“ಆರೋಗ್ಯ ಕರ್ನಾಟಕ” ಯೋಜನೆ ಅಡಿ ಬಳ್ಳಾರಿ ಜಿಲ್ಲೆಯಲ್ಲಿ 24184 ಆರೋಗ್ಯ ಕಾರ್ಡ್‍ಗಳ ವಿತರಣೆ

ಬಳ್ಳಾರಿ

    ರಾಜ್ಯದಲ್ಲಿ ಈ ಮೊದಲು ಜಾರಿಯಲ್ಲಿದ್ದ ವಾಜಪೇಯಿ ಆರೋಗ್ಯ ಶ್ರೀ, ರಾಜೀವ್ ಆರೋಗ್ಯ ಭಾಗ್ಯ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ (ಹಿರಿಯ ನಾಗರಿಕರಿಗೆ), ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ, ಇಂದಿರಾ ಸುರಕ್ಷಾ ಯೋಜನೆ, ಯಶಸ್ವಿನಿ ಸೇರಿದಂತೆ ವಿವಿಧ ಅರೋಗ್ಯ ಸಂಬಂಧಿತ ಯೋಜನೆಗಳನ್ನು ವಿಲೀನಗೊಳಿಸಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತಂದಿದ್ದು,ಅದರಡಿ ಬಳ್ಳಾರಿಯಲ್ಲಿ ಇದುವರೆಗೆ 24184 ಫಲಾನುಭವಿಗಳಿಗೆ ಕಾರ್ಡ್ ವಿತರಿಸಲಾಗಿದೆ ಎಂದು ಡಿಎಚ್‍ಒ ಡಾ.ಶಿವರಾಜ ಹೆಡೆ ಹೇಳಿದರು.

     ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.ಬಳ್ಳಾರಿಯಲ್ಲಿ ವಿಮ್ಸ್ ಆಸ್ಪತ್ರೆಯಲ್ಲಿ ಈ ಯೋಜನೆಯ ಕಾರ್ಡ್‍ಗಳನ್ನು ವಿತರಿಸಲಾಗುತ್ತಿದ್ದು,ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಈ ಕಾರ್ಡ್‍ಗಳ ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಇದುವರೆಗೆ ಬಿ.ಪಿ.ಎಲ್ ಕುಟುಂಬದ 23,140 ಫಲಾನುಭವಿಗಳಿಗೆ ಹಾಗೂ ಎ.ಪಿ.ಎಲ್ ಕುಟುಂಬದ 1044 ಫಲಾನುಭವಿಗಳಿಗೆ ಕಾರ್ಡ್ ವಿತರಿಸಿದೆ ಎಂದರು.

     ಆರೋಗ್ಯ ಕರ್ನಾಟಕ ಯೋಜನೆಯಡಿ ಇಲ್ಲಿಯವರೆಗೂ ಬಳ್ಳಾರಿಯಲ್ಲಿ 14 ಆಸ್ಪತ್ರೆಗಳನ್ನು ನೋಂದಾಯಿಸಲಾಗಿದೆ ಎಂದು ವಿವರಿಸಿದ ಡಿಎಚ್‍ಒ ಅವರು, ಜಿಲ್ಲಾ ಆಸ್ಪತ್ರೆ ,ವಿಮ್ಸ್ ಆಸ್ಪತ್ರೆ ,6 ತಾಲೂಕಾ ಸಾರ್ವಜನಿಕ ಆಸ್ಪತ್ರೆಗಳು,ದೀಪಾಲಿ ಆಸ್ಪತ್ರೆ ಹೊಸಪೇಟೆ, ಶ್ರೀ ತಿರುಮಲ ಆಸ್ಪತ್ರೆ ಬಳ್ಳಾರಿ, ಸಿಟಿ ಆಸ್ಪತ್ರೆ ಹೊಸಪೇಟೆ, ಕೆ .ಎಲ್. ಎಸ್. ಆಸ್ಪತ್ರೆ ಹೊಸಪೇಟೆ, ಶ್ರೀಪತಿ ಆಸ್ಪತ್ರೆ ಹೊಸಪೇಟೆ, ಜಿಂದಾಲ್ ಸಂಜೀವನಿ ಆಸ್ಪತ್ರೆ ತೋರಣಗಲ್‍ಗಳಾಗಿವೆ ಎಂದು ಅವರು ಹೇಳಿದರು.

     ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಸಂಕೀರ್ಣ ದ್ವೀತಿಯ ಹಾಗೂ ತೃತೀಯ ಹಂತದ ಕಾಯಿಲೆಗಳ 829 ರೋಗಿಗಳನ್ನು ರೆಫರ್ ಮಾಡಲಾಗಿದೆ ಮತ್ತು ಈ ಯೋಜನೆ ಅಡಿ 736 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

    ಈ ಕಾರ್ಡ್ ಫಲಾನುಭವಿಗಳು ಯಾರು: ರಾಜ್ಯದಲ್ಲಿ ವಾಸವಾಗಿರುವ ಹಾಗೂ “2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ” (ಬಿ.ಪಿ.ಎಲ್ ಕಾರ್ಡ್) ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು. ರಾಜ್ಯದಲ್ಲಿ ವಾಸವಾಗಿರುವ ಹಾಗೂ “2013 ರ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ” ಪ್ರಕಾರ ಅರ್ಹತಾ ಕಾರ್ಡ್ ಇಲ್ಲದ ಹಾಗೂ ಆದ್ಯತೇತರ ಕಾರ್ಡ್(ಎ.ಪಿ.ಎಲ್) ಹೊಂದಿರುವ ರೋಗಿಗಳು ಎಂದು ಹೇಳಿದ ಡಿಎಚ್‍ಒ ಡಾ.ಹೆಡೆ ಅವರು, ಆರೋಗ್ಯ ಕರ್ನಾಟಕದಡಿ ಚಿಕಿತ್ಸೆ ನೀಡುವು ವಿದಾನಗಳನ್ನು ಐದು ರೀತಿಯಾಗಿ ವಿಂಗಡಿಸಲಾಗಿದೆ ಎಂದರು.

     ಈ ಯೋಜನೆಯಡಿಯಲ್ಲಿ ಯಾವ ಸೌಲಭ್ಯ ಎಲ್ಲಿ ಸಿಗುತ್ತದೆ : ಪ್ರಥಮ ಹಂತದ ಕಾಯಿಲೆಗಳಾದ ತಾಯಿ ಮತ್ತು ಮಕ್ಕಳ ಹಾಗೂ ಜ್ವರ, ಕೆಮ್ಮು, ವಾಂತಿ, ಬೇಧಿ ಮುಂತಾದ ಎಲ್ಲಾ ರೀತಿಯ ಪ್ರಥಮ ಹಂತದ ಆರೋಗ್ಯ ಸೇವೆಗಳ ಜೊತೆಗೆ, ಸಾಮಾನ್ಯ ದ್ವಿತೀಯ ಹಂತದ ಕಾಯಿಲೆಗಳಾದ ಹೆರಿಗೆ ಸೇವೆ, ಡೆಂಗ್ಯೂ, ಮಲೇರಿಯಾ, ಮೂಳೆ ಮುರಿತ, ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಒಳಗೊಂಡಂತೆ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ನೀಡಲಾಗುವುದು.

    ಸಂಕೀರ್ಣ ದ್ವೀತಿಯ ಹಂತದ ಹಾಗೂ ತೃತಿಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ರೋಗಿಗಳು ಚಿಕಿತ್ಸೆಗಾಗಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ನೋಂದಣೆಯಾದ ಖಾಸಗಿ ಆಸ್ಪತ್ರೆಗಳಿಗೆ ರೆಫರಲ್ ಲೆಟರ್ ಅನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ಪಡೆಯಬಹುದು.

    ಅದೇ ರೀತಿಯಾಗಿ ತುರ್ತು ಸಂದರ್ಭದಲ್ಲಿ ರೋಗಿಗಳು ಯಾವುದೇ ರೆಫರಲ್ ಲೆಟರ್‍ಗಳು ಇಲ್ಲದೇ ನೇರವಾಗಿ ನೊಂದಾಯಿತ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಹೋಗಬಹುದು ಎಂದು ಅವರು ವಿವರಿಸಿದರು.

    ಆರೋಗ್ಯ ಕರ್ನಾಟಕ ಯೋಜನೆಯಡಿ ಎಷ್ಟು ಮೊತ್ತದ ಚಿಕಿತ್ಸೆ ಲಭ್ಯವಿದೆ ?: ನಿಗದಿತ ಸಂಕೀರ್ಣ ದ್ವೀತಿಯ ಹಂತದ ಕಾಯಿಲೆಗಳಿಗೆ ಸಂಭಂದಿಸಿದಂತೆ ಒಂದು ಕುಟುಂಬ ಐದು ಸದಸ್ಯರಿಗೆ ಒಂದು ವರ್ಷಕ್ಕೆ ರೂ 30 ಸಾವಿರಗಳ ಚಿಕಿತ್ಸಾ ಸೌಲಭ್ಯವಿದೆ. ನಿಗದಿತ ತೃತೀಯ ಹಂತದ ಚಿಕಿತ್ಸೆಗಳಿಗೆ ಪ್ಯಾಕೇಜ್‍ಗಳ ಆಧಾರದ ಮೇಲೆ ಒಂದು ಕುಟುಂಬದ 5 ಜನರಿಗೆ 1 ವರ್ಷಕ್ಕೆ ರೂ 1.50 ಲಕ್ಷಗಳು ಈ ಹಣ ಮುಗಿದ ನಂತರ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಳಿಗೆ ಹೆಚ್ಚುವರಿಯಾಗಿ ರೂ 50 ಸಾವಿರ ಚಿಕಿತ್ಸೆ ಲಭ್ಯವಿದೆ.

    ಸಾಮಾನ್ಯ ರೋಗಿಗಳಿಗೆ ಸಹ ಪಾವತಿ ಆಧಾರದ ಮೇಲೆ ಚಿಕಿತ್ಸೆ ಒದಗಿಸಲಾಗುತ್ತದೆ. ಪ್ಯಾಕೇಜ್ ಧರಗಳ ವೆಚ್ಚ ಅಥವಾ ನೈಜ ವೆಚ್ಚಗಳ ಪೈಕಿ ಯಾವುದು ಕಡಿಮೆ ಇರುತ್ತದೆಯೋ ಅದರ ಶೇ 30ರಷ್ಟು ಮರು ಪಾವತಿ ನೀಡಲಾಗುತ್ತದೆ ಹಾಗೂ ಇನ್ನುಳಿದ ಶೇ 70 ರಷ್ಟು ವೆಚ್ಚವನ್ನು ರೋಗಿಯೂ ಪಾವತಿ ಮಾಡಬೇಕಾಗುತ್ತದೆ ಎಂದು ಅವರು ವಿವರಿಸಿದರು.

      ಇವರು ಅರ್ಹರಲ್ಲ: ಕೇಂದ್ರ ಸರ್ಕಾರಿ ನೌಕರರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರು, ಕಾರ್ಮಿಕ ರಾಜ್ಯ ವಿಮಾ ಯೋಜನೆಯಡಿ ಒಳಗೊಂಡವರು, ಖಾಸಗಿ ಆರೋಗ್ಯ ವಿಮೆ ಹೊಂದಿದವರು, ನನ್ನ ಉದ್ಯೋಗದಾತರಿಂದ ಆರೋಗ್ಯ ವಿಮೆ ಯೋಜನೆಗಳ ರಕ್ಷಣೆ ಪಡೆದಿರುವ ನಾಗರಿಕರು, ಕರ್ನಾಟಕ ಶಾಸನ ಸಭೆಯ ಸದಸ್ಯರು.

       ಎಲ್ಲಿ ನೊಂದಣೆ ಮಾಡಬೇಕು: ಅನಾರೋಗ್ಯವಾದಾಗ ರೋಗಿಗಳು ಸರ್ಕಾರಿ ಆಸ್ಪತ್ರಗೆ ಹೋಗಬೇಕು. ಒಂದು ಬಾರಿ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ತೆಗೆದು ಕೊಂಡು ಹೋಗಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣೆ ಮಾಡಲಾಗುತ್ತದೆ.

       ಈ ಯೋಜನೆಗೆ ಆಧಾರ್ ಕಾರ್ಡ್ ಸಂಖ್ಯೆ ಬಳಸಲು ರೋಗಿಯು ಸ್ವಯಂ ದೃಡಿಕರಣ ಪತ್ರ ನೀಡಬೇಕು. ಸರ್ಕಾರಿ ಆದೇಶದಲ್ಲಿ ಪಟ್ಟಿ ಮಾಡಿರುವ ಎಮರ್ಜೆನಿ ಕೋಡ್ ಗಳಿಗೆ ತುರ್ತು ಸಂದರ್ಭದಲ್ಲಿ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಬಹುದು ಅಲ್ಲಿಯೇ ರೋಗಿಯ ನೋಂದಣೆ ಮಾಡಲಾಗುತ್ತದೆ. ಆಧಾರ್ ಕಾರ್ಡ್ ಇಲ್ಲದಿದ್ದಲ್ಲಿ ಪಡಿತರ ಚೀಟಿ ಆಧಾರದ ಮೇಲೆ ನೋಂದಣೆ ಮಾಡಲಾಗುತ್ತದೆ.ಇಂತಹ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುವುದು .ಆಧಾರ್ ಕಾರ್ಡ್ ಹಾಜರು ಪಡಿಸಿದ ನಂತರ ನೋಂದಾಯಿತ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡಲು ಅವಕಾಶ ಸಿಗುತ್ತದೆ.

      ಬಳ್ಳಾರಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಯಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಆರೋಗ್ಯಮಿತ್ರರನ್ನು ಸಂಪರ್ಕಿಸಿ ಮಾಹಿತಿ ಮತ್ತು ಸೇವೆಗೆ ನೆರವಾಗಲಿದ್ದಾರೆ ಎಂದು ವಿವರಿಸಿದ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಜಿಲ್ಲಾ ಸಂಯೋಜಕ ಹೊನ್ನುರಸಾಬ್ ಅವರ ಮೊ:7760999113 ಸಂಪರ್ಕಿಸಬಹುದು ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿಜಯಲಕ್ಷ್ಮೀ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಿಜಾಮುದ್ದೀನ್, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಒಂಪ್ರಕಾಶ ಕಟ್ಟಿಮನಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ಜಿಲ್ಲಾ ಸಂಯೋಜಕ ಹೊನ್ನುರಸಾಬ್,ಡಾ.ಲಕ್ಷ್ಮೀಕಾಂತ, ಡಾ.ಮೋಹನಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link