ಚಿತ್ರದುರ್ಗ;

ಚಿತ್ರದುರ್ಗ ಶಾಖಾ ಕಾಲುವೆ ಕಿ. 90 ರಿಂದ 134.597 ವರೆಗಿನ ಕಾಮಗಾರಿಗೆ 15 ಗ್ರಾಮಗಳ ವ್ಯಾಪ್ತಿಯ ಒಟ್ಟು 827. 18 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇದಕ್ಕಾಗಿ ಮೂರು ಪ್ಯಾಕೇಜ್‍ಗಳನ್ನು ರೂಪಿಸಲಾಗಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಅಭಿಯಂತರ ಶ್ರೀಧರ್ ಮಾಹಿತಿ ನೀಡಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆಯ ಕಛೇರಿ ಸಭಾಂಗಣದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ಸಂಬಂಧಿಸಿದಂತೆ ರೈತರಿಗೆ ಭೂ ಪರಿಹಾರ ನೀಡುವ ಹಾಗೂ ಭೂಸ್ವಾಧೀನ ಕುರಿತು ಹಮ್ಮಿಕೊಂಡಿದ್ದ ರೈತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದರು
ಭದ್ರಾ ಮೇಲ್ದಂಡೆ ಯೋಜನೆಯಿಂದ ಅತ್ಯಂತ ಬರಪೀಡಿತ ಜಿಲ್ಲೆಯಾದ ಚಿತ್ರದುರ್ಗ ಜಿಲ್ಲೆಗೆ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದ್ದು, ಒಟ್ಟು 1,10,690 ಹೆಕ್ಟೇರ್ ಕೃಷಿ ಕ್ಷೇತ್ರ ಒಳಪಡುತ್ತದೆ. (2,73,000 ಎಕರೆ) ಮತ್ತು 119 ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದ್ದು, ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕಿನಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ಭೂ ಸ್ವಾಧೀನಗೊಳ್ಳಲಿರುವ ಚಿತ್ರದುರ್ಗ ವಿಭಾಗಕ್ಕೆ ಸಂಬಂಧಿಸಿದ ರೈತರ ಜಮೀನಿನ ಸರ್ವೆ ಕಾರ್ಯ ಪೂರ್ಣಗೊಂಡಿದೆ ಎಂದರು.
ಚಿತ್ರದುರ್ಗ ಶಾಖಾ ಕಾಲುವೆಯು ಪ್ಯಾಕೇಜ್ 10, 11, 12 ಸೇರಿದಂತೆ ಒಟ್ಟು ಮೂರು ಪ್ಯಾಕೇಜ್ ಒಳಗೊಂಡಿದ್ದು,90 ಕಿ.ಮೀನಿಂದ 104 ಕಿ.ಮೀವರೆಗೆ ಬರುವ ಪ್ಯಾಕೇಜ್ 10ರ ನಾಲೆ ಭರಂಪುರ ಗ್ರಾಮ ವ್ಯಾಪ್ತಿಯಲ್ಲಿ 17 ಎಕರೆ, ಪಾಲವ್ವನಹಳ್ಳಿ- 58.35 ಎಕರೆ, ಮರಡಿದೇವಿಗೆರೆ-74.12 ಎ., ಚಿಕ್ಕಸಿದ್ದವ್ವನಹಳ್ಳಿ-74.19 ಎ., ದೊಡ್ಡಸಿದ್ದವ್ವನಹಳ್ಳಿ-28.08 ಎಕರೆ ಸೇರಿದಂತೆ ಪ್ಯಾಕೇಜ್ 01 ರಲ್ಲಿ 252. 35 ಎಕರೆ ಭೂಸ್ವಾಧೀನಕ್ಕಾಗಿ ಕಳೆದ 2008 ರ ಸೆಪ್ಟಂಬರ್ 06 ರಂದು 11(1) ಅಧಿಸೂಚನೆ ಹೊರಡಿಸಲಾಗಿದೆ.
ಪ್ಯಾಕೇಜ್ 11 ರ ನಾಲೆ 104 ಕಿ.ಮೀನಿಂದ 117 ಕಿ.ಮೀ ವರೆಗೆ ಬರುವ ಗ್ರಾಮಗಳಾದ ದೊಡ್ಡಸಿದ್ದವ್ವನಹಳ್ಳಿ-111.03 ಎ., ಕುಂಚಿಗನಾಳ್-17.27 ಎ., ದ್ಯಾಮವ್ವನಹಳ್ಳಿ-2.05 ಎ., ಗೋನೂರು ನಲ್ಲಿ 58.25 ಎಕರೆ ಸೇರಿ ಒಟ್ಟು 189.20 ಎಕರೆ ಭೂಸ್ವಾಧೀನಕ್ಕೆ 2018 ರ ಆಗಸ್ಟ್ 22 ರಂದು ಅಧಿಸೂಚನೆ ಪ್ರಕಟಿಸಲಾಗಿದೆ.
ಪ್ಯಾಕೇಜ್ 12 ರಲ್ಲಿ 117 ಕಿ.ಮೀ ನಿಂದ 134.597 ಕಿ.ಮೀ ವರೆಗೆ ಬರುವ ಗ್ರಾಮಗಳಾದ ಕಲ್ಲೇನಹಳ್ಳಿ-42.05 ಎ., ಬೆಳಗಟ್ಟ-114.07 ಎ., ಹಾಯ್ಕಲ್-31.03 ಎ., ಪೇಲೂರಹಟ್ಟಿ-77.28 ಎ., ದ್ಯಾಮವ್ವನಹಳ್ಳಿ-111.39 ಎ, ಜನ್ನೇನಹಳ್ಳಿ-7.20 ಎಕರೆ ಸೇರಿದಂತೆ ಒಟ್ಟು 385.02 ಎಕರೆ ಭೂಸ್ವಾಧೀನಕ್ಕೆ 2018 ರ ಆಗಸ್ಟ್ 22 ರಂದು ಅಧಿಸೂಚನೆ ಪ್ರಕಟಿಸಲಾಗಿದೆ.
ಪ್ಯಾಕೇಜ್ ಸಂ. 11 ರ ದ್ವಾಮವ್ವನಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ 33 ಎಕರೆ ಡೀಮ್ಡ್ ಅರಣ್ಯ ಪ್ರದೇಶ ಭೂಸ್ವಾಧೀನ ಆಗಬೇಕಿದ್ದು, ಇಷ್ಟೇ ವಿಸ್ತೀರ್ಣದ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದಲ್ಲಿ ಮಾತ್ರ ಡೀಮ್ಡ್ ಅರಣ್ಯ ಪ್ರದೇಶವನ್ನು ಕಾಮಗಾರಿಗೆ ಹಸ್ತಾಂತರಿಸಲಾಗುವುದು ಎಂಬ ಷರತ್ತನ್ನು ಅರಣ್ಯ ಇಲಾಖೆ ವಿಧಿಸಿದೆ. ಈ ದಿಸೆಯಲ್ಲಿ ಕಂದಾಯ ಇಲಾಖೆಯೊಂದಿಗೆ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಕಾರ್ಯಪಾಲಕ ಅಭಿಯಂತರ ಶ್ರೀಧರ್ ತಿಳಿಸಿದರು.
ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗೆ ರೈತರ ಜಮೀನಿನ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಜಾರಿಯಲ್ಲಿದ್ದು, ನಿಗಮದಿಂದ ಇನ್ನೂ ಭೂ ಸ್ವಾಧೀನ ಪಡೆಯದೇ ಇರುವ ಸ್ಥಳಗಳಲ್ಲಿ ಗುತ್ತಿಗೆದಾರರು ಸಂಬಂಧಿಸಿದ ರೈತರ ಸಹಮತ ಮತ್ತು ಒಪ್ಪಿಗೆ ಪಡೆದು ಕಾಮಗಾರಿ ನಿರ್ವಹಿಸಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಆ ಪ್ರಕಾರ ಗುತ್ತಿಗೆದಾರರು ರೈತರ ಸಹಮತ ಮತ್ತು ಒಪ್ಪಿಗೆ ಪಡೆದು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ರೈತರ ಒಪ್ಪಿಗೆ ಮೇರೆಗೆ ರೈತರ ಜಮೀನಿನಲ್ಲಿ ಕಾಮಗಾರಿಗಳು ಮತ್ತು ಭೂ ಸ್ವಾಧೀನ ಕೆಲಸಗಳು ನಡೆಯುತ್ತಿದ್ದು, ರೈತರಿಗೆ ಭೂ ಪರಿಹಾರವನ್ನು ಭೂ ಸ್ವಾಧೀನ ಕಾಯ್ದೆ ಅನ್ವಯ ನೀಡಲಾಗುತ್ತದೆ ಎಂದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಗುತ್ತಿಗೆದಾರರು, ರೈತರೊಂದಿಗಿನ ಒಪ್ಪಂದದಂತೆ ಬೆಳೆ ಪರಿಹಾರ ಕೊಟ್ಟುಕೊಂಡಿದ್ದಾರೆ. ಇದು ಇಲಾಖೆಯಿಂದ ನೀಡಿದ ಪರಿಹಾರವಲ್ಲ. ಇನ್ನು ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ಕೊಡದೆ, ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಬರದ ನಾಡಿಗೆ ಆದಷ್ಟು ಬೇಗ ಭದ್ರೆ ಹರಿದು, ಇಲ್ಲಿನ ರೈತರ ಸಂಕಷ್ಟ ನೀಗಬೇಕು ಎಂದರು.
ಭೂ ಸ್ವಾಧೀನ ಕಾಯ್ದೆಯ ಅನ್ವಯ ಆಯಾ ಗ್ರಾಮಗಳ ಕೃಷಿ ಭೂಮಿಗೆ ಸಬ್ ರಿಜಿಸ್ಟರ್‍ರವರು ನೀಡುವ ದರಗಳ ಅನ್ವಯವಾಗುವುದರ ಜೊತೆಗೆ ರೈತರ ಜಮೀನುಗಳಲ್ಲಿ ಬರುವ ಮರಗಿಡಗಳು, ಮನೆಗಳು, ಕಟ್ಟಡಗಳು, ಕೊಳವೆಬಾವಿ, ಪೈಪು, ತೋಟಗಾರಿಕೆ ಮರಗಿಡಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಜಂಟಿ ಮೋಜಿಣಿ ಮಾಡಿಸಿ ಲೋಕೋಪಯೋಗಿ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ನಿಗಧಿಪಡಿಸಿದ ದರಗಳ ಅನ್ವಯ ಭೂ ಪರಿಹಾರ ನೀಡಲಾಗುತ್ತದೆ. ರೈತರಿಗೆ ಭೂ ಪರಿಹಾರ ನೀಡುವಾಗ 11(1)ರ ನೋಟೀಸಿನ ದಿನಾಂಕದಂದು ಐತೀರ್ಪು ತಯಾರಿಕೆಯ ಅವಧಿಗೆ ಶೇ 12% ಮಾರುಕಟ್ಟೆ ಮೌಲ್ಯ ನೀಡಲಾಗುತ್ತದೆ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಅಭಿಯಂತರ ಸೋಮಶೇಖರ್ ತಿಳಿಸಿದರು.
ಸಭೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಶಿವಕುಮಾರ್, ಅಧಿಕಾರಿಗಳಾದ ಸತ್ಯನಾರಾಯಣ, ಕಲಾವತಿ, ಕುಲಕರ್ಣಿ, ವೆಂಕಟೇಶ್, ತಿಪ್ಪೇರುದ್ರಪ್ಪ, ಶ್ರೀಧರ್, ರಾಮಚಂದ್ರ, ರೈತ ಮುಖಂಡರಾದ ಕೊಂಚೆ ಶಿವರುದ್ರಪ್ಪ, ಡಾ. ಮಂಜುಳಾಸ್ವಾಮಿ ಸೇರಿದಂತೆ ಹಲವು ರೈತ ಮುಖಂಡರು, ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
