ಬೆಂಗಳೂರು
ಅಮಾನ್ಯಗೊಂಡಿರುವ 500 ಹಾಗೂ 1 ಸಾವಿರ ಮುಖ ಬೆಲೆಯ ನೋಟುಗಳನ್ನು ಬದಲಾವಣೆ ಮಾಡಿ ಹೆಚ್ಚಿನ ಹಣ ಕೊಡಿಸುವ ಆಸೆ ಹುಟ್ಟಿಸಿ 10 ಲಕ್ಷ ವಂಚನೆ ನಡೆಸಿ ಪರಾರಿಯಾಗಿದ್ದ ನಾಲ್ವರು ಖದೀಮರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 1 ಕೋಟಿ ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಕೆಆರ್‌ಪುರಂನ ರಾಜೇಂದ್ರಪ್ರಸಾದ್ ಅಲಿಯಾಸ್ ರಾಜೇಂದ್ರ (49),ವಿಲ್ಸನ್‌ಗಾರ್ಡನ್‌ನ ಸುರೇಶ್‌ಕುಮಾರ್ ಅಲಿಯಾಸ್ ಸುರೇಶ್ (40),ಆಡುಗೋಡಿಯ ಶಹನಾವಾಜ್ (45),ದೀಪಾಂಜಲಿ ನಗರದ ಸತೀಶ್ (40)ನಿಂದ ನಿಷೇಧಿತ 500 ಹಾಗೂ 1 ಸಾವಿರ ಮುಖ ಬೆಲೆಯ 1 ಕೋಟಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಮಲ್ಲೇಶ್ವರಂನ 18ನೇ ಕ್ರಾಸ್‌ನ ಟಾಟಾ ಇನ್ಸಿಟಿಟ್ಯೂಟ್‌ನಲ್ಲಿ ಟ್ರಾವೆಲ್ಸ್ ಕೆಲಸಕ್ಕಾಗಿ ಹೋಗಿದ್ದಾಗ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವ ವೇಳೆ ಬಾಗಲೂರು ಕ್ರಾಸ್‌ನ ನಾಗರಾಜ್ ಎಂಬುವರಿಗೆ ಆರೋಪಿ ರಾಜೇಂದ್ರ ಪರಿಚಯವಾಗಿದ್ದ. ಇಬ್ಬರ ನಡುವೆ ಮಾತುಕತೆ ನಡೆದು ನಂಬಿಕೆ ಹುಟ್ಟಿದ ನಂತರ ಆರೋಪಿ ರಾಜೇಂದ್ರ ತನಗೆ ಪರಿಚಯವಿರುವ ವ್ಯಕ್ತಿಯೊಬ್ಬ ನಿಷೇಧಿತ 500 ಹಾಗೂ 1 ಸಾವಿರ ಮುಖಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾವಣೆ ಮಾಡಿಕೊಡುತ್ತಿದ್ದಾನೆ.
2ಲಕ್ಷ ಲಾಭ ಹಂಚಿಕೆ
ಆ ವ್ಯಕ್ತಿಗೆ 1 ಕೋಟಿ ಮೌಲ್ಯದ ನಿಷೇಧಿತ ನೋಟುಗಳಿಗೆ 10 ಲಕ್ಷ ಹೊಸ ನೋಟುಗಳನ್ನು ಕೊಟ್ಟು ಖರೀದಿಸಿದರೆ ನಂತರ ನಿಷೇಧಿತ ನೋಟುಗಳನ್ನು ತಾನೇ ತನಗೆ ಪರಿಚಯವಿರುವ ಮತ್ತೊಬ್ಬ ವ್ಯಕ್ತಿಯ ಕಡೆಯಿಂದ 14 ಲಕ್ಷ ರೂ.ಗಳಿಗೆ ಮಾರಾಟ ಮಾಡಿಸುತ್ತೇನೆ.ಆ ವ್ಯಕ್ತಿಯು ರಿಜ್ವರ್ ಬ್ಯಾಂಕಿನಲ್ಲಿ ಹೊಸ ನೋಟುಗಳಾಗಿ ಬದಲಾಯಿಸಿಕೊಳ್ಳಲಾಗಿದ್ದು, ಈ ವ್ಯವಹಾರದಿಂದ 4 ಲಕ್ಷ ಲಾಭ ಬರಲಿದ್ದು, ಅದರಲ್ಲಿ ಇಬ್ಬರು ತಲಾ 2 ಲಕ್ಷ ತೆಗೆದುಕೊಳ್ಳೋಣ. ಉಳಿದ 12 ಲಕ್ಷವನ್ನು ನಿಮಗೇ ಕೊಡುತ್ತೇನೆ ಎಂದು ಆಸೆ ಹುಟ್ಟಿಸಿದ್ದ.
ನನ್ನ ಬಳಿ ಸಾಕಷ್ಟು ನಿಷೇಧಿತ ನೋಟುಗಳಿದ್ದು, ಅವುಗಳನ್ನು ಬದಲಾಯಿಸಲು ಹಲವರಿದ್ದಾರೆ. ನನಗೆ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಮಧ್ಯವರ್ತಿಗಳ ಮೂಲಕ ಹಣ ಬರುತ್ತದೆ ಎಂದು ನಂಬಿಸಿ ಹೆಚ್ಚಿನ ಹಣದ ಆಸೆ ತೋರಿಸಿ ನಾಗರಾಜು ಹಾಗೂ ಅವರ ಸೋದರ ಸಂಬಂಧಿ ರಾಜಣ್ಣ ಎಂಬುವರನ್ನು ಕಾರ್ಪೊರೇಷನ್‌ನ ಯುನಿಟಿ ಬಿಲ್ಡಿಂಗ್ ಬಳಿಗೆ ಆರೋಪಿ ರಾಜೇಂದ್ರ ಕರೆಸಿಕೊಂಡಿದ್ದ.
10 ಲಕ್ಷ ಪಡೆದಿದ್ದ
ಅಲ್ಲಿ ಇತರ ಬಂಧಿತ ಆರೋಪಿಗಳಾದ ಸುರೇಶ್, ಶಹನಾಜ್, ಸತೀಶ್‌ನನ್ನು ಪರಿಚಯಿಸಿ ಇವರೇ ನಿಷೇಧಿತ ನೋಟುಗಳನ್ನು ಕೊಡಲಿದ್ದಾರೆ ಎಂದು ನಂಬಿಸಿ 10 ಲಕ್ಷ ರೂ.ಗಳನ್ನು ಪಡೆದು 1 ಕೋಟಿ ಮೌಲ್ಯದ ನಿಷೇಧಿತ 500 ಹಾಗೂ 1 ಸಾವಿರ ಮುಖ ಬೆಲೆಯ ನೋಟುಗಳನ್ನು ಕೊಡಿಸಿದ್ದ.ನಂತರ ನಾಗರಾಜ್ ಅವರ ಜತೆ ಸುತ್ತಾಡುತ್ತ ನಿಷೇಧಿತ ನೋಟುಗಳನ್ನು ಗಿರಾಕಿಗಳಿಗೆ ಕೊಟ್ಟು ಹೆಚ್ಚಿನ ಹಣಕ್ಕೆ ಬದಲಾವಣೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಪರಾರಿಯಾಗಿದ್ದ.
ಹಲವು ದಿನಗಳು ಕಳೆದರೂ ಹಳೆಯ ನೋಟುಗಳನ್ನು ಬದಲಾಯಿಸಿ ಕೊಡದಿದ್ದರಿಂದ ಮೋಸ ಹೋಗಿದ್ದ ನಾಗರಾಜ್ ಅವರು ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಇನ್ಸ್‌ಪೆಕ್ಟರ್ ಅಶ್ವತ್ಥ್‌ಗೌಡ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ