ಕಾರ್ಣಿಕ ನುಡಿ-ಗೊಂದಲಬೇಡ : ಸಚಿವ ಪರಮೇಶ್ವರನಾಯ್ಕ

ಹೂವಿನಹಡಗಲಿ
 
         ಇದೇ ತಿಂಗಳ 22 ರಂದು ನಡೆಯುವ ಈ ಭಾಗದ ಪ್ರಸಿದ್ಧ ಜಾತ್ರೆಯಾದ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ನುಡಿಯಲ್ಲಿ ಹಿಂದಿನ ವರ್ಷ ಕೆಲವು ಗೊಂದಲಗಳು ಉಂಟಾಗಿ ಭಕ್ತರಲ್ಲಿ ಬೇಸರ ಮೂಡಿಸಿತ್ತು. ಆ ರೀತಿಯಾಗದಂತೆ ದೇವಸ್ಥಾನ ಸಮಿತಿ, ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕೆಂದು ಕೌಶಲ್ಯಾಭಿವೃದ್ದಿ ಮತ್ತು ಮುಜರಾಯಿ ಖಾತೆ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
        ಅವರು ಮೈಲಾರ ಗ್ರಾಮದಲ್ಲಿ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾರ್ಣಿಕ ನುಡಿಯುವ ಗೊರವಪ್ಪನು ಬಿಲ್ಲನ್ನೇರಿ ಕಾರ್ಣಿಕ ನುಡಿಯುವಾಗ ಉದ್ದನೆಯ ಕೋಲಿಗೆ ಮೈಕನ್ನು ಕಟ್ಟಿ, ಕಾರ್ಣಿಕ ನುಡಿ ಸ್ಪಷ್ಟವಾಗಿ ಭಕ್ತಾಧಿಗಳಿಗೆ ಕೇಳುವಂತೆ ವ್ಯವಸ್ಥೆ ಮಾಡಬೇಕು ಎಂದರು. ಸಾಧ್ಯವಾದರೆ ಗೊರವಪ್ಪನ ಕೊರಳುಪಟ್ಟಿಗೆ ವಯರ್‍ಲೆಸ್ ಮೈಕ್ ಅಳವಡಿಸುವಂತೆ ಸೂಚಿಸಿದರು. 
         ಪ್ರತಿವರ್ಷದಂತೆ ಈ ವರ್ಷವು ಕೂಡಾ ಸಂಚಾರದಟ್ಟನೆ ನಿಯಂತ್ರಣ, ಸ್ವಚ್ಚತೆ, ಹಾಗೂ ಕುಡಿಯುವ ನೀರು, ಸೇರಿದಂತೆ ಎಲ್ಲಾ ರೀತಿಯಿಂದಲೂ ಭಕ್ತಾಧಿಗಳಿಗೆ ಅನುಕೂಲವನ್ನು ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೂಕ್ತ ರೀತಿಯಲ್ಲಿ ಪೊಲೀಸ್ ಬಂದೋಬಸ್ತನ್ನು ಒದಗಿಸುವುದು ಸೇರಿದಂತೆ ತಾತ್ಕಾಲಿಕ ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ, ಸ್ವಚ್ಚತೆಗಾಗಿ ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡುವಂತೆ ತಿಳಿಸಿದರು. 
        ತಹಶೀಲ್ದಾರರಾದ ರಾಘವೇಂದ್ರರಾವ್ ಮಾತನಾಡಿ ಈ ವರ್ಷ ವಿಶೇಷ ಎನ್ನುವಂತೆ ಜಾತ್ರಾ ಸಂದರ್ಭದಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕನ್ನು ಬಳಸದಂತೆ ಎಚ್ಚರವಹಿಸಲಾಗುವುದು ಎಂದರು. 
          ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್ ಮನೋಹರ್ ಮಾತನಾಡಿ ಪ್ಲಾಸ್ಟಿಕ್ ನಿಷೇದದ ಮುಂಚಿತವಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ಚಿಂತಿಸಬೇಕು ಎಂದು ಸಲಹೆ ನೀಡಿದರು. ತುಂಗಭದ್ರಾ ನದಿಗೆ ಜಾತ್ರೆಯ ಸಂದರ್ಭದಲ್ಲಿ ನೀರು ಹರಿಸಲು ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರು ಸರ್ಕಾರದ ಮಟ್ಟದಲ್ಲಿ ಅತ್ಯಂತ ಶ್ರಮವಹಿಸಿದ್ದಾರೆ ಎಂದು, ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಜಾತ್ರೆಗೂ 15 ದಿನ ಮುಂಚಿತವಾಗಿ ನದಿಯಲ್ಲಿ ನೀರು ಹರಿಯುತ್ತಿರುವುದರಿಂದ ಜಾತ್ರೆಯನ್ನು ಯಶಸ್ವಿಗೊಳಿಸುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.
            ಇದೇ ಸಂದರ್ಭದಲ್ಲಿ ಕಾರ್ಣಿಕ ನುಡಿಯುವ ಗೊರವಪ್ಪನ ಬದಲಾವಣೆಯ ಬಗ್ಗೆ ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿ, ಈ ವಿಷಯ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಕಾರ್ಣಿಕ ನುಡಿಯುವ ಗೊರವಪ್ಪನ ನುಡಿಯನ್ನು ಒಂದು ದೈವವಾಣಿಎಂದು ನಂಬಿರುವುದರಿಂದ ಅದಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ದೇವಸ್ಥಾನ ಸಮಿತಿ, ಜಿಲ್ಲಾಡಳಿತ, ಹಾಗೂ ಭಕ್ತಾಧಿಗಳ ಕರ್ತವ್ಯ ಆಗಿರುವುದರಿಂದ ಅದನ್ನು ಸೂಕ್ಷ್ಮ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕೆಂದು ಹೇಳಿದರು. 
 
          ಮಧ್ಯ ಪ್ರವೇಶಿಸಿ ಮಾತನಾಡಿದ ಸಚಿವ ಪಿ.ಟಿ.ಪರಮೇಶ್ವರನಾಯ್ಕ, ಈ ಕುರಿತು ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್‍ರವರು ಹೈಕೋರ್ಟ ಮೊರೆ ಹೋಗಿದ್ದು, ಕೋರ್ಟ ನಿರ್ದೇಶನ, ಜಿಲ್ಲಾಧಿಕಾರಿಗಳು, ಮತ್ತು ಜಿಲ್ಲಾದಂಡಾಧಿಕಾರಿಗಳು ಸಮಯಾನುಸಾರವಾಗಿ ಧಾರ್ಮಿಕ ಪರಂಪರೆಗೆ ಧಕ್ಕೆ ಬರದಂತಹ ತೀರ್ಮಾನವನ್ನು ತೆಗೆದುಕೊಳ್ಳಬಹುದು ಎನ್ನುವ ನ್ಯಾಯಾಲಯದ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿಗಳು ಕಾರ್ಣಿಕ ನುಡಿಯುವ ಗೊರವಪ್ಪನ ನೇಮಕದ ಬಗ್ಗೆ ನಿರ್ಧರಿಸಲಿದ್ದಾರೆ, ಧಾರ್ಮಿಕ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ, ಆದಾಗ್ಯೂ ಕೂಡಾ ಮುಜರಾಯಿ ಇಲಾಖೆಯ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
          ಸಾರಿಗೆ ಸಂಚಾರದ ಸುವ್ಯವಸ್ಥೆ, ವಿದ್ಯುತ್ ಸಂಪರ್ಕ, ಸೇರಿದಂತೆ ಭಕ್ತಾಧಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ವಿನಂತಿಸಿದರು. 
 
         ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಜಿ.ಪಂ. ಡಿ.ಎಸ್.-1 ಮುಕ್ಕಣ್ಣ ಕರಿಗಾರ, ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಜಿ.ಪಂ.ಸದಸ್ಯ ಕೊಟ್ರೇಶ್ ಸಿಂಗಟಾಲೂರು, ತಾ.ಪಂ. ಅಧ್ಯಕ್ಷೆ ಶಾರದಮ್ಮ, ತಾ.ಪಂ. ಸದಸ್ಯ ಅಂಬ್ಲಿ ಮಲ್ಲಿಕಾರ್ಜುನ, ಗ್ರಾ.ಪಂ ಅಧ್ಯಕ್ಷೆ ಸರೋಜಮ್ಮ ನಾಗಪ್ಪನವರ್, ಧಾರ್ಮಿಕ ದತ್ತಿ ಇಲಾಖೆಯ ಎಸಿ ಎಸ್.ಪಿ.ಬಿ.ಮಹೇಶ, ಮುಖಂಡರಾದ ಅಟವಾಳಗಿ ಕೊಟ್ರೇಶ, ವಾರದ ಗೌಸ್‍ಮೊಹಿದ್ದೀನ್, ಪ್ರಕಾಶ್ ಒಡೆಯರ್, ಬಿ.ಹನುಮಂತಪ್ಪ, ದೇವಸ್ಥಾನದ ಇ.ಓ. ಪ್ರಕಾಶ್, ಸೇರಿದಂತೆ ಇತರರು ಇದ್ದರು. 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link