ಹುದ್ದೆ ಸಹಿತವಾಗಿ ಕೃಷಿ ಉಪ ನಿರ್ದೇಶಕರ ಕಚೇರಿ-2ರ ಸ್ಥಳಾಂತರಕ್ಕೆ ಸರ್ಕಾರದ ಆದೇಶ

ಹೊನ್ನಾಳಿ:

     ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದರಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೃಷಿ ಉಪ ನಿರ್ದೇಶಕರ ಕಚೇರಿ-2ನ್ನು ಹುದ್ದೆಗಳ ಸಹಿತ ಜಿಲ್ಲೆಯ ಹೊನ್ನಾಳಿ ತಾಲೂಕಿಗೆ ಸ್ಥಳಾಂತರಿಸುವಂತೆ ಕೃಷಿ ಸಚಿವರಲ್ಲಿ ಸತತ ಪ್ರಯತ್ನ ಮಾಡಿದ್ದರಿಂದ ಅವರ ಸೂಚನೆಯಂತೆ ಕಚೇರಿ ಸ್ಥಳಾಂತರಕ್ಕೆ ಸರಕಾರ ಆದೇಶ ಮಾಡಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

     ಶನಿವಾರ ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ಪಟ್ಟಣದಲ್ಲಿರುವ ಹಳೆ ಶಾಸಕರ ಭವನ, ಎಪಿಎಂಸಿ ಗೆಸ್ಟ್ ಹೌಸ್ ಹಾಗೂ ರೈತ ಭವನದ ಕಟ್ಟಡಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

      ಕೃಷಿ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿಗೆ ಹೊನ್ನಾಳಿ, ಚನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳನ್ನು ಒಳಪಡಿಸಲಾಗಿದ್ದು, ಅದನ್ನು ಕಾರ್ಯಗತಗೊಳಿಸಲು ಕೆಲವು ಕಟ್ಟಡಗಳನ್ನು ಪರಿಶೀಲಿಸಿ ನಂತರ ಸ್ಥಳಾಂತರಿಸಲಾಗುವುದು ಎಂದರು.

       ಸಚಿವರಿಗೆ ಅಭಿನಂದನೆ: ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮ ಸತತ ಪ್ರಯತ್ನದಿಂದ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸ್ಥಳಾಂತರಿಸಲು ಕೃಷಿ ಸಚಿವ ಶಿವಶಂಕರರೆಡ್ಡಿ ಯವರು ಅನುಮತಿ ನೀಡಿದ್ದಕ್ಕೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು. 2011-12ರಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಲ್ಯಾಂಡ್ ಆರ್ಮಿ ಇಲಾಖೆಗಳನ್ನು ತಾವು ಮಂಜೂರು ಮಾಡಿಸಿದ್ದಾಗಿ ರೇಣುಕಾಚಾರ್ಯ ತಿಳಿಸಿದರು.

        ಕೃಷಿ ಉಪ ನಿರ್ದೇಶಕಿ ಹಂಸವೇಣಿ ಮಾತನಾಡಿ, ಕೃಷಿ ಉಪ ನಿರ್ದೇಶಕರ ಕಚೇರಿಯಲ್ಲಿ ಈ ಮೂರು ತಾಲೂಕುಗಳ ಆಡಳಿತ ಮತ್ತು ಅನುಷ್ಠಾನದ ಮೇಲುಸ್ತುವಾರಿಯನ್ನು ಈ ಹಂತದಲ್ಲಿಯೇ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು. ಇದಕ್ಕೂ ಮೊದಲು ಮೂರು ತಾಲೂಕುಗಳ ರೈತರು ದಾವಣಗೆರೆ ಉಪ ವಿಭಾಗಕ್ಕೆ ಬರಬೇಕಾಗಿತ್ತು. ಈಗ ಕಚೇರಿ ಇಲ್ಲಿಯೇ ಆರಂಭವಾಗುತ್ತಿರುವುದರಿಂದ ಮೂರೂ ತಾಲೂಕುಗಳ ರೈತರು ಅಲೆದಾಡುವುದು ತಪ್ಪಲಿದೆ ಎಂದರು.

      ಕಚೇರಿ ಹುದ್ದೆ ಸಹಿತ ಸ್ಥಳಾಂತರ: ಕೃಷಿ ಉಪ ನಿರ್ದೇಶಕರ ಕಚೇರಿ ವ್ಯಾಪ್ತಿ 2ಕ್ಕೆ, ಕೃಷಿ ಉಪ ನಿರ್ದೇಶಕರು(1), ತಾಂತ್ರಿಕ ಅಧಿಕಾರಿಗಳು(2), ಅಧೀಕ್ಷಕರು(1), ಪ್ರಥಮ ದರ್ಜೆ ಸಹಾಯಕರು(3), ದ್ವಿತೀಯ ದರ್ಜೆ ಸಹಾಯಕರು(3), ಡಿ ಗ್ರೂಪ್ ನೌಕರರು(2) ಸೇರಿದಂತೆ ಒಟ್ಟು 13 ಜನ ಇಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹಂಸವೇಣಿ ತಿಳಿಸಿದರು. ಜಿಪಂ ಉಪಾಧ್ಯಕ್ಷ ಸಿ. ಸುರೇಂದ್ರನಾಯ್ಕ, ತಾಪಂ ಸದಸ್ಯ ಸಿ.ಆರ್. ಶಿವಾನಂದ್, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ, ಸಹಾಯಕ ಕೃಷಿ ನಿರ್ದೇಶಕ ಬಸಪ್ಪ, ಡಾ. ಕೆಂಚಪ್ಪ ಬಂತಿ, ಬಿಜೆಪಿ ಮುಖಂಡ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap