ಹಾನಗಲ್ಲ
ದೇಶಾಭಿಮಾನ ಹಾಗೂ ಬದ್ಧತೆ ಇರುವ ವ್ಯಕ್ತಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಿಣಾಮ ಇಂದು ಜಾಗತಿಕ ಮಟ್ಟದಲ್ಲಿ ಭಾರತ ಗುರುತಿಕೊಳ್ಳಲು ಸಾಧ್ಯವಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.
ಹಾನಗಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ 70 ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶ ಭಕ್ತರ ತ್ಯಾಗ ಬಲಿದಾನದ ಫಲವಾಗಿ ಬ್ರಿಟೀಷರ ದಾಸ್ಯದಿಂದ ಬಿಡುಗಡೆಹೊಂದಿ ಸ್ವತಂತ್ರರಾಗಿದ್ದೇವೆ. ಪ್ರತಿಯೊಬ್ಬ ಪ್ರಜೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶದ ಉನ್ನತಿಗೆ ನಾವು ಯಾವ ತ್ಯಾಗಕ್ಕೂ ಸಿದ್ಧರಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿತ್ವದ ಆಡಳಿತದಿಂದ, ಇಂದು ಭಾರತೀಯರು ಮೇರಾ ಭಾರತ ಮಹಾನ್ ಹೈ ಎಂದು ಎದೆ ತಟ್ಟಿ ಹೇಳವ ಸ್ಥಿತಿ ನಿರ್ಮಾಣವಾಗಿದೆ.
ದೇಶದ ಒಳಿತಿಗಾಗಿ “ಸಬ್ ಕಾ ಸಾಥ್ ಸಬ್ ಕಾ ವಿಕಾಸ” ಎಂಬ ತತ್ವದಡಿ ಅನೇಕ ಜನಪರ ಯೋಜನೆಗಳ ಮೂಲಕ ಕಟ್ಟಕಡೆ ವ್ಯಕ್ತಿ ಕೂಡ ಯೋಜನೆಯ ಲಾಭ ಸಿಗುವಂತೆ ಪ್ರಧಾನಿ ಮೋದಿ ಆಡಳಿತ ಮಾಡಿದ್ದಾರೆ ಎಂದರು.ತಾಲೂಕು ತಹಶೀಲ್ದಾರ ಎಂ.ಗಂಗಪ್ಪ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಸ್ವತಂತ್ರ ಬದುಕಿನ ಸ್ವಾರ್ಥದ ನಡುವೆಯೂ ಪರಸ್ಪರ ಬೆರೆತು ಹೇಗೆ ಬಾಳಬೇಕು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ದೇಶ ಭಾರತ.
ಭಾರತೀಯರು ನಂಬಿಕೆ ಪ್ರೀತಿ ವಿಶ್ವಾಸ ಸ್ನೇಹ ಸಹೋದರತ್ವ ಮಾನವೀಯ ಸಂಬಂಧಗಳನ್ನು ಹೊಂದಿದವರು. ನಮ್ಮ ದೇಶದ ಸಂವಿಧಾನ ಧರ್ಮ ಜಾತಿಗೆ ಪ್ರಾಧಾನ್ಯತೆ ನೀಡದೆ ಎಲ್ಲ ಧರ್ಮಗಳಿಗೂ ಸಮಾನತೆ ನೀಡುವ ಮೂಲಕ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ಸಾರಿದೆ. ಇಂದು ದೇಶ ಹೆಚ್ಚು ಯುವಕರನ್ನು ಹೊಂದಿದೆ. ಯುವಕರು ಸಂವಿಧಾನದ ಮಹತ್ವವನ್ನು ಅರಿತು ಅದನ್ನು ಗೌರವಿಸುವುದರ ಜೊತೆಗೆ ದೇಶದ ಏಕತೆ, ಸಮಗ್ರತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶೇಕಣ್ಣ ಮಹರಾಜಪೇಟೆ, ಹಸೀನಾಬಿ ನಾಯ್ಕನವರ, ಗುರುರಾಜ ನಿಂಗೋಜಿ, ಎನ್.ಬಿ.ರಾಯ್ಕರ, ರವಿಬಾಬು ಪೂಜಾರ, ಎಂ.ಕೆ,ಪಾರಗಾಂವಕರ, ಆರ್.ಬಿ.ಉಪಾಸಿ, ಮರಿಗೌಡ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಮಹಲಿಂಗಪ್ಪ ಅಕ್ಕಿವಳ್ಳಿ ಅಧಿಕಾರಿಗಳಾದ ಚನಬಸಪ್ಪ ಹಾವಣಗಿ, ಎಚ್.ಶ್ರೀನಿವಾಸ, ವಿದ್ಯಾ ಬಡಿಗೇರ, ಎಂ.ಜೆ.ಹಿರೇಮಠ, ಬೇವಿನಮರದ ಮೊದಲಾದವರಿದ್ದರು. ಸಿಆರ್‍ಪಿ ಆರ್.ಜಯಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ