ಶಿರಾ
ನೀರು ಅತ್ಯಮೂಲ್ಯವಾದುದು. ಹನಿ ಹನಿ ನೀರಿಗೂ ಜನ-ಜಾನುವಾರುಗಳು ಪರಿತಪಿಸುವಂತಹ ಕಾಲ ಸನ್ನಿಹಿತವಾಗಿದ್ದು ನೀರಿನ ಸಂರಕ್ಷಣೆ ಮಾಡುವುದು ಎಲ್ಲರ ಹೊಣೆಯಾಗದ ಹೊರತು ದೇಶ ನೀರಿಲ್ಲದೆ ವಿನಾಶದ ಅಂಚನ್ನು ತಲುಪುವ ಮುನ್ನ ಜಾಗೃತಿ ಅಗತ್ಯವಾಗಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ, ಜಲ ಸಾಧಕ ಡಾ.ರಾಜೇಂದ್ರ ಸಿಂಗ್ ಹೇಳಿದರು.
ಶಿರಾ ನಗರದ ಹೊರ ವಲಯದ ಗುಮ್ಮನಹಳ್ಳಿ ಗೇಟ್‍ನಲ್ಲಿರುವ ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ಭಾನುವಾರ ರಾಜ್ಯ ಮಟ್ಟದ ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿರಾದ ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ನಡೆದ ಬರಮುಕ್ತ ಕರ್ನಾಟಕ ತರಬೇತಿ ಶಿಬಿರವು ಅತ್ಯಮೂಲ್ಯವಷ್ಟೇ ಅಲ್ಲದೆ. ಶಿಬಿರಾರ್ಥಿಗಳಾದ ನೀವುಗಳು ವಿವಿಧ ಉಪನ್ಯಾಸಗಳಿಂದ ಪ್ರೇರೇಪಿತರಾಗಿದ್ದೀರಿ. ಬರಮುಕ್ತ ಕರ್ನಾಟಕ ಆಂದೋಲನ ತರಬೇತಿ ಶಿಬಿರದಲ್ಲಿ ಭಾಗವಹಿಸಿ ನೀವು ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲ ಪ್ರಯತ್ನ ಮಾಡಲಾಗುವುದು. ಈ ಶಿಬಿರ ನೀರಿಗಾಗಿ ಹೋರಾಟ ನಡೆಸುವವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ನಮ್ಮ ಹೋರಾಟಕ್ಕೆ ರೈತ ಸಂಘ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿರುವುದು ಶ್ಲಾಘನೀಯ ಎಂದರು.
ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಮಾತನಾಡಿ ತೀವ್ರ ಬರದಿಂದಾಗಿ ನೀರಿನ ಹಾಹಾಕಾರ ಉಂಟಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿರುವುದು ಶೋಚನೀಯ. ನೀರಿನ ಮಹತ್ವ ಅರಿತು ಮಿತವಾಗಿ ಬಳಕೆ ಮಾಡಬೇಕು. ಕೆರೆ, ಕಟ್ಟಗಳ ಹೂಳೆತ್ತುವ ಮೂಲಕ ನೀರಿನ ಸಂಗ್ರಹವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ಸಮಿತಿ ರಚನೆ :
ಬರಮುಕ್ತ ಕರ್ನಾಟಕ ಆಂದೋಲನದ ಅನುಷ್ಟಾನಕ್ಕಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ (ಅಧ್ಯಕ್ಷ), ಪ್ರೊ.ರವಿವರ್ಮಕುಮಾರ್ (ಉಪಾಧ್ಯಕ್ಷ), ನೀರಾವರಿ ಹೋರಾಟಗಾರ ಅಂಜನೇಯರೆಡ್ಡಿ, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಾಜ ಪಾಟೀಲ್, ನಾಗರತ್ನ, ಬಿ.ಎಸ್.ಸೊಪ್ಪಿ, ಆರ್.ಎಚ್.ಸಾಹುಕಾರ್, ರವಿಕಿರಣ್, ಶಂಕರಪ್ಪ (ಸದಸ್ಯರು) ಸಮಿತಿ ರಚಿಸಲಾಯಿತು . ಮೇ. 28 ರಂದು ಬೆಂಗಳೂರಿನಲ್ಲಿ ಸಮಿತಿ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ರೂಪಿಸಲಿದೆ. ಅದೇ ರೀತಿ ಜಿಲ್ಲಾ ಮಟ್ಟ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಾಜ ಪಾಟೀಲ್, ಆರ್.ಎಚ್.ಸಾಹುಕಾರ್ , ನೀರಾವರಿ ಹೋರಾಟಗಾರ ಅಂಜನೇಯರೆಡ್ಡಿ, ತುಮಕೂರು ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಸಿ.ಯತಿರಾಜು, ವಾಲ್ಮಿ ನಿರ್ದೇಶಕ ಪ್ರೊ.ರಾಜೇಂದ್ರ ಪೋದಾರ್, ಪ್ರೊ.ಮಹಲಿಂಗಯ್ಯ, ತಮಿಳುನಾಡಿನ ರೈತ ಮುಖಂಡ ಗುರುಮೂರ್ತಿ, ಸತ್ಯಮ್, ರಾಮಸ್ವಾಮಿ, ನಾದೂರು ಕೆಂಚಪ್ಪ ಇದ್ದರು.