ಕುಂದುವಾಡ ಕೆರೆ ಒತ್ತುವರಿ ತೆರವಿಗೆ ಆಗ್ರಹ

ದಾವಣಗೆರೆ :

       ನಗರದ ಕುಡಿಯುವ ನೀರಿನ ಮೂಲವಾಗಿರುವ ಕುಂದುವಾಡ ಕೆರೆಯ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದು, ತಕ್ಷಣವೇ ಒತ್ತುವರಿಯನ್ನು ತೆರವುಗೊಳಿಸಿ, ಅಕ್ರಮವಾಗಿ ಕೆರೆ ಜಾಗ ಅತೀಕ್ರಮಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಕೀಲ ಪಿ.ನಿರಂಜನಮೂರ್ತಿ ಆಗ್ರಹಿಸಿದ್ದಾರೆ.

     ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಕುಂದುವಾಡ ಕೆರೆಯ ಜಾಗವನ್ನು ಅಳತೆ ಮಾಡಿ, ಹದ್ದುಬಸ್ತು ಮಾಡದೇ ಒತ್ತುವರಿ ತೆರವುಗೊಳಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಕೆಲ ಪ್ರಭಾವಿಗಳು ಕೆರೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡುವ ಮೂಲಕ ಖಾಸಗಿ ಲೇಔಟ್‍ಗಳನ್ನು ನಿರ್ಮಿಸುತ್ತಿದ್ದಾರೆಂದು ಆರೋಪಿಸಿದರು.

       ನಗರದ ಕುಡಿಯುವ ನೀರಿನ ಮೂಲವಾಗಿರು ಈ ಕೆರೆಯ ಜಾಗವನ್ನು ಅಳತೆ ಮಾಡಿ ಹದ್ದುಬಸ್ತು ಮಾಡುವ ಮೂಲಕ ಕೆರೆಯನ್ನು ಸಂರಕ್ಷಣೆ ಮಾಡುವುದು ಪಾಲಿಕೆಯ ಆದ್ಯ ಕರ್ತವ್ಯವಾಗಿದೆ. ಆದರೆ, ಮಹಾನಗರ ಪಾಲಿಕೆ ಅನುಸರಿಸುತ್ತಿರುವ ವಿಳಂಬ ನೀತಿಯಿಂದಾಗಿ ಒತ್ತುವರಿ ನಡೆಯುತ್ತಿದೆ. ಆದ್ದರಿಂದ ಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಒತ್ತುವರಿ ಆಗಿರುವ ಕೆರೆಯ ಜಾಗವನ್ನು ತೆರವುಗೊಳಿಸಲು ಹಾಗೂ ಕೆರೆ ಜಾಗ ಅತೀಕ್ರಮಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

       ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ತಕ್ಷಣವೇ ಒತ್ತುವರಿ ತೆರವುಗೊಳಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಮದು ತಹಶೀಲ್ದಾರ್ ಸಂತೋಷಕುಮಾರ್ ಮತ್ತು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಅವರುಗಳಿಗೆ ಸೂಚಿಸಿದರು.

      ಹರಿಹರ ತಾಲೂಕಿನ ಹೊಸಬೆಳವನೂರು ಗ್ರಾಮದ ನಿಂಗಪ್ಪ ಮನವಿ ಸಲ್ಲಿಸಿ, ಕೊಟ್ಟಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 5/3 ರಲ್ಲಿ 0.18 ಗುಂಟೆ ಜಮೀನನ್ನು ಹರಿಹರ-ಕೊಟ್ಟೂರು ರೈಲ್ವೆ ಬ್ರಾಡ್‍ಗೇಜ್ ರೈಲು ಮಾರ್ಗ ನಿರ್ಮಾಣಕ್ಕೆ ಭೂ ಸ್ವಾಧೀನ ಪಡಿಸಿಕೊಂಡಿದ್ದು, ಈ ವರೆಗೂ ಪರಿಹಾರ ತಮಗೆ ಯಾವುದೇ ಪರಿಹಾರ ದೊರೆತಿಲ್ಲ. ಆದ್ದರಿಂದ ತಮಗೆ ಪರಿಹಾರ ಕಲ್ಪಿಸಿ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದರು.

        ಇದಕ್ಕೆ ಪ್ರತಿಕ್ರಿಯಿಸಿದ ಎಡಿಸಿ ಪದ್ಮ ಬಸವಂತಪ್ಪ, ತಕ್ಷಣವೇ ಜಮೀನು ಕಳೆದುಕೊಂಡ ರೈತನಿಗೆ ಪರಿಹಾರ ನೀಡುವಂತೆ ಹರಿಹರ ತಾಲೂಕಿನ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಸೂಚಿಸಿದರು.ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ರೈತ ಚಂದ್ರಪ್ಪ ಅರ್ಜಿ ಸಲ್ಲಿಸಿ, ಸಾಲಮನ್ನಾ ವಿಚಾರದಲ್ಲಿ ಹಲವು ಗೊಂದಲಗಳಿವೆ. ಅದನ್ನು ಬಗೆಹರಿಸಿ ಸಾಲಮನ್ನಾ ಮಾಡುವಂತೆ ಮನವಿ ಮಾಡಿದರು.

       ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ, ಸಾಲಮನ್ನಾದ ಪ್ರಕ್ರಿಯೆ ಇನ್ನೂ ಹಂತ ಹಂತವಾಗಿ ನಡೆಯುತ್ತಿದೆ. ಅಗತ್ಯ ದಾಖಲೆಗಳನ್ನು ಬ್ಯಾಂಕ್ ಶಾಖೆಗೆ ಒದಗಿಸಿ ಅಲ್ಲಿಯೇ ನಿಮ್ಮ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 17ನೇ ವಾರ್ಡ್‍ನ ಎಂ.ಬಿ ಕೇರಿಯ ನಿವಾಸಿಗಳು, ಎಂ.ಬಿ ಕೇರಿಯ ವಸತಿ ಪ್ರದೇಶದಲ್ಲಿ ಹಳೇ ಕಟ್ಟಡ ತೆರವುಗೊಳಿಸಿ ಹೊಸದಾಗಿ ನಿರ್ಮಿಸಿರುವ ಕಟ್ಟಡದಲ್ಲಿನ ವ್ಯಾಯಾಮ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ, ಅಲ್ಲಿ ಅಂಗನವಾಡಿ ಅಥವಾ ಹೊಲಿಗೆ ತರಬೇತಿ ಕೇಂದ್ರ ಸ್ಥಾಪಿಸಬೇಕು. ಇಲ್ಲವೇ ಇತರೆ ಉದ್ದೇಶಕ್ಕೆ ಬಳಕೆ ಮಾಡಬೇಕೆಂದು ಮನವಿ ಮಾಡಿದರು.

       ಕೆ.ಟಿ.ಜಿ ನಗರದ ನಿವಾಸಿ ಮಾದೇವಿ ವಿಧವಾ ವೇತನ ಮಂಜೂರು ಮಾಡುವಂತೆ ಮನವಿ ಮಾಡಿದರು. ಜಗಳೂರು ತಾಲೂಕಿನ ಪಲ್ಲಾಗಟ್ಟೆ ಗ್ರಾಮದ ಪೂಜಾರ್ ತಿಮ್ಮಪ್ಪ ಹಕ್ಕುಪತ್ರದ ರಿ.ಸ.ನಂ. 94 ರಲ್ಲಿ ಇರುವ 4ನೇ ನಿವೇಶನವನ್ನು ಗುರುತುಪಡಿಸಿ 30*40 ಅಡಿಗಳುಳ್ಳ ನಿವೇಶಕ್ಕೆ ಕಲ್ಲು ನೆಟ್ಟು ಹದ್ದುಬಸ್ತು ಮಾಡಿಕೊಡುವಂತೆ ಮನವಿ ಮಾಡಿದರು.

        ದಾವಣಗೆರೆ ವಿಜಯನಗರ ಬಡಾವಣೆಯ 2ನೇ ಕ್ರಾಸ್ ನಿವಾಸಿ ಗೋಪಾಲಮ್ಮ, ತಮ್ಮ ವಿಕಲಚೇತನ ಮಗಳಿಗೆ ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಖಾಯಂ ಕೆಲಸ ಕೊಡಿಸಿಕೊಡುವಂತೆ ಮನವಿ ಮಾಡಿದರು.ಮಲೆಬೆನ್ನೂರಿನ ಮುಸ್ಲಿಂ ಸಮುದಾಯದ ಶಾದಿಮಹಲ್ ವಿವಿಧ ಕಾರ್ಯಗಳಿಗೆ ಬಾಡಿಗೆಗೆ ನೀಡಲಾಗುತ್ತಿದೆ, ಆದರೆ, ರಸೀದಿ ಕೇಳಿದರೆ ನೀಡುತ್ತಿಲ್ಲ. ಬಾಡಿಗೆಯ ಹಣವನ್ನು ವಂಚಿಸುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಭ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರ್ ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link