ಹುಳಿಯಾರು
ಹುಳಿಯಾರು ಬಸ್ ನಿಲ್ದಾಣದಲ್ಲಿ ಅನಧಿಕೃತವಾಗಿ ಇಟ್ಟುಕೊಂಡಿರುವ ಗೂಡಂಗಡಿಗಳನ್ನು ತೆರವು ಮಾಡದಿದ್ದರೆ ನನ್ನ ಕೆಲಸಕ್ಕೆ ಸಂಚಕಾರವಿದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದರು.ಹುಳಿಯಾರಿನ ತಾಪಂ ಸದಸ್ಯ ಏಜೆಂಟ್ ಕುಮಾರ್ ಏಕಾಏಕಿ ಗೂಡಂಗಡಿಗಳನ್ನು ತೆರವು ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ದೀಪಾವಳಿ ಹಬ್ಬದವರೆವಿಗಾದರೂ ಅವಕಾಶ ಕೊಡಿ ಎಂದು ಪಪಂ ಕಛೇರಿಯಲ್ಲಿ ಮುಖ್ಯಾಧಿಕಾರಿಗಳನ್ನು ಕೇಳಿಕೊಂಡ ಹಿನ್ನೆಲೆಯಲ್ಲಿ ಅವರು ಈ ಮೇಲಿನ ಉತ್ತರ ನೀಡಿದರು.
ಬಸ್ ನಿಲ್ದಾಣದಲ್ಲಿನ ಗೂಡಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇವರನ್ನು ತೆರವು ಮಾಡುವಂತೆ ಪಪಂನ ಮೊದಲ ಸಾಮಾನ್ಯ ಸಭೆಯಲ್ಲೆ ಸದಸ್ಯರುಗಳು ತೀರ್ಮಾನಿಸಿದ್ದರು. ಲೋಕಸಭಾ ಚುನಾವಣೆ ಬಂದ ಕಾರಣದಿಂದ ತೆರವು ಮಾಡದೆ ಸುಮ್ಮನಾಗಿದ್ದೆ. ಈಗ ಕೆಡಿಪಿ ಸಭೆಯಲ್ಲಿ ಶಾಸಕರು ಹಾಗೂ ಜಿಪಂ ಸದಸ್ಯರು ಈ ಬಗ್ಗೆ ಪ್ರಸ್ತಾಪ ಮಾಡಿ ತಕ್ಷಣ ತೆರವಿಗೆ ಸೂಚಿಸಿದ್ದಾರೆ. ಇದನ್ನೂ ನಿರ್ಲಕ್ಷಿಸಿದರೆ ನಮ್ಮ ಮೇಲೆ ಮೇಲಧಿಕಾರಿಗಳಿಗೆ ಕರ್ತವ್ಯ ಲೋಪದ ದೂರು ಹೋಗಿ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ಅಸಹಾಯಕತೆ ತೋಡಿಕೊಂಡರು.
ಆದರೂ ಸಹ ಏಜೆಂಟ್ ಕುಮಾರ್ ಅವರು ಇಲ್ಲಿ ಗೂಡಂಗಡಿ ಇಟ್ಟುಕೊಂಡಿರುವವರಿಗೆ ಸ್ಥಳಾಂತರಿಸಲು ಮಾಜಿ ಶಾಸಕರುಗಳಾದ ಕೆ.ಎಸ್.ಕಿರಣ್ ಕುಮಾರ್ ಮತ್ತು ಸಿ.ಬಿ.ಸುರೇಶ್ ಬಾಬು ಕೆರೆ ದಡದಲ್ಲಿ ಸ್ಥಳ ಗುರುತಿಸಿ ಲಕ್ಷಾಂತರ ರೂ. ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯ ಸಹ ಮಾಡಿದ್ದು ಅಲ್ಲಿಗೆ ಸ್ಥಳಾಂತರಿಸಲು ಅನುಮತಿ ಕೊಡಿ ಎಂದು ಕೇಳಿದರು. ಇದಕ್ಕೆ ಪ್ರತಿಯಾಗಿ ಕೆರೆಯು ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದಾಗಿದ್ದು ಅವರ ಜಾಗದಲ್ಲಿ ಅಂಗಡಿಗಳನ್ನು ಇಡಲು ನಾನು ಅನುಮತಿ ಕೊಡಲು ಬರುವುದಿಲ್ಲ. ಜನಪ್ರತಿನಿಧಿಗಳಾದ ನೀವುಗಳೆ ಅವರೊಂದಿಗೆ ಮಾತನಾಡಿ ಅನುಮತಿ ಪಡೆಯಿರಿ ಎಂದು ಮಂಜುನಾಥ್ ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಅಂಗಡಿಗಳನ್ನಿಟ್ಟಿರುವವರೆಲ್ಲರೂ ಬಡವರಾಗಿದ್ದು ಈ ಅಂಗಡಿ ವ್ಯಾಪಾರ ನೆಚ್ಚಿ ಧರ್ಮಸ್ಥಳ ಸಂಸ್ಥೆ ಸೇರಿದಂತೆ ಹಲವೆಡೆ ಸಾಲ ಮಾಡಿದ್ದಾರೆ. ಹಾಗಾಗಿ ಅವರನ್ನು ಒಕ್ಕಲೆಬ್ಬಿಸಿ ಬೀದಿಗೆ ತಳ್ಳಬೇಡಿ, ಅವರು ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸ್ಪಲ್ಪದಿನ ಕಾಲವಕಾಶ ಕೊಡಿ ಎಂದರು. ಈಗಾಗಲೇ ಬುಧವಾರ ತೆರವು ಮಾಡಲು ಪೊಲೀಸರಿಗೆ ಪತ್ರ ಸಹ ಕೊಡಲಾಗಿದೆ. ಜಿಲ್ಲಾಧಿಕಾರಿಗಳು ತೆರವು ನಿಲ್ಲಿಸುವಂತೆ ಹೇಳಿದರೆ ಮಾತ್ರ ಈ ನಿರ್ಧಾರದಿಂದ ಹಿಂದೆ ಬರಲು ಸಾಧ್ಯವೇ ವಿನಃ ತೆರವು ಮಾಡದೆ ಬೇರೆ ದಾರಿಯಿಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.ಹಾಗಾಗಿ ಜಿಪಂ ಸದಸ್ಯರು, ತಾಪಂ ಸದಸ್ಯರು ಸೇರಿದಂತೆ ಇತರೆ ಜನಪ್ರತಿನಿಧಿಗಳು ಫುಟ್‍ಪಾತ್ ವ್ಯಾಪಾರಿಗಳೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಲು ಮಂಗಳವಾರ ಸಂಜೆ ತೆರಳುವಂತೆ ನಿರ್ಧರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
