ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಕೈಗೊಂಡ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ತೃಪ್ತಿಕರವಾಗಿದ್ದು, ಒಟ್ಟಾರೆ 33713 ಯುವ ಮತದಾರರು ನೊಂದಣಿ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿ ಅಂತಿಮಗೊಳಿಸುವ ಮುನ್ನ ಆಯಾ ತಹಸಿಲ್ದಾರರು ಪರಿಶೀಲಿಸಿ, ದೃಢೀಕರಣ ಮಾಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿಗಳು ಹಾಗೂ ಚಿತ್ರದುರ್ಗ ಜಿಲ್ಲೆಗೆ ಮತದಾರರ ಪಟ್ಟಿ ವೀಕ್ಷಕರಾಗಿರುವ ಮಹೇಶ್ವರ ರಾವ್ ಅವರು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮ ಸಂಬಂಧ ಮಂಗಳವಾರ ತಹಸಿಲ್ದಾರರು ಹಾಗೂ ಅಧಿಕಾರಿಗಳೊಂದಿಗೆ ಏರ್ಪಡಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ ಏರ್ಪಡಿಸಿದ್ದು, ಜಿಲ್ಲೆಯಲ್ಲಿ ಪರಿಷ್ಕರಣೆ ಕಾರ್ಯ ತೃಪ್ತಿಕರವಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 33713 ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ನೊಂದಣಿ ಮಾಡಿಸಿರುವುದು ಇದಕ್ಕೆ ನಿದರ್ಶನವಾಗಿದೆ ಎಂದರು
ಮೊಳಕಾಲ್ಮೂರು ಕ್ಷೇತ್ರದಲ್ಲಿ 5458, ಚಳ್ಳಕೆರೆ-5264, ಚಿತ್ರದುರ್ಗ-6781, ಹಿರಿಯೂರು-5290, ಹೊಸದುರ್ಗ-4766 ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ 6154 ಯುವ ಮತದಾರರು ನೊಂದಣಿ ಮಾಡಿಕೊಂಡಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾ. 26 ಕೊನೆಯ ದಿನವಾಗಿದೆ. ಇದುವರೆಗೂ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ, ಕೂಡಲೆ ಅವುಗಳನ್ನು ದೃಢೀಕರಿಸಿ ಸಲ್ಲಿಸಬೇಕು. ಅಲ್ಲದೆ ಹೆಸರು ಸೇರ್ಪಡೆಗೆ ಅಂಗೀಕೃತವಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ, ಶೀಘ್ರ ಮತದಾರರ ಗುರುತಿನ ಚೀಟಿ ವಿತರಿಸಬೇಕು ಎಂದು ಸೂಚಿಸಿದರು
ಕಳೆದ ಜ. 16 ಕ್ಕೆ ಪ್ರಕಟಿಸಲಾದ ಮತದಾರರ ಅಂತಿಮ ಪಟ್ಟಿಯನ್ವಯ ಜಿಲ್ಲೆಯಲ್ಲಿನ ಮತದಾರರ ಸಂಖ್ಯೆ 1339248 ಆಗಿತ್ತು. ಮಾ. 26 ರವರೆಗಿನ ಪರಿಷ್ಕರಣೆ ಕಾರ್ಯದ ಬಳಿಕ ಮತದಾರರ ಸಂಖ್ಯೆ 1349380 ಆಗಿದೆ. ಅಂದರೆ ಒಟ್ಟಾರೆ ಜಿಲ್ಲೆಯಲ್ಲಿ 10132 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಒಟ್ಟು 15436 ವಿಕಲಚೇತನ ಮತದಾರರನ್ನು ಗುರುತಿಸಲಾಗಿದ್ದು, ವಿಕಲಚೇತನ ಮತದಾರರಿಗಾಗಿ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಆಯೋಗದ ನಿರ್ದೇಶನಗಳನ್ನು ಪಾಲಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿದ್ದು, ಮತದಾನದ ಪ್ರಮಾಣವೂ ಹೆಚ್ಚಾದಲ್ಲಿ, ಜಿಲ್ಲಾಡಳಿತದ ಯತ್ನ ಸಾರ್ಥಕವಾಗಲಿದೆ ಎಂದು ಮಹೇಶ್ವರ ರಾವ್ ಹೇಳಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆಯಾ ತಹಸಿಲ್ದಾರರ ನೇತೃತ್ವದಲ್ಲಿ ಉತ್ತಮವಾಗಿ ನಡೆದಿದೆ. ಮಾ. 26 ರವರೆಗಿನ ಅಂಕಿ ಅಂಶಗಳನ್ವಯ ಜಿಲ್ಲೆಯಲ್ಲಿ ಒಟ್ಟಾರೆ 1648 ಮತಗಟ್ಟೆಗಳು, ಪುರುಷ-678549, ಮಹಿಳೆ-670742, ಇತರೆ-89, ಒಟ್ಟು- 1349380 ಮತದಾರರು ಇದ್ದಾರೆ ಎಂದು ತಿಳಿಸಿದರು
ಮೊಳಕಾಲ್ಮೂರು ಕ್ಷೇತ್ರದಲ್ಲಿ 284 ಮತಗಟ್ಟೆಗಳು, ಪುರುಷ- 117668, ಮಹಿಳೆ-114896, ಇತರೆ-07, ಒಟ್ಟು-230560 ಮತದಾರರು. ಚಳ್ಳಕೆರೆ- 259 ಮತಗಟ್ಟೆಗಳು, ಪುರುಷ- 105964, ಮಹಿಳೆ-105512, ಇತರೆ-04, ಒಟ್ಟು-211480 ಮತದಾರರು. ಚಿತ್ರದುರ್ಗ- 283 ಮತಗಟ್ಟೆಗಳು, ಪುರುಷ- 126133, ಮಹಿಳೆ-127451, ಇತರೆ-35, ಒಟ್ಟು-253619 ಮತದಾರರು. ಹಿರಿಯೂರು- 285 ಮತಗಟ್ಟೆಗಳು, ಪುರುಷ- 117454, ಮಹಿಳೆ-118128, ಇತರೆ-39, ಒಟ್ಟು-235621 ಮತದಾರರು. ಹೊಸದುರ್ಗ- 240 ಮತಗಟ್ಟೆಗಳು, ಪುರುಷ- 96074, ಮಹಿಳೆ-92496, ಒಟ್ಟು-188570 ಮತದಾರರು. ಹಾಗೂ ಹೊಳಲ್ಕೆರೆ ಕ್ಷೇತ್ರದಲ್ಲಿ 297 ಮತಗಟ್ಟೆಗಳು, ಪುರುಷ- 115256, ಮಹಿಳೆ-112259, ಇತರೆ-04, ಒಟ್ಟು-227519 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1787579 ಜನಸಂಖ್ಯೆ ಇದ್ದು, ಮತದಾರರ ಪ್ರಮಾಣ ಶೇ. 75.49 ರಷ್ಟಾಗಿದೆ ಎಂದು ವಿವರ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಸಿಲ್ದಾರ್ ಪ್ರತಿಭಾ, ಚಿತ್ರದುರ್ಗ ನಗರಸಭೆ ಪೌರಾಯುಕ್ತ ಚಂದ್ರಪ್ಪ ಸೇರಿದಂತೆ ತಾಲ್ಲೂಕುಗಳ ತಹಸಿಲ್ದಾರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
