ಬಳ್ಳಾರಿ
ಕೈಗಾರಿಕೆಗಳ ಬೆಳವಣಿಗೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಕಾರ ಅಗತ್ಯ, ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳ ಸಭಾಂಗಣದಲ್ಲಿ ಶುಕ್ರವಾರರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಂಪರ್ಕ ಮತ್ತು ಬೆಂಬಲ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಮಂತ್ರಿಯವರು ಸಪೋರ್ಟ್ ಅಂಡ್ ಔಟ್‍ರೀಚ್ ಕಾರ್ಯಕ್ರಮವನ್ನು ಘೋಷಿಸಿದ್ದು, 100 ಜಿಲ್ಲೆಗಳಲ್ಲಿ ಬಳ್ಳಾರಿ ಜಿಲ್ಲೆಯೂ ಸಹ ಸೇರ್ಪಡೆಯಾಗಿರುವುದು ಸಂತೋಷದ ವಿಷಯ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವುದರಿಂದ ಉದ್ಯೋಗ ಸೃಷ್ಠಿ ಹಾಗೂ ಆರ್ಥಿಕ ಬೆಳವಣಿಗೆ ಕಾಣಬಹುದು. ಅತೀ ಕಡಿಮೆ ಸಾಲವನ್ನು ಪಡೆದು ಕ್ರಮೇಣವಾಗಿ ಕಂತಿನ ರೂಪದಲ್ಲಿ ಮರು ಪಾವತಿ ಮಾಡುವವರು ಸಣ್ಣ ಉದ್ದಿಮೆದಾರರು.
ಇವರಿಗೆ ಪ್ರೋತ್ಸಾಹ ನೀಡಲು ಬ್ಯಾಂಕ್ ಅಧಿಕಾರಿಗಳು ಮುಂದಾಗಬೇಕು. ಇದರಿಂದ ಉದ್ದಿಮೆಗಳು ಹಾಗೂ ಉದ್ಯೋಗ ಸೃಷ್ಠಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ವಿವಿಧ ತಾಲೂಕುಗಳಲ್ಲಿ ಉದ್ದಿಮೆ ಸ್ಥಾಪಿಸಲು ಬೇಕಾಗಿರುವ ಮಾರ್ಗದರ್ಶನ ನೀಡಬೇಕು. ಮುಂಡರಗಿ ಮಾಡಲ್ ಟೌನ್‍ಶಿಪ್‍ನಲ್ಲಿ 40 ಎಕರೆಗೆ ಉದ್ದಿಮೆಗೆ ಕಾಯ್ದಿರಿಸಲಾಗಿದೆ, ಸುಮಾರು 150-200 ಯುನಿಟ್‍ಗಳಿಗೆ ಸದಾವಕಾಶ ನೀಡಲಾಗುತ್ತದೆ ಎಂದರು.
ನ್ಯಾಷನಲ್ ಪ್ರೋಡೆಕ್ಟಿವಿಟಿ ಕೌನ್ಸಿಲ್‍ನ ಡೆರೆಕ್ಟರ್ ಜನರಲ್ ಡಾ.ಅಮಿತಾ ಪ್ರಸಾದ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಫಲಾನುಭವಿಗಳಿಗೆ ಅಗತ್ಯವಾದ ಸ್ಕೀಲ್ಸ್ ನೀಡಬೇಕಾಗಿದೆ. ಜಿಲ್ಲೆಯ ವಿವಿಧ ಉದ್ದಿಮೆಗಳಿಗೆ ಭೇಟಿ ನೀಡಿದಾಗ ಮಹಿಳೆಯರು ಉದ್ದಿಮೆಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸಲಿದ್ದಾರೆ.
ಅತಹವರಿಗೆ ಅಗತ್ಯ ಮಾಹಿತಿ, ತಂತ್ರಜ್ಞಾನದ ಮಾಹಿತಿ ನೀಡಿ ಪ್ರೋತ್ಸಾಹ ನೀಡಬೇಕು ಎಂದು ಹೇಳಿದ ಅವರು ಒಂದೇ ಸೂರಿನಡಿನಲ್ಲಿ ಎಲ್ಲಾ ಮಾಹಿತಿಯನ್ನು ಸಿಗುವಂತಹ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಉದ್ದಿಮೆದಾರರು ಮತ್ತು ಆಸಕ್ತ ಫಲಾನುಭವಿಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಲೀಡ್ ಬ್ಯಾಂಕ್ ಮ್ಯಾನೇಜರ್ ಗೋಪಾಲಕೃಷ್ಣ ಅವರು ಪ್ರಸ್ತಾವಿಕವಾಗಿ ಮಾತನಾಡಿ ಉದ್ದಿಮೆಗಳಿಗೆ ಪ್ರಾರಂಭಿಸಿಲು ಮತ್ತು ಸಾರ್ವಜನಿಕರಿಗೆ ಬ್ಯಾಂಕ್‍ಗಳಿಂದ ದೊರೆಯಲಿರುವ ವಿವಿಧ ಯೋಜನೆಗಳ ಸೌಲಭ್ಯಗಳ ಕುರಿತು ಸಂಕ್ಷಿಪ್ತವಾಗಿ ಈ ಸಂದರ್ಭದಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥಗೌಡ, ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಸೇರಿದಂತೆ ಫಲಾನುಭವಿಗಳು ಮತ್ತು ಇತರರು ಇದ್ದರು. ಈ ಸಂದರ್ಭದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ವಿವಿಧ ಬ್ಯಾಂಕ್‍ಗಳಿಂದ ಮಂಜೂರಾಗಿರುವ ಬ್ಯಾಂಕ್ ಸಾಲದ ಅನುಮೋದನೆ ಪತ್ರವನ್ನು ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
