ದಾವಣಗೆರೆ:
ಅಮಾಯಕ ಭಾರತೀಯರ ಜೀವ ತೆಗೆದು ವಿಕೃತಿ ಮೆರೆದಿದ್ದ ಭಯೋತ್ಪಾದಕ ಉಗ್ರಗಾಮಿಗಳ 9 ನೆಲೆಯನ್ನು ಧ್ವಂಸಗೈದು ಪಹಲ್ಗಾಮ್ ಭಯೋತ್ಪಾದಕ ಕೃತ್ಯಕ್ಕೆ ಸೇಡು ತೀರಿಸಿಕೊಂಡು ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಸೈನಿಕರಿಗೆ ಹಾಗೂ ಇಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿನಂದನೆ ಸಲ್ಲಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಾಧಾರಿತ ಭಯೋತ್ಪಾದಕ ದಾಳಿ ನಡೆಸಿದ ಹೇಡಿ ಉಗ್ರಗಾಮಿಗಳಿಗೆ ಹಾಗೂ ಅವರಿಗೆ ಆಶ್ರಯ-ನೆರವು ನೀಡುವ ಪಾಕಿಸ್ಥಾನಕ್ಕೆ ಇದು ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಪಾಠವಾಗಿದೆ. ‘ಆಪರೇಷನ್ ಸಿಂದೂರ’ ಹೆಸರಿನಲ್ಲಿ ಉಗ್ರಗಾಮಿಗಳ ನೆಲೆಯ ಮೇಲೆಯೇ ದಾಳಿ ನಡೆಸಿ ಉಗ್ರಸಂಹಾರ ಮಾಡಲಾಗಿದೆ ಎಂದು ತಿಳಿಸಿದರು.
ಭವಿಷ್ಯದ ಭಾರತಕ್ಕೆ ಒಂದು ನೆಲಗಟ್ಟು ಕೊಡಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ನಿಗ್ರಹಿಸಲು ತೆಗೆದುಕೊಳ್ಳುವ ನಿರ್ಧಾರಕ್ಕೆ ವಿಪಕ್ಷಗಳು, ವಿವಿಧ ದೇಶಗಳು ಸಂಪೂರ್ಣ ಬೆಂಬಲ ನೀಡಿವೆ. ಈ ನಿಟ್ಟಿನಲ್ಲಿ ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯರ ಜೀವ ತೆಗೆದ ಭಯೋತ್ಪಾದಕರನ್ನು ಮಟ್ಟ ಹಾಕಲು ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ನಮ್ಮ ಭಾರತೀಯ ಸೇನೆ 9 ಉಗ್ರಗರ ಹಡಗು ತಾಣಗಳ ಮೇಲೆ ದಾಳಿ ನಡೆಸಿ ದ್ವಂಸ ಮಾಡಿ ತಕ್ಕ ಉತ್ತರ ನೀಡಿದೆ ಎಂದರು.
ವಿಶ್ವಸಂಸ್ಥೆಯಿಂದ ನಿಷೇಧಿಸ್ಪಟ್ಟಂತಹ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾ ನಡೆಸುತ್ತಿರುವ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಭಾರತ ದಾಳಿ ನಡೆಸಿದೆ. ಭಾರತೀಯ ಸೇನಾಧಿಕಾರಿಗಳು ಈಗಾಗಲೇ ಪತ್ರಿಕೆ ಹೇಳಿಕೆ ನೀಡಿದ್ದಾರೆ. ಭಾರತದ ಮೇಲೆ ನಡೆದ ೧೬ ಕಹಿ ಘಟನೆಗಳನ್ನು ಭಾರತೀಯ ಸೇನೆ ಮೆಲುಕು ಹಾಕಿದೆ. ಭಯೋತ್ಪಾದನೆ ನಿಗ್ರಹಕ್ಕೆ ಪಾಕಿಸ್ತಾನ ಯಾವುದೇ ಅಡ್ಡಿಯುಂಟು ಮಾಡಿದರೆ ಭಾರತೀಯ ಸೇನೆ ಅದಕ್ಕೆ ತಕ್ಕ ಉತ್ತರ ಕೊಡುತ್ತದೆ ಎಂದು ಮೂರು ಸೇನೆಯ ಮುಖ್ಯಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಭಾರತದ ರಕ್ಷಣೆ ವ್ಯವಸ್ಥೆ ಸದೃಢವಾಗಿದೆ. ಭಾರತ ಶಾಂತಿ ಪ್ರಿಯ ದೇಶ. ದೇಶದ ಮೇಲಿನ ಆಕಸ್ಮಿಕ ದಾಳಿಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ಬುಡಮೇಲು ಸಮೇತ ಕೀಳಲು ಭಾರತ ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರ್ಕಾರ ಕಾರ್ಯಾಚರಣೆ ನಡೆಸುತ್ತದೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಸರ್ವಪಕ್ಷಗಳ ಸಭೆ ಕರೆದಿದ್ದು, ಅವರು ಕೂಡ ಭಯೋತ್ಪಾದನೆ ನಿಗ್ರಹಕ್ಕೆ ಬೆಂಬಲ ನೀಡುತ್ತಿವೆ. ವಿಶ್ವದ ಅನೇಕ ರಾಷ್ಟ್ರಗಳು ಈ ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತಕ್ಕೆ ಸಹಕಾರ ನೀಡುತ್ತಿವೆ. ಭಯೋತ್ಪಾದನೆ ನಿಗ್ರಹಿಸುವ ಮೂಲಕ ವಿಶ್ವದಲ್ಲಿ ಶಾಂತಿ ನೆಲಸಲು ಪ್ರಧಾನಿ ನರೇಂದ್ರ ಮೋದಿಯವರ ಕೋಟೆ ಭದ್ರವಾಗಿದೆ ಎಂದು ತಿಳಿಸಿದರು.
ಕೇಂದ್ರ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್, ದೂಡಾ ಮಾಜಿ ಅಧ್ಯಕ್ಷರಾದ ದೇವರಮನಿ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಎ.ವೈ. ಪ್ರಕಾಶ್, ಮುರುಗೇಶ್ ಆರಾಧ್ಯ, ಅಣಬೇರು ಜೀವನಮೂರ್ತಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ಎಚ್.ಎಂ. ವೀರೇಶ್, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.
