ಹೆಲ್ತ್ ಕಾರ್ಡ್: ಜಿಲ್ಲಾ ಆಸ್ಪತ್ರೆಯಲ್ಲಿ 267 ರೋಗಿಗಳಿಗೆ ಚಿಕಿತ್ಸೆ

ತುಮಕೂರು
   
        ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆಯಡಿ 2018 ರ ಡಿಸೆಂಬರ್ 20 ರಿಂದ ಈವರೆಗೆ (2019 ರ ಫೆಬ್ರವರಿ 5 ರವರೆಗೆ) ನೋಂದಾಯಿಸಿಕೊಂಡು `ಹೆಲ್ತ್‍ಕಾರ್ಡ್’ ಪಡೆದುಕೊಂಡಿರುವವರ ಪೈಕಿ 267 ಜನರು ತುಮಕೂರು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
 
          ಈ ಯೋಜನೆಯು ಡಿಸೆಂಬರ್ 20 ರಿಂದ ಚಾಲನೆಗೆ ಬಂದಿದೆ. ಅಂದಿನಿಂದ ಫೆಬ್ರವರಿ 5 ರವರೆಗೆ ತುಮಕೂರು ಜಿಲ್ಲಾ ಆಸ್ಪತ್ರೆಯೊಂದರಲ್ಲೇ ಒಟ್ಟು  1,074 ಜನರು `ಹೆಲ್ತ್‍ಕಾರ್ಡ್’ ಪಡೆದುಕೊಂಡಿದ್ದಾರೆ. ಇದೇ ರೀತಿ ತುಮಕೂರು ನಗರದಲ್ಲಿರುವ `ತುಮಕೂರು ಒನ್’ ಕೇಂದ್ರಗಳಲ್ಲೂ ನೋಂದಾಯಿಸಿಕೊಂಡು, `ಹೆಲ್ತ್ ಕಾರ್ಡ್’ ಪಡೆದುಕೊಂಡವರಿದ್ದಾರೆ. ಒಟ್ಟಾರೆ ಈ ರೀತಿ `ಹೆಲ್ತ್‍ಕಾರ್ಡ್’ ಪಡೆದುಕೊಂಡಿರುವ ಒಟ್ಟು 267 ಜನರು ಈವರೆಗೆ ಈ ಸೌಲಭ್ಯವನ್ನು ಉಪಯೋಗಿಸಿಕೊಂಡಿದ್ದಾರೆ. ಮೂಳೆ ಮುರಿತ, ಸುಟ್ಟಗಾಯಗಳು, ತುರ್ತುಚಿಕಿತ್ಸಾ ಘಟಕದ ಬಳಕೆ ಇದರಲ್ಲಿ ಸೇರಿವೆ. ಬಿ.ಪಿ.ಎಲ್. ಕಾರ್ಡುದಾರರು ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದೆಂಬುದು ಈ ಯೋಜನೆಯ ವೈಶಿಷ್ಟೃ.
ದೈನಿಕ 200 ಟೋಕನ್
       ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ `ಹೆಲ್ತ್ ಕಾರ್ಡ್’ಗಾಗಿಯೇ ಹೊರರೋಗಿಗಳ ವಿಭಾಗದ ಪ್ರವೇಶದ್ವಾರದಲ್ಲಿ ವಿಶೇಷ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ತಾಂತ್ರಿಕ ಹಾಗೂ ಸಿಬ್ಬಂದಿ ವ್ಯವಸ್ಥೆಗೆ ಅನುಗುಣವಾಗಿ ಈಗ ಪ್ರತಿನಿತ್ಯ ಸರಾಸರಿ 200 ಜನರಿಗೆ `ಹೆಲ್ತ್‍ಕಾರ್ಡ್’ಗೆ ಸಂಬಂಧಿಸಿದ ಟೋಕನ್ ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 
         ದಿನವೂ ಬೆಳಗ್ಗೆ 9 ಗಂಟೆಯಿಂದ 9-30 ರವರೆಗೆ ಟೋಕನ್ (ಅರ್ಜಿ) ವಿತರಣೆ ಮಾಡಲಾಗುವುದು. ಅದನ್ನು ಪಡೆದವರು ಆಧಾರ್ ಕಾರ್ಡ್ ಮತ್ತು ಬಿ.ಪಿ.ಎಲ್. ಪಡಿತರ ಕಾರ್ಡ್ ಪ್ರತಿಗಳ ಸಹಿತ ಅರ್ಜಿಯನ್ನು ಭರ್ತಿ ಮಾಡಿಕೊಡಬೇಕು. ಆಧಾರ್ ದೃಢೀಕರಣ ಮತ್ತು ಯಾವುದೇ ಇತರ ಆರೋಗ್ಯ ಯೋಜನೆಯಲ್ಲಿ (ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ, ಕಾರ್ಮಿಕ ರಾಜ್ಯ ವಿಮಾ ಯೋಜನೆ, ಉದ್ಯೋಗದಾತರಿಂದ ನೀಡಲಾದ ಆರೋಗ್ಯ ಯೋಜನೆ, ಖಾಸಗಿ ಆರೋಗ್ಯ ವಿಮೆಗಳು, ರಾಜ್ಯ ಸರ್ಕಾರಿ ನೌಕರರ ನಿಯಮ, ಶಾಸನ ಸಭಾ ಸದಸ್ಯರ ನಿಯಮ) ನೋಂದಣಿಗೊಂಡಿಲ್ಲ ಎಂಬ ದೃಢೀಕರಣವನ್ನು ಈ ಅರ್ಜಿ ಒಳಗೊಂಡಿರುತ್ತದೆ.
        ಪಡಿತರ ಕಾರ್ಡ್‍ನಲ್ಲಿರುವಂತೆ ಒಂದು ಕುಟುಂಬದ ಪ್ರತಿ ಸದಸ್ಯರೂ ಕಡ್ಡಾಯವಾಗಿ ಹಾಜರಿದ್ದು, ಈ ಅರ್ಜಿಯನ್ನು ಭರ್ತಿ ಮಾಡಿ ಸಹಿ ಹಾಕಿ ನೀಡಬೇಕು. ಆ ಬಳಿಕ ಕೌಂಟರ್ ಸಿಬ್ಬಂದಿ ಅದನ್ನು ಮುಂದಿನ ಪ್ರಕ್ರಿಯೆಗೆ ಒಳಪಡಿಸುತ್ತಾರೆ. ಬಳಿಕ ಬಿಳಿ ಹಾಳೆಯಲ್ಲಿ `ಹೆಲ್ತ್ ಕಾರ್ಡ್’ನ ಪ್ರಿಂಟ್ ತೆಗೆದು ಅರ್ಜಿದಾರರಿಗೆ ನೀಡುತ್ತಾರೆ. ಈ ರೀತಿ ಪ್ರಿಂಟ್ ತೆಗೆದುಕೊಡಲು 10 ರೂ. ಶುಲ್ಕ ಭರಿಸಬೇಕು. ಇದು ಈಗ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಪ್ರಕ್ರಿಯೆ.  
`ತುಮಕೂರು ಒನ್’ಗಳಲ್ಲಿ
        ನಗರದ ಚಿಕ್ಕಪೇಟೆ, ಮಹಾನಗರ ಪಾಲಿಕೆ ಆವರಣ, ಶಿರಾಗೇಟ್, ಕ್ಯಾತಸಂದ್ರದಲ್ಲಿರುವ `ತುಮಕೂರು ಒನ್’ ಕೇಂದ್ರಗಳಲ್ಲೂ `ಹೆಲ್ತ್ ಕಾರ್ಡ್’ಗೆ ಸಂಬಂಧಿಸಿದಂತೆ ಇದೇ ರೀತಿಯ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ ಇಲ್ಲಿ `ಹೆಲ್ತ್ ಕಾರ್ಡ್’ನ್ನು ಬಿಳಿ ಹಾಳೆಯ ಬದಲು `ಸ್ಮಾರ್ಟ್ ಕಾರ್ಡ್’ ರೂಪದಲ್ಲಿ ನೀಡುತ್ತಾರೆ. ಹೀಗಾಗಿ ಇಲ್ಲಿ ಇದಕ್ಕೆ 35 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿದೆ ಎನ್ನುತ್ತಿವೆ ಮೂಲಗಳು. 
`ಹೆಲ್ತ್ ಕಾರ್ಡ್’ನಲ್ಲಿರುವ ವಿವರ
       `ಹೆಲ್ತ್‍ಕಾರ್ಡ್’ನ ಪ್ರಕಾರ- “ಆಹಾರ ಭದ್ರತಾ ಕಾಯ್ದೆ-2013”ರ ಅಡಿಯಲ್ಲಿ ಬರುವ ಬಿಪಿಎಲ್ ಪಡಿತರ ಕಾರ್ಡ್ ಅಥವಾ ರಾಷ್ಟ್ರೀಯ ಸ್ವಾಸ್ಥೃಬಿಮಾ ಯೋಜನೆ (ಆರ್.ಎಸ್.ಬಿ.ವೈ.) ಕಾರ್ಡ್ ಹೊಂದಿರುವ ಕುಟುಂಬದ ಫಲಾನುಭವಿಗಳನ್ನು ಅರ್ಹತಾ ರೋಗಿ ಎಂದು ಗುರುತಿಸಲಾಗುತ್ತಿದೆ ಹಾಗೂ ಆರೋಗ್ಯ ಚಿಕಿತ್ಸೆಗಳಿಗೆ ಒಂದು ವರ್ಷಕ್ಕೆ ಐದು ಲಕ್ಷ ರೂಗಳವರೆಗೆ ಒದಗಿಸಲಾಗುವುದು. ಇದನ್ನು ಪ್ರತಿ ಕುಟುಂಬಕ್ಕೆ ಫೆÇ್ಲೀಟರ್ ಆಧಾರದಲ್ಲಿ ಒದಗಿಸಿದ್ದು, ಕುಟುಂಬದ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳು ಸಂಪೂರ್ಣವಾಗಿ ಐದು ಲಕ್ಷದ ಮಿತಿಯ ಸೇವೆಯನ್ನು ಪಡೆದುಕೊಳ್ಳಬಹುದು.
 
         ಬಿ.ಪಿ.ಎಲ್. ಪಡಿತರ ಕಾರ್ಡ್ ಹೊಂದಿಲ್ಲದವರನ್ನು ಸಾಮಾನ್ಯ ರೋಗಿ ಎಂದು ಗುರುತಿಸಲಾಗುತ್ತದೆ. ಇಂಥವರ ಆರೋಗ್ಯ ಚಿಕಿತ್ಸೆಗಳಲ್ಲಿ ಶೇ. 30 ರಷ್ಟನ್ನು ಮಾತ್ರ ಸಹಪಾವತಿ ಆಧಾರದಲ್ಲಿ ಸರ್ಕಾರ ಭರಿಸುತ್ತದೆ. ಇಂಥವರಿಗೆ ವಾರ್ಷಿಕ 1 ಲಕ್ಷ 50 ಸಾವಿರ ರೂ. ಗಳನ್ನು ಸರ್ಕಾರ ಭರಿಸಲಿದೆ.
     ಪ್ರಾಥಮಿಕ ಮತ್ತು ಸಾಮಾನ್ಯ, ದ್ವಿತೀಯ ಹಂತದ ಆರೋಗ್ಯ ಸೇವೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡು ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. 169 ತುರ್ತು ಚಿಕಿತ್ಸಾ ವಿಧಾನಗಳಿಗೆ (ಹೃದಯ ಸಂಬಂಧಿ, ಕ್ಯಾನ್ಸರ್, ಸುಟ್ಟಗಾಯ ಇತ್ಯಾದಿ) ಯಾವುದೇ ರೆಫರಲ್ ಪಡೆಯುವ ಅಗತ್ಯವಿಲ್ಲ. ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂಬ ಪ್ರಮುಖ ಮಾಹಿತಿಗಳನ್ನು ಜಿಲ್ಲಾ ಆಸ್ಪತ್ರೆಯಲ್ಲಿ ನೀಡುವ ಈ ಕಾರ್ಡ್‍ನಲ್ಲಿ ನೀಡಲಾಗಿದೆ.
ಬಿಪಿಎಲ್-ಆಧಾರ್ ಕಾರ್ಡೇ ಮೂಲ
        ಪ್ರಸ್ತುತ ಕೇಂದ್ರ ಸರ್ಕಾರದ “ಆಯುಷ್ಮಾನ್ ಭಾರತ್”ಯೋಜನೆಯ ಹೆಲ್ತ್‍ಕಾರ್ಡ್‍ಗಳು ಫಲಾನುಭವಿಗಳಿಗೆ ನೇರವಾಗಿ ಅಂಚೆ ಮೂಲಕ ತಲುಪುತ್ತಿವೆ. ಆ ಕಾರ್ಡ್‍ನಲ್ಲಿ ಪಡಿತರ ಚೀಟಿಯಲ್ಲಿರುವವರ ಹೆಸರು, ವಯಸ್ಸಿನ ಮಾಹಿತಿ ಇರುತ್ತದೆ. ಇದಿದ್ದರೂ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ” ಯೋಜನೆಯ ಲಾಭ ಪಡೆಯಬಹುದು. ಆದರೂ ಸಾರ್ವಜನಿಕರು ತಮ್ಮ ಬಳಿಯೂ ಒಂದು ಹೆಲ್ತ್ ಕಾರ್ಡ್ ಇರಲೆಂಬ ಆಶಯದಿಂದ “ಹೆಲ್ತ್‍ಕಾರ್ಡ್” ಪಡೆಯತೊಡಗಿದ್ದಾರೆ. ಈ ರೀತಿ ಪಡೆಯುವಾಗ ಪ್ರತಿ ವ್ಯಕ್ತಿಗೂ ಪ್ರತ್ಯೇಕವಾಗಿ ಕಾರ್ಡ್ ನೀಡಲಾಗುತ್ತದೆ.
       ಕೇಂದ್ರದ ಕಾರ್ಡ್, ರಾಜ್ಯ ಸರ್ಕಾರದ ಕಾರ್ಡ್ ಇದ್ದರೂ, ಅಂತಿಮವಾಗಿ ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗುವಾಗ ಮೊದಲಿಗೆ ಆಯಾ ವ್ಯಕ್ತಿಯ ಬಿ.ಪಿ.ಎಲ್. ಕಾರ್ಡ್ ಮತ್ತು ಆಧಾರ್ ಕಾರ್ಡ್‍ಗಳನ್ನೇ ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಒಂದು ವೇಳೆ ಇಂಥ ಹೆಲ್ತ್‍ಕಾರ್ಡ್ ಇಲ್ಲದಿದ್ದರೂ, ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿದರೆ ಸಾಕು, ಆಗಲೂ ಈ ಯೋಜನೆಯ ಸಂಪೂರ್ಣ ಸೌಲಭ್ಯ ದೊರಕುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap