಮಾತನಾಡಿ, ನಗರದಲ್ಲಿ ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಮುಸ್ಲಿಂ ಜನಾಂಗದ ಜನಸಂಖ್ಯೆ ಇದ್ದು ಮುಸ್ಲಿಂ ಸಮಾಜದ ಮುಖಂಡರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲು ಮನವಿ ಮಾಡಿದರು. ಹಾಗೂ ಬೈಕ್ ರ್ಯಾಲಿಗೆ ಅವಕಾಶ ನೀಡಬೇಕೆಂದರು.
ತಂಜಮೀನ್ ಮುಸ್ಲಿಂ ಕಮಿಟಿಯ ಅಧ್ಯಕ್ಷರಾದ ಸಾಧಿಕ್ ಪೈಲ್ವಾನ್ ಮಾತನಾಡಿ, ಜಯಂತಿ ಅಂಗವಾಗಿ ಯಾವುದೇ ಮೆರವಣಿಗೆ ಬೇಡ. ಜಿಲ್ಲೆಯಲ್ಲಿ ಬಹಳ ಸೌಹಾರ್ಧ ವಾತಾವರಣವಿದೆ. ಜಿಲ್ಲಾಡಳಿತದ ಕರೆಗೆ ಓಗೊಟ್ಟು ನಾವೆಲ್ಲ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣವೆಂದರು.
ಮುಸ್ಲಿಂ ಮುಖಂಡರೊಬ್ಬರು ಮಾತನಾಡಿ, ಪ್ರತಿ ವರ್ಷದಂತೆ ನಮ್ಮ ಸಮಾಜದ ವತಿಯಿಂದ ವಿವಿಧ ಸ್ಥಳಗಳಲ್ಲಿ ಫಲಾಹಾರ-ಷರಬತ್ತು, ಸಿಹಿ ಹಂಚಿಕೆಗೆ ಅವಕಾಶ ಮಾಡಿಕೊಡಬೇಕೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್, ಈ ರೀತಿ ಹಂಚಿಕೆ ಮಾಡುವ ಸ್ಥಳ ಹಾಗೂ ವ್ಯಕ್ತಿಗಳ ವಿವರವನ್ನು ಮೊದಲೇ ತಿಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಮುಸ್ಲಿಂ ಸಮಾಜದ ಮುಖಂಡರುಗಳಾದ ಅನೀಸ್ ಪಾಷಾ, ಅಮಾನುಲ್ಲಾ, ರಿಜ್ವೀ ಖಾನ್, ಟಾರ್ಗೆಟ್ ಅಸ್ಲಂ, ಟಿಪ್ಪು ಸುಲ್ತಾನ್, ಆದಿಲ್ ಖಾನ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮನ್ಸೂರ್ ಬಾಷಾ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಸಿಪಿಐ ಆನಂದ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ