ಬ್ಯಾಡಗಿ:
ನಿರ್ಮಾಣ ಹಂತದಲ್ಲಿರುವ ಬ್ಯಾಡಗಿ ರೈಲ್ವೇ ನಿಲ್ದಾಣದ ನೂತನ ಕಟ್ಟಡ ಕಾಮಗಾರಿ ಕಳಪೆಯಾಗಿದ್ದು ಆರಂಭದ ಲ್ಲಿಯೇ ಅದರ ಗೋಡೆಗಳು ಬೀಳುವ ಹಂತಕ್ಕೆ ತಲುಪಿವೆ, ಕಟ್ಟಡ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಸಮಿತಿ ಹಾಗೂ ಜಯ ಕರ್ನಾಟಕ ಸಂಘದ ಕಾರ್ಯಕರ್ತರು ಆಗ್ರಹಿಸಿದ ಘಟನೆ ಸೋಮವಾರ ನಡೆದಿದೆ.
ನೂತನ ರೈಲು ನಿಲ್ದಾಣ ಕಟ್ಟಡ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಂಘಟನೆಗಳ ಸದಸ್ಯರು ಕಳಪೆ ಇಟ್ಟಿಗೆಗಳ ಬಳಕೆಯನ್ನು ವಿರೋಧಿಸಿದ ಅವರು, ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ, ಅಂತರಾಷ್ಟ್ರೀಯ ಖ್ಯಾತಿ ಮಾರುಕಟ್ಟೆ ಹೊಂದಿರುವ ಬ್ಯಾಡಗಿಯಲ್ಲಿ ಹೊಸ ನಿಲ್ದಾಣ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ, ಆದರೆ ರೈಲು ನಿಲ್ದಾಣ ಪಟ್ಟಣದಿಂದ ಸುಮಾರು 2 ಕೀ.ಮೀ. ದೂರದಲ್ಲಿರುವುದು ಸಾರ್ವಜನಿಕರ ನಿರ್ಲ ಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಕಾರಣವಾಗಿದೆ, ಹೇಳುವವರು ಕೇಳುವವರು ಇಲ್ಲದಂತಾಗಿದ್ದು ಗುತ್ತಿಗೆದಾರ ಮಾಡಿದ್ದೇ ಕಾಮಗಾರಿ ಎನ್ನುವಂತಾಗಿದ್ದು ದುರಂತದ ವಿಷಯ ಎಂದರು.
ಮತ್ತೊಂದು ಅವಘಡಕ್ಕೆ ತುತ್ತಾಗಲಿದೆ ಕಟ್ಟಡ: ಜಯ ಕರ್ನಾಟಕ ಸಂಘದ ಅಧ್ಯಕ್ಷ ಸುರೇಶ ಛಲವಾದಿ ಮಾತನಾಡಿ, ಇತ್ತೀಚೆಗಷ್ಟೇ ಅವೈಜ್ಞಾನಿಕ ನಿರ್ಮಾಣ ಹಾಗೂ ಕಳಪೆ ಗುಣಮಟ್ಟದ ವಸ್ತುಗಳ ಬಳಕೆಯಿಂದಾಗಿ ಧಾರವಾಡದಲ್ಲೊಂದು ಕಟ್ಟಡ ನೆಲಸಮವಾದ ಘಟನೆ ಇನ್ನೂ ಜನಮಾನಸದಿಂದ ದೂರ ಸರಿಯುವ ಮುನ್ನವೇ, ರೈಲ್ವೇ ನಿಲ್ದಾಣದಲ್ಲಿ ನಡೆಯುತ್ತಿರುವ ಕಟ್ಟಡವೂ ದುರಂತ ನಡೆದು ಹೋದರೂ ಆಶ್ವರ್ಯಪಡಬೇಕಾಗಿಲ್ಲ, ಇದಕ್ಕೆ ಕಾಮಗಾರಿಯಲ್ಲಿ ಬಳಸುತ್ತಿರುವ ಸಿಮೆಂಟ್ ಇಟ್ಟಿಗೆಗಳು ಕೈಬೆರಳುಗಳಿಂದಲೇ ಪುಡಿಯಾಗುತ್ತಿರುವುದೇ ಇದಕ್ಕೆ ಸಾಕ್ಷಿ, ಈಗಾಗಲೇ ಇಂತಹುದೇ ಸಾವಿರಾರು ಇಟ್ಟಿಗೆ ಬಳಸಿ ಕಟ್ಟಡ ನಿರ್ಮಾಣ ವಾಗಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ನೀಡುವಂತೆ ಆಗ್ರಹಿಸಿದರು.
ನೂಕಿದೆರೆ ಬಿಳುತ್ತೆ ಗೋಡೆ:ಅಂಗವಿಕಲರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಮಾತನಾಡಿ, ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಿದ ಹಳೆಯ ರೈಲ್ವೆ ನಿಲ್ದಾಣದ ಕಟ್ಟಡ ಇನ್ನೂ ನೂರು ವರ್ಷಗಳ ಕಾಲ ಬಾಳಿಕೆ ಬರಲಿದೆ, ಇದಕ್ಕೆ ಕಾರಣ ಅಂದು ಮಾಡಿದ ಗುಣಮಟ್ಟದ ಕಾಮಗಾರಿ ವಸ್ತುಗಳೇ ಕಾರಣ ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ನಿರ್ಮಾಣ ಮಾಡಲಾಗುತ್ತಿರುವ ನೂತನ ಕಟ್ಟಡದ ಗೋಡೆಗಳು ಮಾತ್ರ ನೂಕಿದರೆ ಬೀಳುವ ಸ್ಥಿತಿಯಲ್ಲಿದ್ದು ಸರ್ಕಾರದ ಕೋಟಿಗಟ್ಟಲೆ ಅನುದಾನ ಕಳಪೆ ಕಟ್ಟಡ ನಿರ್ಮಿಸಿದ ಗುತ್ತಿಗೆದಾರನ ಜೇಬು ತುಂಬಿಸುತ್ತಿದೆ, ಕೂಡಲೇ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥ ಗುತ್ತಿಗೆ ದಾರನನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು.