ಹುಳಿಯಾರು:
14 ನೇ ಹಣಕಾಸಿನಲ್ಲಿ ನಿಯಮ ಬಾಹಿರವಾಗಿ ಸಾಮಗ್ರಿ ಖರೀದಿ ಹಾಗೂ ವರ್ಗ 1 ರ ನಿಧಿಯಿಂದ ಸದಸ್ಯರುಗಳು ತಮ್ಮ ಹೆಸರಿನಲ್ಲಿ ಚೆಕ್ ಪಡೆದಿದ್ದಾರೆ ಎಂಬ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹುಳಿಯಾರು ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿ 5 ಮಂದಿ ಸದಸ್ಯರುಗಳ ಸದಸ್ಯತ್ವ ರದ್ದು ಮಾಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಪ ನಿರ್ದೇಶಕ ಮತ್ತು ಸರ್ಕಾರದ ಅಧೀನ ಕಾರ್ಯದರ್ಶಿ ಮುಬಾರಕ್ ಅಹಮದ್ ಅವರು ಆದೇಶ ಹೊರಡಿಸಿದ್ದಾರೆ.
ಹೀಗಾಗಿ ಹುಳಿಯಾರು ಗ್ರಾಪಂ ಅಧ್ಯಕ್ಷರಾಗಿ ಹಾಗೂ ಇದೀಗ ಉನ್ನತಿಕರಣಗೊಂಡಿರುವ ಪಪಂ ಅಧ್ಯಕ್ಷರಾಗಿ ಮುಂದುವರೆದಿದ್ದ ಗೀತಾ ಪ್ರದೀಪ್, ಉಪಾಧ್ಯಕ್ಷರಾಗಿದ್ದ ಗಣೇಶ್, ಸದಸ್ಯರುಗಳಾದ ಪುಟ್ಟಿಬಾಯಿ, ನೂರ್ ಜಾನ್ ಬೀ ಹಾಗೂ ಇಂದ್ರಕಲಾ ಅವರುಗಳು ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಈಗ ಐದು ಜನರ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ 38 ಜನರ ಸದಸ್ಯತ್ವದ ಬಲ ಹೊಂದಿದ್ದ ಪಟ್ಟಣ ಪಂಚಾಯ್ತಿ 33 ಕ್ಕೆ ಕುಸಿದಿದೆ.
ಸಮಸ್ಯೆಯೇನು: ಹುಳಿಯಾರು ಗ್ರಾಪಂನಲ್ಲಿ 2015-16, 2016-17 ನೇ ಸಾಲಿನ ವರ್ಗ 1 ರ ನಿಧಿಯಲ್ಲಿ ಕಾಮಗಾರಿ ನಿರ್ವಹಿಸಿದ ಬಾಬ್ತು ಹಣವನ್ನು ಅವರುಗಳ ಹೆಸರಿಗೆ ವೈಯುಕ್ತಿವಾಗಿ ಪಡೆದಿದ್ದಾರೆ ಹಾಗೂ 14 ನೇ ಹಣಕಾಸು ಯೋಜನೆ ಅಡಿಯಲ್ಲಿ ನಿಯಮ ಬಾಹಿರವಾಗಿ ಗ್ರಾಪಂ ಸಾಮಗ್ರಿ ಖರೀದಿ ಮಾಡಿದ್ದಾರೆ ಎಂಬ ಆರೋಪ ಹಲವು ಸದಸ್ಯರು ಸೇರಿದಂತೆ ಬಿಲ್ ಕಲೆಕ್ಟರ್ ಗಳ ಮೇಲೂ ಸಹ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ತುಮಕೂರು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ತನಿಖೆಗೆ ಮುಂದಾಗಿದ್ದರು. ಆರೋಪ ಕೇಳಿಬಂದಿದ್ದ ಸದಸ್ಯರುಗಳು ಹಾಗೂ ಬಿಲ್‍ಕಲೆಕ್ಟರ್‍ಗಳ ಮೇಲೆ ನೋಟಿಸ್ ಜಾರಿ ಮಾಡಿ ಲಿಖಿತ ಹೇಳಿಕೆ ಕೂಡ ಪಡೆದಿದ್ದಲ್ಲದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರಿನಲ್ಲಿ ಇವರುಗಳ ವಿಚಾರಣೆ ಕೂಡ ನಡೆಸಿತ್ತು.
ಆಪಾದನೆ ಕೇಳಿ ಬಂದಿದ್ದ ಸದಸ್ಯರುಗಳು ವಿಚಾರಣೆಗೆ ಹಾಜರಾಗಿ ನಮ್ಮ ಮೇಲಿನ ಆರೋಪಗಳ ಬಗ್ಗೆ ಸಮಾಜಾಯಿಷಿ ನೀಡಿದ್ದಲ್ಲದೆ ಕಡತಗಳ ನಿರ್ವಹಣೆ, ಕಡತಗಳ ಮೇಲುಸ್ತುವಾರಿ ಅಧಿಕಾರಿಗಳದ್ದಾಗಿದೆ. ಅನಕ್ಷರಸ್ಥರಾದ ತಾವುಗಳು ಅವರುಗಳ ಹೇಳಿದಂತೆ ಸಹಿ ಹಾಕಿರುತ್ತೇನೆ.
ಅಲ್ಲದೆ ಹಲವು ಸಂದರ್ಭಗಳಲ್ಲಿ ಕೆಲಸ ಮಾಡಲು ಕಾರ್ಮಿಕರುಗಳು ಬಾರದಿದ್ದಾಗ ಅಥವಾ ಪಂಚಾಯಿತಿಯಲ್ಲಿ ಮೆಟೀರಿಯಲ್ ತರಲು ಹಣ ಇಲ್ಲದಿದ್ದಾಗ ಸಣ್ಣಪುಟ್ಟ ಕೆಲಸಗಳನ್ನು ಸದಸ್ಯರುಗಳಾದ ನಾವುಗಳು ನಿರ್ವಹಿಸಬೇಕಾದ ಪರಿಸ್ಥಿತಿ ಬಂದಿರುತ್ತದೆ.
ಹಾಗಾಗಿ ನಾವುಗಳು ಕೆಲಸ ಮಾಡಿ ಕಾರ್ಮಿಕರ ಬದಲು ನಮ್ಮ ಹೆಸರಿನಲ್ಲಿ ಚೆಕ್ ಮೂಲಕ ಹಣ ಪಡೆದಿದ್ದನೇ ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ.
ನಾವುಗಳು ಸಾರ್ವಜನಿಕ ಹಿತಾಸಕ್ತಿಯಿಂದ ನಿರ್ವಹಿಸಿದ ಕೆಲಸಗಳನ್ನು ನಿಯಮ ಬಾಹಿರ ಎಂದು ಘೋಷಿಸಿ ನಮ್ಮ ಮೇಲೆ ಆರೋಪಿಸಿದ್ದು ಸರಿಯಲ್ಲ, ನಮ್ಮ ಮೇಲಿನ ಎಲ್ಲಾ ಆರೋಪಗಳು ನಿರಾಧಾರವಾಗಿದ್ದು ಪರಿಸ್ಥಿತಿಯ ಸಂದರ್ಭದಿಂದ ನಾವುಗಳು ಮಾಡಿದ ಕೆಲಸವನ್ನೇ ಮತ್ತೊಮ್ಮೆ ಅವಲೋಕಿಸಿ ನಮ್ಮ ಮೇಲಿನ ಪ್ರಕರಣವನ್ನು ರದ್ಧುಗೊಳಿಸಬೇಕು ಹಾಗೂ ನಮ್ಮನ್ನು ಯಾವುದೇ ಕಾರಣಕ್ಕೂ ಸದಸ್ಯತ್ವದಿಂದ ತೆಗೆದುಹಾಕಬೇಕೆಂದು ವಿನಂತಿಸಿಕೊಂಡಿದ್ದರು.
ಈ ಬಗ್ಗೆ ತನಿಖೆ ನಡೆಸಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಅವರುಗಳ ವಿರುದ್ಧ ಆರೋಪ ಸಾಬೀತಾಗಿರುವುದರಿಂದ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 93 ರ ಪ್ರಕರಣ 48 (ಎ 4) ರಂತೆ ಹಾಗೂ ಸದಸ್ಯರುಗಳ ವಿರುದ್ಧ 43 (ಎ) ರ ಅನ್ವಯ ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹುಳಿಯಾರು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರೆ ಮೂರು ಜನ ಸದಸ್ಯರುಗಳನ್ನು ಪಂಚಾಯತ್ ರಾಜ್ ಅಧಿನಿಯಮ 93 ರ ಅನ್ವಯ ಸದಸ್ಯತ್ವ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿ ಅವರನ್ನು ಸದಸ್ಯತ್ವ ಸ್ಥಾನದಿಂದ ತೆಗೆದುಹಾಕಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
