ಬರ-ನೆರೆ ಪರಿಹಾರ ನೀಡಲು ವಿಫಲವಾದ ಸರ್ಕಾರಗಳ ವಿರುದ್ಧ ರೈತರ ಆಕ್ರೋಶ.!

ಬಳ್ಳಾರಿ:

     ರಾಜ್ಯದಲ್ಲಿ ಒಂದುಕಡೆ ಬರ ಮತ್ತೊಂದು ಕಡೆ ನೆರೆ ಆವರಿಸಿದ್ದರೂ ಸಂತ್ರಸ್ತರಿಗೆ ಸೂಕ್ತ, ಸಮರ್ಪಕ ಪರಿಹಾರ ವಿತರಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿವೆ. ರಾಜ್ಯದಲ್ಲಿ 25 ಬಿಜೆಪಿ ಸಂಸದರಿದ್ದರೂ, ಪ್ರಧಾನಿ ನರೇಂದ್ರ ಮೋದಿ ಬಳಿಗೆ ಹೋಗಿ ಮಾತನಾಡುವ ಶಕ್ತಿಯನ್ನು ಸಹ ಕಳೆದುಕೊಂಡಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತೀಕ್ ಆರೋಪಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಕಡೆ ಬರ, ಮತ್ತೊಂದು ಕಡೆ ನೆರೆಹಾವಳಿ ಎದುರಾಗಿದೆ. 5 ಸಾವಿರ ಹಳ್ಳಿಗಳಲ್ಲಿ ಸುಮಾರು 75 ಸಾವಿರ ಮನೆಗಳು ಕುಸಿದಿವೆ. ಈ ರಾಜ್ಯ ಸರ್ಕಾರ ಸಹ ಗಮನ ಹರಿಸುತ್ತಿಲ್ಲ. ಕೇಂದ್ರ ಸರ್ಕಾರವೂ ಎಚ್ಚೆತ್ತುಕೊಳ್ಳುತ್ತಿಲ್ಲ. ಪರಿಹಾರದ ಅನುದಾನವನ್ನೇ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ಬಿಜೆಪಿ ಸರ್ಕಾರಕ್ಕೆ ರಾಜ್ಯದಿಂದ 25 ಸಂಸದರನ್ನು ನೀಡಲಾಗಿದೆ. ಆದರೂ, ರಾಜ್ಯದಲ್ಲಿ ಆವರಿಸಿರುವ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಳಿಗೆ ತೆರಳಿ ಮಾತನಾಡುವ ಶಕ್ತಿ ಯಾರೊಬ್ಬರಿಗೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಅವರ ಜಿಲ್ಲೆಗಳಲ್ಲೂ ನೆರೆ ಹಾವಳಿ ಎದುರಾಗಿದ್ದರೂ ಅವರೂ ಸಹ ಪ್ರಧಾನಿ ಗಮನಕ್ಕೆ ತಾರದಿರುವುದು ವಿಪರ್ಯಾಸವೇ. ಅಲ್ಲದೇ, ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಅವರು ಸಹ ಒಮ್ಮೆ ನೆರೆ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಜತೆಗೆ ಕೇಂದ್ರದಿಂದ ಆಗಮಿಸಿದ್ದ ತಂಡವೊಂದು ಸಹ ಭೇಟಿ ನೀಡಿ 33 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ವರದಿ ನೀಡಿದೆ. ಇಷ್ಟೆಲ್ಲ ಆದರೂ, ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಈಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದಾಗ ಈ ಬಗ್ಗೆ ಘೋಷಣೆ ನೀಡಲಿದ್ದಾರೆ ಎಂಬ ಭರವಸೆಯಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

     ನೆರೆಹಾವಳಿಯಿಂದ ಕುಸಿದ ಮನೆಗಳಿಗೆ 10 ಸಾವಿರ ಪರಿಹಾರವೇ ಹೆಚ್ಚು ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡುವುದು ಸರಿಯಲ್ಲ. ಸರ್ಕಾರ ಪರಿಹಾರ ನೀಡುವುದು ಜನರ ದುಡ್ಡನ್ನು. ಅದು ಜನರಿಗೆ ಸೇರಿದರೆ ತಪ್ಪಲ್ಲ. ಅವರು ಈ ರೀತಿ ಮಾತನಾಡುವುದು ತಪ್ಪು. ಕೂಡಲೇ ಮನೆ ಕುಸಿತಕ್ಕೆ 10 ಸಾವಿರ ರೂ. ಬದಲಿಗೆ 25 ಸಾವಿರ ರೂ., ಮನೆಗಳ ನಿರ್ಮಾಣಕ್ಕೆ 5 ಲಕ್ಷ ರೂ. ಬದಲಿಗೆ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

   ಸಂಘದ ನೂತನ ಜಿಲ್ಲಾಧ್ಯಕ್ಷ ಪಿ.ನಾರಾಯಣರೆಡ್ಡಿ ಮಾತನಾಡಿ, ಕಾಲುವೆಗಳಿಗೆ ನೀರು ಬಿಡಲಾಗಿದೆ. ನದಿ ಹಳ್ಳ ಕೊಳ್ಳಗಳಿಗೆ ನೀರು ಬಂದಿದೆ. ಈಗ ಸಸಿ ನಾಟಿ ಕಾರ್ಯ ನಡೆದಿದೆ ಹಾಗಾಗಿ ನೀರಾವರಿ ಪಂಪ್‍ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಸರ್ಕಾರ ಪ್ರತಿದಿನ 10 ತಾಸು ವಿದ್ಯುತ್ ನೀಡುವುದಾಗಿ ಹೇಳಿದೆ.

    ಆದರೆ, ಹಗಲು ವೇಳೆ ಸಮರ್ಪಕವಾಗಿ ಸರಬರಾಜು ಮಾಡದೆ. ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ ಇದರಿಂದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಮಸ್ಯೆಯಾಗುತ್ತದೆ ಎಂದ ಅವರು, ಈ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಅವರು ಸಹ ಅಗತ್ಯಕ್ಕೆ ಬೇಕಾಗುವಷ್ಟು ವಿದ್ಯುತ್ ಲಭ್ಯವಿದೆ. ಹಾಗಾಗಿ ರೈತರಿಗೆ 9 ತಾಸು ವಿದ್ಯುತ್ ನೀಡಲು ಯಾವುದೇ ಸಮಸ್ಯೆಯಿಲ್ಲ. ಈ ಕುರಿತು ಕೂಡಲೇ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

   ಇದಕ್ಕೂ ಮುನ್ನ ಸಂಘದ ಜಿಲ್ಲಾಧ್ಯಕ್ಷರಾಗಿ ನೇಮಕವಾಗಿರುವ ಪಿ.ನಾರಾಯಣರೆಡ್ಡಿ ಅವರಿಗೆ, ರಾಜ್ಯಾಧ್ಯಕ್ಷರು ನೀಡಿದ ಆದೇಶದ ಪ್ರತಿಯನ್ನು ರಾಜ್ಯ ಪ್ರಧಾನಕಾರ್ಯದರ್ಶಿ ಜೆ.ಕಾತೀಕ್ ಅವರು ನೀಡುವ ಮೂಲಕ ಘೋಷಣೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಗೌಡ, ರಾಮಚಂದ್ರಪ್ಪ, ಕೆ.ಸುದರ್ಶನ್, ಕೆ.ವೀರಾರೆಡ್ಡಿ, ದೇವರೆಡ್ಡಿ, ಅಬ್ದುಲ್ ರಫೀಕ್ ಸೇರಿದಂತೆ ಹಲವರು ಇದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link