ಆಗ್ನೇಯ ಪದವೀಧರ ಕ್ಷೇತ್ರ : ಶೇ.77.77 ರಷ್ಟು ಮತದಾನ

ಮಧುಗಿರಿ

    ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಶೇ.77.77 ರಷ್ಟು ಮತದಾನದೊಂದಿಗೆ ಬಹುತೇಕ ಶಾಂತಿ ಯುತವಾಗಿ ನಡೆದಿದೆ.

   ತಾಲ್ಲೂಕಿನಲ್ಲಿ ಐದು ಹೋಬಳಿಗಳಿಂದ 7 ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮೊದಲ ಒಂದು ಅವಧಿಯಲ್ಲಿ ಶೇ.7.78 ರಷ್ಟು ಮತದಾನ ನಡೆದಿತ್ತು. ನಂತರ ಸಂಜೆ 4 ರಿಂದ ಮತದಾನದಲ್ಲಿ ಬಹಳಷ್ಟು ಏರಿಕೆ ಕಂಡು ಬಂತು. ಮತದಾನ ಕೇಂದ್ರಕ್ಕೆ ಬರುವ ಮತದಾರರಿಗಾಗಿ ಪ್ರತ್ಯೇಕವಾಗಿ, ದೇಹದ ಉಷ್ಣಾಂಶದ ತಪಾಸಣೆ ನಂತರ ಹಾಗೂ ಕೈಗವಸು, ಪೆನ್ನುಗಳನ್ನು ನೀಡುವುದರ ಮೂಲಕ ಮತದಾನ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತದಾರರು ಮುಖಗವಸು ಧರಿಸಿಕೋಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಂಡು ಬಿಗಿ ಪೋಲೀಸ್ ಬಂದೋಬಸ್ತ್ ನೋಂದಿಗೆ ಮತದಾನ ನಡೆಸಿದರು.

   ತಾಲ್ಲೂಕಿನಲ್ಲಿ ಒಟ್ಟು 2816 ಮತದಾರರಿದ್ದು, 2190 ಮಂದಿ ಮತ ಚಲಾಯಿಸಿದ್ದಾರೆ. ಈ ಪೈಕಿ 1507 ಪುರುಷ ಹಾಗೂ 683 ಮಹಿಳೆಯರು ಮತದಾನ ಮಾಡಿದ್ದಾರೆ. ಮಧುಗಿರಿ 1 ಮತದಾನ ಕೇಂದ್ರದಲ್ಲಿ ಶೇ.82.13, ಮಧುಗಿರಿ 2 ರಲ್ಲಿ 69.17, ದೊಡ್ಡೇರಿ 89.31, ಐ.ಡಿ.ಹಳ್ಳಿ 84.03 , ಕೊಡಿಗೇನಹಳ್ಳಿ 82.39, ಪುರವರ 83.33 , ಮಿಡಿಗೇಶಿ 82.97 ರಷ್ಟು ಮತದಾನವಾಗಿದೆ.
ಬೆಳಗ್ಗೆ 7 ರಿಂದಲೇ ನಡೆದ ಮತದಾನ ಪ್ರಕ್ರಿಯೆಯಲ್ಲಿ ಆಯಾ ಪಕ್ಷಗಳ ಕಾರ್ಯಕರ್ತರು ಮತದಾನ ಕೇಂದ್ರಗಳ ಮುಂದೆ ಪೆಂಡಾಲ್‍ಗಳನ್ನು ಹಾಕಿಕೊಂಡು ಬಹಳ ಉತ್ಸಾಹದಿಂದ ಈ ಪ್ರಕ್ರಿಯೆಯಲ್ಲಿ ಯಾವುದೇ ವಾಗ್ವಾದಗಳಿಲ್ಲದೆ ಶಾಂತಿಯುತವಾಗಿ ಪದವೀಧರ ಮತದಾರರ ಬಳಿ ಮತ ಯಾಚಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

   ರಾಜಕೀಯ ಪಕ್ಷಗಳ ಮುಖಂಡರುಗಳಾದ ಎನ್.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಎಂ.ಎಸ್.ಮಲ್ಲಿಕಾರ್ಜುನಯ್ಯ, ಎಸ್.ಆರ್. ರಾಜಗೋಪಾಲ್, ಪಿ.ಸಿ.ಕೃಷ್ಣರೆಡ್ಡಿ, ತಿಮ್ಮರಾಯಪ್ಪ, ಈರಣ್ಣ ಸಿದ್ದಾಪುರ, ರಂಗಾಶ್ಯಾಮಣ್ಣ, ಜಗದೀಶ್, ಶಂಕರನಾರಾಯಣ, ಎಂ.ಜಿ.ಮಂಜುನಾಥ್, ನಾಗರಾಜು, ಬಿ.ನಾಗೇಶ್‍ಬಾಬು, ಕುಮಾರ್, ಟಿ.ಗೋವಿಂದರಾಜು, ಚಂದ್ರಶೇಖರ್ ಬಾಬು, ಪಿ.ಎಲ್. ನರಸಿಂಹಮೂರ್ತಿ, ಬಿ.ಪಿ.ನಾರಾಯಣ್, ಕಾರ್ತಿಕ್‍ಆರಾಧ್ಯ, ಎಂ.ಸುರೇಶ್, ಮೂಡ್ಲಗೀರೀಶ್, ನಿರಂಜನ್ ದಾಸ್, ಕೃಷ್ಣಪ್ಪ ಹಾಗೂ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link