ಹೋಳಿಯ ರಂಗಿನಾಟದಲ್ಲಿ ಮಿಂದೆದ್ದ ದೇವನಗರಿ

ದಾವಣಗೆರೆ:

     ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ದೇವನಗರಿ ಅಕ್ಷರಸಹ ರಂಗಿನಾಟದಲ್ಲಿ ಮಿಂದೆದ್ದಂತೆ ಭಾಸವಾಗುತಿತ್ತು.
ಹೌದು… ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕಾಮ ದಹನ ಮಾಡಿದ್ದ ಯುವ ಸಮೂಹ, ಬುಧವಾರ ಬೆಳ್ಳಂ ಬೆಳಿಗ್ಗೆಯಿಂದಲೇ ರಂಗಿನಾಟದಲ್ಲಿ ಮಿಂದೆದ್ದರು.

     ಹೋಳಿ ಹಬ್ಬದ ಓಕುಳಿಯ ಹಿನ್ನೆಲೆಯಲ್ಲಿ ಪುಟಾಣಿ ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬದ ಶುಭಾಷಯ ವಿನಿಮಯಿಸಿಕೊಳ್ಳುತ್ತಿದ್ದ ದೃಶ್ಯ ನಗರದೆಲ್ಲೆಡೆ ಸಾಮಾನ್ಯವಾಗಿತ್ತು. ಈಗಾಗಲೇ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷೆ ಬಯಲು ತೆರಳಿದ ವಿದ್ಯಾರ್ಥಿಗಳು ಯಾರದರೂ ಬಂದು ಬಣ್ಣ ಎರಚಿದರೆ ಏನು ಮಾಡುವುದು ಎಂಬ ದುಗುಡದಲ್ಲಿಯೇ ಪರೀಕ್ಷಾ ಕೇಂದ್ರ ಸೇರಿದರು.

    ಇನ್ನೂ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬೈಕ್‍ಗಳ ಸೈಲನ್ಸ್‍ರ್ ಕಿತ್ತು ಕರ್ಕಶ ಶಬ್ದ ಮಾಡುತ್ತಾ, ಬೈಕ್‍ಗಳಲ್ಲಿ ಜಾಲಿ ರೇಡ್ ಮಾಡುತ್ತಿದ್ದ ಹಾಗೂ ಹೆಲ್ಮೇಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಯುವಕರನ್ನು ಸಂಚಾರಿ ಪೊಲೀಸರು ತಡೆದು ಬೈಕ್‍ಗಳನ್ನು ಬಡಾವಣೆ ಠಾಣೆಗೆ ತೆಗೆದುಕೊಂಡು ಹೋಗಿ ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

    ಪ್ರತಿವರ್ಷದಂತೆ ಈ ಬಾರಿಯೂ ಬಣ್ಣದ ಆಟಕ್ಕೆ ಇಲ್ಲಿ ವೈಶಿಷ್ಟ ಪೂರ್ಣ ಮೆರಗು, ಸಂಭ್ರಮದ ವಾತಾವರಣ ಎಲ್ಲೆಲ್ಲೂ ಮನೆ ಮಾಡಿತ್ತು. ನಗರದ ರಾಮ್ ಅಂಡ್ ಕೋ ವೃತ್ತ, ಎಂಸಿಸಿ ಎ ಬ್ಲಾಕ್, ಲಾಯರ್ ರಸ್ತೆ, ಯಲ್ಲಮ್ಮ ನಗರ, ವಿನೋಬ ನಗರ, ಕೀರ್ತಿ ನಗರ, ಅಣ್ಣನಗರ, ವಿದ್ಯಾನಗರ, ನಿಟುವಳ್ಳಿ, ಕೆಟಜಿ ನಗರ, ಮೌನೇಶ್ವರ ಬಡಾವಣೆ, ದೇವರಾಜ ಅರಸು ಬಡಾವಣೆ, ವಿನಾಯಕ ನಗರ, ಎಸ್‍ಪಿಎಸ್ ನಗರ, ಎಸ್.ಎಂ.ಕೃಷ್ಣ ನಗರ, ಶೇಖರಪ್ಪ ನಗರ, ಜಾಲಿ ನಗರ, ಹೊಂಡ ಸರ್ಕಲ್, ಮಂಡಿಪೇಟೆ, ದುಗ್ಗಮ್ಮ ಪೇಟೆ, ಕುರುಬರ ಕೇರಿ, ಪಿಜೆ ಬಡಾವಣೆ, ಕೆಇಬಿ ಬಡಾವಣೆ, ಶಿವಕುಮಾರಸ್ವಾಮಿ ಬಡಾವಣೆ, ನಿಜಲಿಂಗಪ್ಪ ಬಡಾವಣೆ, ಆಂಜನೇಯ ಬಡಾವಣೆ, ಸಿದ್ದವೀರಪ್ಪ ಬಡಾವಣೆ, ಹಳೇ ದಾವಣಗೆರೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಹಳದಿ, ಕೆಂಪು, ಹಸಿರು, ನೀಲಿ, ಗುಲಾಬಿ, ಕೇಸರಿ ಹೀಗೆ ತರಹೇವಾರಿ ಬಣ್ಣಗಳಲ್ಲಿ ಓಕುಳಿ ಆಡುವುದರಲ್ಲಿ ತಲ್ಲೀನರಾಗಿರುವುದು ಕಂಡು ಬಂತು.

   ಗೆಳೆಯರಿಗೆ, ಗೆಳಿತಿಯರಿಗೆ, ಸ್ನೇಹಿತರ ಗುಂಪುಗಳು ಬಣ್ಣ ಎರಚಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪುರುಷರು, ಮಹಿಳೆಯರು, ಪುಟಾಣಿಗಳು ಹೀಗೆ ಜಾತಿ, ಲಿಂಗ, ಭೇದ ಮರೆತು ಎಲ್ಲರೂ ಬಣ್ಣದಾಟದಲ್ಲಿ ಮಿಂದೆದ್ದರು. ಅದರಲ್ಲೂ ಚಿಣ್ಣರಂತು ಪಿಚಕಾರಿಗಳನ್ನು ಹಿಡಿದು, ಎದುರು ಬಂದವರ ಮೇಲೆ ರಂಗು ಎರುಚಿ ಸಂಭ್ರಮಿಸಿದರು.

    ಇನ್ನೂ ರಾಂ ಆಡ್ ಕೋ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವಕ-ಯುವತಿಯರು ಡಿಜೆಯಿಂದ ಹೊರಬರುತ್ತಿದ್ದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಅಲ್ಲದೇ, ಪರಸ್ಪರ ನೆತ್ತಿಗಳ ಮೇಲೆ ಗೊತ್ತಾಗದಂತೆಯೇ ಮೊಟ್ಟೆ ಕುಕ್ಕಿ ಕೇಕೆ ಹಾಕುತ್ತಾ, ಅಂಗಿ ಕಳಚಿ ತೂರಾಡುತ್ತಿದ್ದ ದೃಶ್ಯವಂತು ನಯನ ಮನೋಹರವಾಗಿತ್ತು.

     ಮಧ್ಯಾಹ್ನ 12 ಗಂಟೆಯ ನಂತರ ರಾಮ್ ಆಂಡ್ ಕೋ ವೃತ್ತ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಎತ್ತರದಲ್ಲಿ ಹೋಳಿಯ ರಂಗು ತುಂಬಿದ್ದ ಮಡಕೆ ಕಟ್ಟಿ, ಆ ಮಡಕೆ ಹೊಡೆಯುವ ಸ್ಪರ್ಧೆಯೂ ಅಲಲ್ಲಿ ಕಂಡು ಬಂತು. ಬಣ್ಣದಲ್ಲಿ ಮಿಂದೆದ್ದ ಯುವ ಗುಂಪುಗಳು ಬೈಕ್‍ಗಳ ಏರಿ ಕರ್ಕಶ ಶಬ್ಧಗಳನ್ನು ಮಾಡುತ್ತಾ, ಕೇಕೆ ಹಾಕಿ ಸಾರ್ವಜನಿಕರು ಅವರತ್ತ ತಿರುಗು ನೋಡುವಂತೆ ಆಕರ್ಷಿಸುತ್ತಿದ್ದ ದೃಶ್ಯ ರಸ್ತೆಗಳಲ್ಲಿ ಸಾಮಾನ್ಯವಾಗಿತ್ತು. ಯುವಕರು ಮುಖಕ್ಕೆ ಮಾಸ್ಕ್, ವಿಭಿನ್ನ ಶೈಲಿಯ ಗಾಗಲ್ ಧರಿಸಿ ಫೋಜು ಕೊಡುವುದು ಸಹ ಅಲ್ಲಲ್ಲಿ ಕಂಡು ಬಂತು.

    ಈ ಬಾರಿಯ ಹೋಳಿ ಹಬ್ಬದಲ್ಲಿ ಸೆಲ್ಫೀ ಕ್ರೇಜ್ ಕೂಡ ಜೋರಾಗಿತ್ತು. ಯುವಕ, ಯುವತಿಯರು ಬಣ್ಣದಾಟದ ಸಡಗರವನ್ನು ತಮ್ಮ ಮೊಬೈಲ್‍ಗಳಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕೊರೋನಾ ವೈರಸ್ ಭೀತಿಯಿಂದ ಈ ಬಾರಿ ರಾಸಾಯನಿಕ ಬಣ್ಣಗಳ ಹಾವಳಿ ಅಷ್ಟಾಗಿ ಕಂಡುಬರಲಿಲ್ಲ. ಆದರೂ ಸ್ನೇಹಿತರ ತಲೆ ಮೇಲೆ ಮೊಟ್ಟೆ ಕುಕ್ಕುವವರಿಗೇನು ಕೊರತೆ ಇರಲಿಲ್ಲ. ಕೊನೆಕೊನೆಗೆ ಶರ್ಟ್, ಬನಿಯನ್ ಹರಿಯುವಂತಹ ಹುಚ್ಚಾಟಗಳಿಗೇನೂ ಮಿತಿ ಇರಲಿಲ್ಲ.

    ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಥಂಡಾ ಹೊಡೆದಿತ್ತು. ಬಹುತೇಕ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಗುರುತು ಸಿಗದಂತೆ ಬಣ್ಣದಲ್ಲಿ ಮಿಂದೆದ್ದಿರುವ ಜನರನ್ನು ಹೊರತುಪಡಿಸಿದರೆ, ಮಧ್ಯಾಹ್ನದವರೆಗೂ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಸ್ನಾನಕ್ಕಾಗಿ ಕೆಲವರು ಮನೆ ಹಾದಿ ಹಿಡಿದರೆ, ಇನ್ನೂ ಕೆಲವರು ಬಾವಿ, ಕೆರೆ, ನಾಲೆಗಳಿಗೆ ಲಗ್ಗೆ ಇಟ್ಟರು.ಹೋಳಿ ಆಚರಣೆ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪ್ರಮುಖ ರಸ್ತೆ, ವೃತ್ತಗಳಲ್ಲಿ ಖಾಕಿಧಾರಿಗಳು ಕಂಡುಬಂದರು. ಗಸ್ತು ವಾಹನಗಳು ಬಿಡುವಿಲ್ಲದೆ ತೀರುಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link