ಚಳ್ಳಕೆರೆ
ತಾಲ್ಲೂಕಿನ ಮೀಸರಾಬಿಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ಸುಮಾರು 112 ವರ್ಷಗಳ ಇತಿಹಾಸವುಳ್ಳ ರಾಣಿಕೆರೆಯ ಸುಮಾರು ಒಂದೂವರೆ ಕಿ.ಮೀ. ಉದ್ದದ ಕೆರೆಯ ದಂಡೆಯ ಮೇಲೆ ಎರಡೂ ಬದಿಯಲ್ಲಿ ಜಾಲಿಯ ಮುಳ್ಳು ಗಿಡಗಳು ಸೇರಿದಂತೆ ನೂರಾರು ಜಾತಿಯ ಗಿಡಗಳು ಬೆಳೆದಿದ್ದು, ಇನ್ನೂ ಕೆಲವೇ ವರ್ಷಗಳಲ್ಲಿ ದಂಡೆ ಆಪಾಯದಲ್ಲಿ ಸಿಲುಕಿ ಅಪಾರವಾದ ನಷ್ಟ ಸಂಭವಿಸುವ ಆತಂಕವನ್ನು ಗ್ರಾಮಸ್ಥರು ವ್ಯಕ್ತ ಪಡಿಸಿದ್ದಾರೆ.
ಕಳೆದ ಸುಮಾರು 20 ವರ್ಷಗಳಿಂದ ರಾಣಿಕೆರೆಯ ಕೆರೆ ಏರಿಯ ಎರಡೂ ಬದಿಯಲ್ಲಿ ಬೆಳೆದಿರುವ ಮುಳ್ಳು ಹಾಗೂ ಇನ್ನಿತರೆ ಗಿಡಗಳನ್ನು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನಹರಿಸಿ ಅವುಗಳೆಲ್ಲವನ್ನು ಕಿತ್ತು ಹಾಕಿದಲ್ಲಿ ಈ ಸೇತುವೆಗೆ ಯಾವುದೇ ಅಪಾಯ ಎದುರಾಗುತ್ತಿಲ್ಲ. ಆದರೆ, ಗ್ರಾಮಸ್ಥರು ಹಲವಾರು ಬಾರಿ ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯನ್ನು ನಿರಂತರವಾಗಿ ಭೇಟಿ ಮಾಡಿ ಅಪಾಯದ ಬಗ್ಗೆ ಮಾಹಿತಿ ನೀಡಿದರೂ ಸಹ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯೆ ತನದಿಂದ ರಾಣಿಕೆರೆಯ ಸೇತುವೆ ಅಪಾಯಕ್ಕೆ ಸಿಲುಕುವ ಸಂಭವಿದೆ ಎನ್ನಲಾಗಿದೆ. ಜಿಲ್ಲೆಯಲ್ಲೇ ಅತ್ಯಂತ ಹಳೆಯದಾದ ಮತ್ತು ಮೈಸೂರು ಮಹರಾಜರು ನಿರ್ಮಿಸಿ ಈ ಕೆರೆ ಏರಿ ಈಗ ನಿರ್ಲಕ್ಷೆತನಕ್ಕೆ ಈಡಾಗಿ ಯಾವ ಕ್ಷಣದಲ್ಲಾದರೂ ಕೆರೆಯಲ್ಲಿನ ನೀರು ರಂಧ್ರಗಳ ಮೂಲಕ ಹೊರ ಬರುವ ಸಂದರ್ಭವಿದೆ.
ಗ್ರಾಮಸ್ಥರ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ಮಾಹಿತಿ ಸತ್ಯತೆಯಿಂದ ಕೂಡಿದ್ದು, ಕೆರೆ ಏರಿಯ ಎರಡೂ ಬದಿಯಲ್ಲಿ ಎಲ್ಲಂದರಲ್ಲಿ ಗಿಡಗಂಟೆಗಳು ಬೆಳೆದು ಅವುಗಳ ಬೇರುಗಳು ಆಳಾವಾಗಿ ಏರಿಯ ಒಳಗೆ ಹೊಕ್ಕಿದ್ದು, ಕೆರೆಯಲ್ಲಿರುವ ನೀರು ಈ ಬೇರುಗಳ ಮೂಲಕ ಹೊರ ಬಂದಲ್ಲಿ ಕೆರೆಯ ಏರಿಗೆ ಅಪಾಯವಾಗುವ ಸಂಭವ ಹೆಚ್ಚೆಂದು ಗ್ರಾಮಸ್ಥರಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ್, ಎಂ.ಎಸ್.ಮೋಹನ್, ಪ್ರಶಾಂತ್‍ಕುಮಾರ್, ಓಂಕಾರಮೂರ್ತಿ, ಬಸವರಾಜು, ದುರುಗಪ್ಪ, ಪ್ರದೀಪ್, ಮಂಜುನಾಥ, ಚಿದಾನಂದಪ್ಪ, ಆಂಜನೇಯ, ಮಹಲಿಂಗಪ್ಪ ಮುಂತಾದವರು ಆರೋಪಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಕೆರೆ ಏರಿಯ ಈ ಗಿಡಗಳು ಮುಂದಿನ ದಿನಗಳಲ್ಲಿ ಸಂಪೂರ್ಣ ಕೆರೆ ಏರಿಯನ್ನು ಅಸ್ಥಿರಗೊಳಿಸುವ ಸಾಧ್ಯತೆ ಇದ್ದು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮೈಸೂರು ಮಹಾರಾಜರು ಮಹಾರಾಣಿ ಮತ್ತು ಪರಿವಾರದೊಂದಿಗೆ ಈ ಹಿಂದೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆ ತಾಲ್ಲೂಕಿಗೆ ಭೇಟಿ ನೀಡಿದಾಗ ಹಿರಿಯೂರು ಬಳಿಯ ವಾಣಿವಿಲಾಸಪುರದ ಬಳಿ ಅಣೆಕಟ್ಟನ್ನು ನಿರ್ಮಿಸಿ ಅಣೆಕಟ್ಟಿಗೆ ವಾಣಿವಿಲಾಸ ಸಾಗರ ನಾಮಾಂಕಿತ ಮಾಡಿ ನಂತರ ತಾಲ್ಲೂಕಿನ ಮೀರಸಾಬಿಹಳ್ಳಿಯ ಬಳಿ ಇಲ್ಲಿನ ರೈತರ ಕಷ್ಟಗಳನ್ನು ಕಂಡ ಮಹಾರಾಜರು ನೀರು ಪೋಲಾಗದಂತೆ ಈ ಭಾಗದಲ್ಲೂ ಸಹ ಕೆರೆಯನ್ನು ನಿರ್ಮಿಸಿ ರಾಣಿಕೆರೆ ಎಂದು ನಾಮಕರಣ ಮಾಡಿದ್ದರು ಎನ್ನಲಾಗಿದೆ. ನಾಡಿನ ಹೆಸರಾಂತ ಇಂಜಿನಿಯರ್ ಸರ್.ಎಂ.ವಿಶ್ವಶ್ವೇರಯ್ಯನವರ ಯೋಜನೆಯಂತೆ ಈ ಎರಡೂ ಸೇತುವೆಗಳನ್ನು ನಿರ್ಮಿಸಲಾಗಿದೆ ಎನ್ನಲಾಗಿದೆ. ಗ್ರಾಮಸ್ಥರು ತಿಳಿಸುವಂತೆ ಸದರಿ ರಾಣಿಕೆರೆಯ ಕೆರೆ ಅಚ್ಚುಕಟ್ಟು ಕಾಮಗಾರಿ 1907ರಲ್ಲಿ ಮುಕ್ತಾಯಗೊಂಡಿದ್ದು, ಮೈಸೂರು ಸಂಸ್ಥಾಪದ ದಿವಾನರಾಗಿದ್ದ ಮಿರ್ಜ ಎಂ.ಇಸ್ಮಾಯಿಲ್ ಜನವರಿ 1940ರಲ್ಲಿ ಇಲ್ಲಿಗೆ ಭೇಟಿ ನೀಡಿ, ರಾಣೆಕೆರೆಯ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದರು ಎನ್ನಲಾಗಿದೆ.
ಕಳೆದ 1980-90ರ ದಶಕದಲ್ಲಿ ಸದರಿ ರಾಣಿಕೆರೆ ಭರ್ತಿಯಾಗಿದ್ದು, ಆ ಸಂದರ್ಭದಲ್ಲಿ ಮಾತ್ರ ಈ ಭಾಗದ ಸಾವಿರಾರು ರೈತರಿಗೆ ನೀರಾವರಿಯ ಭಾಗ್ಯವನ್ನು ದೇವರೇ ಕರುಣಿಸಿದ್ದ. ಆದರೆ, ಇತ್ತೀಚೆಗೆ ಸುಮಾರು 10 ವರ್ಷಗಳಿಗೂ ಹೆಚ್ಚು ಕಾಲ ಈ ಭಾಗದಲ್ಲಿ ಕಾಲಕಾಲಕ್ಕೆ ಮಳೆಯಾಗದಂದ ಹಿನ್ನೆಲೆಯಲ್ಲಿ ಕೆರೆಯೂ ಸಹ ಬತ್ತಿ ಹೋಗಿತ್ತು. 2017ರಲ್ಲಿ ಸ್ವಲ್ಪ ಉತ್ತಮ ಮಳೆಯಾಗಿದ್ದು ಕೆರೆಯಲ್ಲಿ ನೀರು ಸಂಗ್ರವಾಗಿತ್ತು. ಪ್ರಸ್ತುತ 2018ರಲ್ಲಿ ಮತ್ತೆ ಮಳೆ ಕೈಕೊಟ್ಟಿದ್ದು ಈಗ ಕೆರೆಯಲ್ಲಿ ಕೆಲವೇ ಅಡಿಗಳಷ್ಟು ಮಾತ್ರ ನೀರು ಕೆರೆಯ ತಳಭಾಗದಲ್ಲಿ ನಿಂತಿದೆ. ಈ ನೀರನ್ನು ಸಂರಕ್ಷಣೆ ಮಾಡುವ ಹೊಣೆ ಇಲಾಖೆಯ ಅಧಿಕಾರಿಗಳದ್ದಾಗಿದೆ.
ಪ್ರಸ್ತುತ ರಾಣಿಕೆರೆ ತುಂಬಿ ಹರಿದಲ್ಲಿ ಈ ಭಾಗದ ಸುಮಾರು 82 ಹೆಚ್ಚು ಗ್ರಾಮಗಳಿಗೆ ಸಮೃದ್ಧಿ ನೀರು ಹರಿದು ಈ ಭಾಗದಲ್ಲಿರುವ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ, ರಾಗಿ, ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಮುಂತಾದ ಬೆಳೆಯನ್ನು ಬೆಳೆಯಲು ಅನುಕೂಲವಾಗುತ್ತದೆ. ಅದಲ್ಲದೆ ಹಲವಾರು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಸಂಪೂರ್ಣವಾಗಿ ದೂರವಾಗಲಿದೆ ಎಂಬುವುದು ಗ್ರಾಮಸ್ಥರ ಮಾತು. ರಾಣಿಕೆರೆ ಏರಿಯ ಸೇತುವೆಯನ್ನು ಸಂರಕ್ಷಿಸುವ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆ ತಡೆ ಚಳುವಳಿ ನಡೆಸುವುದಾಗಿ ಗ್ರಾಮದ ಮುಖಂಡರು ತಿಳಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ