ಪಂಚಮುಖ ಪರಮೇಶ್ವರ ಮೂರ್ತಿಗೆ ಪಂಚನದಿ ಜಲಾಭಿಷೇಕ : ಸಚಿವ ಪರಮೇಶ್ವರನಾಯ್ಕ

ಹೂವಿನಹಡಗಲಿ :

     ನೂತನವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ಪಂಚಮುಖ ಪರಮೇಶ್ವರನ ಮೂರ್ತಿಗೆ ಪಂಚನದಿಗಳ ಜಲಾಭಿಷೇಕವು ನಿತ್ಯನಡೆಯಬೇಕು ಎನ್ನುವುದು ದೈವ ಸಂಕಲ್ಪವಾಗಿದೆ ಎಂದು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

       ಅವರು ಪಟ್ಟಣದ ಹೊರವಲಯ ಹುಲಿಗುಡ್ಡ ಸಮೀಪದ ಪ್ರದೇಶದಲ್ಲಿ 69 ಅಡಿ ಎತ್ತರದ 1.50 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪಂಚಮುಖ ಪರಮೇಶ್ವರ ಪುತ್ಥಳಿ ಪ್ರತಿಷ್ಠಾಫನೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ತುಂಗ, ಭದ್ರ, ಧರ್ಮ, ಕುಮದ್ವತಿ, ವರದಾ ನದಿಗಳ ಸಂಗಮದಿಂದ ಪಂಚಮುಖ ಪರಮೇಶ್ವರ ಮೂರ್ತಿ ಸ್ಥಳಕ್ಕೆ ಪೈಪಲೈನ್ ಮುಖಾಂತರ ನೀರನ್ನು ಹರಿಸುವಂತಹ ಚಿಂತನೆ ಇದ್ದು, ಈಗಾಗಲೇ ಇದೇ ಪ್ರದೇಶದಲ್ಲಿ ಎರಡು ಕೋಟಿ ರೂ ವೆಚ್ಚದ ನೂತನ ಕೆರೆ ನಿರ್ಮಾಣಕ್ಕೂ ಕೂಡಾ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

      1.50 ಕೋಟಿ ರೂ ವೆಚ್ಚದಲ್ಲಿ ಸುಂದರವಾದ ಉದ್ಯಾನವನವನ್ನು ನಿರ್ಮಿಸಲಾಗುವುದು ಎಂದ ಸಚಿವ ಪಿ.ಟಿ.ಪರಮೇಶ್ವರನಾಯ್ಕರು, ಇದು ನನ್ನ ಬಹುದಿನದ ಕನಸಾಗಿತ್ತು. ಈ ರಸ್ತೆಯಲ್ಲಿ ನಾನು ಸಂಚರಿಸುವಾಗಲೆಲ್ಲಾ ಈ ಸ್ಥಳದಲ್ಲಿ ಏನೋ ಒಂದು ಉದ್ಭವವಾಗುವ ಪ್ರೇರಣೆ ನನಗಾಗುತ್ತಿತ್ತು. ಭಗವಂತನ ಕೃಪೆಯಿಂದ ನನಗೆ ಮುಜರಾಯಿ ಇಲಾಖೆ ಸಚಿವ ಸ್ಥಾನ ದೊರೆತಿದ್ದರಿಂದ ಅತಿಶೀಘ್ರದಲ್ಲಿ ಈ ಕಾರ್ಯವನ್ನು ನಿರ್ವಹಿಸಲು ಅನುಕೂಲವಾಯಿತು ಎಂದರು.

     ಕಾಮಗಾರಿ ಪೂರ್ಣಗೊಳಿಸಲು 9 ತಿಂಗಳು ಕಾಲಮಿತಿ ಇದ್ದು, ಅಷ್ಟರೊಳಗೆ ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತೆ ಶಿಲ್ಪಿಗಳಿಗೆ ಸೂಚಿಸಲಾಗಿದೆ ಎಂದರು.

     ಒಟ್ಟು 5 ಕೋಟಿ ರೂ ವೆಚ್ಚದಲ್ಲಿ ಒಂದು ಸುಂದರ ಪ್ರವಾಸಿ ತಾಣವನ್ನಾಗಿ ನಿರ್ಮಿಸಲಾಗುವುದು. ಬಂದಂತಹ ಭಕ್ತಾಧಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.

     ಸಂದರ್ಭದಲ್ಲಿ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಟಿ.ಭರತ್, ಪ್ರೇಮಾ ಪಿ.ಟಿ.ಪರಮೇಶ್ವರನಾಯ್ಕ, ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚೆನ್ನವೀರ ಮಹಾಸ್ವಾಮಿಗಳು, ಶಾಖಾ ಗವಿಮಠದ ಡಾ.ಹಿರಿಶಾಂತವೀರ ಶ್ರೀಗಳು, ಪುರ, ಕಲ್ಮಠದ ಸಿದ್ದವೀರೇಶ ಶ್ರೀಗಳು, ಹಂಪಸಾಗರದ ರುದ್ರಮುನಿ ಶ್ರೀಗಳು, ಹಿರೇಹಡಗಲಿಯ ಸಣ್ಣಹಾಲಪ್ಪ ಶ್ರೀಗಳು, ಬ್ಲಾಕ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಎಂ.ಪರಮೇಶ್ವರಪ್ಪ, ಪುರಸಭೆ ಅಧ್ಯಕ್ಷೆ ಮರ್ದಾನ್‍ಬೀ, ಜಿ.ಪಂ.ಸದಸ್ಯೆ ವೀಣಾಪರಮೇಶ್ವರಪ್ಪ, ಮುಖಂಡರಾದ ವಾರದ ಗೌಸ್‍ಮೊಹಿದ್ದೀನ್, ಹನಕನಹಳ್ಳಿ ಹಾಲೇಶ, ಎಲ್.ಚಂದ್ರನಾಯ್ಕ, ಬಿ.ಹನುಮಂತಪ್ಪ, ಎ.ಕೊಟ್ರೇಶ, ಬಸವನಗೌಡ ಪಾಟೀಲ್. ಡಾ.ಬಿ.ಟಿ.ಫಣಿರಾಜ್, ಸೊಪ್ಪಿನ ಮಂಜುನಾಥ, ತಹಶೀಲ್ದಾರ ರಾಘವೇಂದ್ರರಾವ್, ಮುಜರಾಯಿ ಇಲಾಖೆಯ ಆಗಮ ಪಂಡಿತ ವಿಜಯ್‍ಶಂಕರ್ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link