ಹಗರಿಬೊಮ್ಮನಹಳ್ಳಿ:
ತಾಲೂಕಿನ ತಂಬ್ರಹಳ್ಳಿಯಲ್ಲಿ ಪ್ರಥಮದರ್ಜೆ ಕಾಲೇಜ್ ಆರಂಭಕ್ಕೆ ಬುಧವಾರ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು .ಕಲಬುರ್ಗಿಯ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಆದೇಶದ ಮೇರೆಗೆ ಹಗರಿಬೊಮ್ಮನಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿಯವರು ಗ್ರಾಮದ ಮುಖಂಡರೊಂದಿಗೆ ಸ್ಥಳ ವೀಕ್ಷಿಸಿದರು. ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾರಂಭಿಸುವ ಬಗ್ಗೆ ಈ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ನಿವೇಶನ, ಅಕ್ಕಪಕ್ಕದ ಪಿಯು ಕಾಲೇಜುಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಇನ್ನಿತರ ವಿಷಯಗಳ ಬಗ್ಗೆ ಗ್ರಾಮದ ಮುಖಂಡರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಆಗಮಿಸಿದವರು ಚರ್ಚಿಸಿದರು.
ಗ್ರಾಮದ ಹಿರಿಯ ಮಾಜಿ ಮಂಡಲ ಪ್ರಧಾನರಾದ ಅಕ್ಕಿ ಕೊಟ್ರಪ್ಪ ಮಾತನಾಡಿ, ತಂಬ್ರಹಳ್ಳಿ ಗ್ರಾಮ ಸೇರಿದಂತೆ, ಹಂಪಸಾಗರ, ಮೋರಿಗೇರಿ ಹಾಗೂ ಬಾಚಿಗೊಂಡನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಯು ಶಿಕ್ಷಣ ಓದುತ್ತಿದ್ದು ಪದವಿ ಶಿಕ್ಷಣಕ್ಕೆ 20 ರಿಂದ 30 ಕಿಮಿ ದೂರವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಶೀಕ್ಷಣ ಮೊಟಕುಗೊಳ್ಳುತ್ತದೆ. ಈ ಗ್ರಾಮದಲ್ಲಿ 2.55 ಎಕರೆ ಸರ್ಕಾರಿ ಜಮೀನು ಇದ್ದು, ಇಲ್ಲಿಯೇ ಡಿಗ್ರಿ ಕಾಲೇಜು ಪ್ರಾರಂಭಿಸುವುದಾದರೆ 8 ಲಕ್ಷ ರೂ ದೇಣಿಗೆ ಅಥವಾ ವೃತ್ತಿಪರ ಶಿಕ್ಷಣ(ಡಿಪ್ಲೋಮ) ಪ್ರಾರಂಭಿಸಿದರೆ 25ಲಕ್ಷ ದೇಣಿಗೆ ನೀಡುವುದಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ತಂಬ್ರಹಳ್ಳಿಯು ಹಗರಿಬೊಮ್ಮನಹಳ್ಳಿ ತಾಲೂಕಿನ ಪ್ರಮುಖ ಕಂದಾಯ ಹೋಬಳಿಯಾಗಿದೆ. ತುಂಗಭದ್ರ ಆಣೆಕಟ್ಟಿನ ಪುನರ್ವಸಿತ ಗ್ರಾಮದಲ್ಲಿ ಕಳೆದ 16 ವರ್ಷಗಳಿಂದ ಪದವಿ ಪೂರ್ವ ಕಾಲೇಜು ನಡೆಯುತ್ತಿದ್ದು ಮುಂದಿನ ವಿದ್ಯಾಭ್ಯಾಸಕ್ಕೆ ದೂರದ ಸ್ಥಳಕ್ಕೆ ಹೋಗಬೇಕಾಗಿರುತ್ತದೆ. ಆದ್ದರಿಂದ ಈ ಗ್ರಾಮದಲ್ಲಿ ಸರ್ಕಾರ ಡಿಗ್ರಿ ಕಾಲೇಜು ಶಿಘ್ರವೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಅಕ್ಕಿ ಬಸಮ್ಮ ತೋಟಪ್ಪ ಪದವಿಪೂರ್ವಕಾಲೇಜು, ಕಿನ್ನಾಳ ಗುರುಸಿದ್ದಪ್ಪ ಪೊರಮಾಂಬೆ ಪ್ರೌಢಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ, ಗ್ರಾಮದ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಜರಿದ್ದು ಪರಿಶೀಲನೆ ನಡೆಸಲು ಬಂದಿದ್ದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಲೇಜು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ನೋಡೆಲ್ ಅಧಿಕಾರಿಯಾಗಿ ಹಬೊಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ್, ಪ್ರಾಧ್ಯಪಕರಾದ ಎಚ್.ಈಶಪ್ಪ, ಎ.ಎಂ.ಚಂದ್ರಮೌಳಿ, ಎಂ.ಮಹಾಂತೇಶ್ ಗ್ರಾಪಂ ಸದಸ್ಯ ಗೌರಜ್ಜನವರ ಗಿರೀಶ್, ಮುಖಂಡರಾದ ಟಿ.ವೆಂಕಣ್ಣ, ಕೆ.ಎಂ.ಎಫ್ ಕಾರ್ಯದರ್ಶಿ ಬಡಿಗೇರ ಹುಚ್ಚಪ್ಪ, ದೇವಿಪ್ರಸಾದ್, ಮಂಜುನಾಥ ಪಾಟೀಲ್, ಗಂಗಾವತಿ ಅಜೀಜ್‍ಸಾಬ್, ಕೊಟ್ರೇಶ್ ಕಾಶೀನಾಯ್ಕರ್, ಜಾಕಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
