ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮರ್ಪಕ ಚುನಾವಣಾ ವೆಚ್ಚ ನಿರ್ವಹಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು, ಅಭ್ಯರ್ಥಿಗಳ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಏಜೆಂಟರ್‍ಗಳೊಂದಿಗೆ ಸಭೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಸಮರ್ಪಕ ಚುನಾವಣಾ ವೆಚ್ಚ ನಿರ್ವಹಣೆಯನ್ನು ಯಾವ ರೀತಿಯಲ್ಲಿ ಮಾಡಬೇಕು ಮತ್ತು ಪ್ರತಿನಿತ್ಯ ವರದಿಯನ್ನು ಹೇಗೆ ಸಲ್ಲಿಸಬೇಕು. ಶಾಡೋ ರಿಜಿಸ್ಟರ್ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳ ಕುರಿತು ಚುನಾವಣಾ ವೆಚ್ಚ ವೀಕ್ಷಕರಾದ ಅನಿತಾ ಮಹಾದಾಸ್ ಮತ್ತು ಮನ್ವೀಶಕುಮಾರ್ ಅವರು ಸಭೆಯಲ್ಲಿ ವಿವರವಾಗಿ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಭ್ಯರ್ಥಿಗಳು ಯಾವುದಾದರೂ ಚುನಾವಣಾ ಖರ್ಚಿಗೆ ಸಂಬಂಧಿಸಿದಂತೆ 10 ಸಾವಿರ ರೂ.ಗಳಿಂತ ಹೆಚ್ಚು ಹಣ ಪಾವತಿ ಮಾಡಬೇಕಾದ ಸಂದರ್ಭದಲ್ಲಿ ನಗದು ರೂಪದಲ್ಲಿ ಹಣ ಯಾವುದೇ ಕಾರಣಕ್ಕೂ ಸಂದಾಯ ಮಾಡುವಂತಿಲ್ಲ; ಕಡ್ಡಾಯವಾಗಿ ಚೆಕ್ ರೂಪದಲ್ಲಿಯೇ ಭರಿಸಬೇಕು ಎಂದು ಸೂಚಿಸಿದರು.
ಚುನಾವಣಾ ಖರ್ಚಿಗೆ ಸಂಬಂಧಿಸಿದಂತೆ ಪ್ರತ್ಯೇಕ ಖಾತೆಯನ್ನು ನೀಡಬೇಕು. ಅದರ ಮೂಲಕವೇ ತಮ್ಮ ಚುನಾವಣಾ ಸಂಬಂಧಿತ ಎಲ್ಲ ವ್ಯವಹಾರಗಳನ್ನು ನಡೆಸಬೇಕು ಮತ್ತು ಅದರ ವಿವರವನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ದೇಣಿಗೆ ರೂಪದಲ್ಲಿ ಯಾವುದೇ ಕಾರಣಕ್ಕೂ 10 ಸಾವಿರಕ್ಕಿಂತ ಹೆಚ್ಚು ಹಣವನ್ನು ನಗದು ರೂಪದಲ್ಲಿ ಅಭ್ಯರ್ಥಿಗಳು ಸ್ವೀಕರಿಸದೇ ಅದನ್ನು ಚೆಕ್ ಮತ್ತು ಡಿಡಿ ರೂಪದಲ್ಲಿ ಸ್ವೀಕರಿಸಬೇಕು. ತಾವು ನಡೆಸುವ ಪ್ರತಿಯೊಂದು ಖರ್ಚು-ವೆಚ್ಚಕ್ಕೂ ಪ್ರತ್ಯೇಕ ವಹಿ ನಿರ್ವಹಣೆ ಮಾಡಿ ಅದರ ವಿವರಗಳನ್ನು ನಿಗದಿಪಡಿಸಿದ ಅವಧಿಯೊಳಗೆ ವೆಚ್ಚ ಕೋಶಕ್ಕೆ ಸಲ್ಲಿಸುತ್ತಿರಬೇಕು ಎಂದು ಹೇಳಿದ ಅವರು, ಅಭ್ಯರ್ಥಿಗಳ ಖರ್ಚಿಗೆ 70 ಲಕ್ಷ ರೂ.ಗಳ ಮಿತಿಯಿದೆ ಎಂಬುದನ್ನು ಅವರು ತಿಳಿಸಿಕೊಟ್ಟರು.
ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಚುನಾವಣಾ ವೆಚ್ಚ ನಿರ್ವಹಣೆ ಕುರಿತು ವಿವರಿಸಿದರು.
ಚುನಾವಣಾ ವೆಚ್ಚ ಕೋಶದ ನೋಡಲ್ ಅಧಿಕಾರಿಗಳಾದ ಚೆನ್ನಪ್ಪ ಮತ್ತು ಡಾ.ಸುನೀತಾ ಸಿದ್ರಾಮ್ ಅವರು ವೆಚ್ಚಕ್ಕೆ ಸಂಬಂಧಿಸಿದಂತೆ ನೆರೆದಿದ್ದವರಿಗೆ ವಿವರವಾಗಿ ತಿಳಿಸಿಕೊಟ್ಟರು.ಸಭೆಯಲ್ಲಿ ಕಾಂಗ್ರೆಸ್,ಬಿಎಸ್ಪಿ,ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪ್ರತಿನಿಧಿಗಳು, ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು, ಏಜೆಂಟರುಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
