ತುಮಕೂರು : ನಗರದ ವಾಯು ಮಾಲಿನ್ಯ ಆತಂಕಕಾರಿ ಸ್ಥಿತಿಗೆ

ತುಮಕೂರು

     ರಾಜ್ಯದ ಬೆಂಗಳೂರು, ತುಮಕೂರು ನಗರದಲ್ಲಿನ ವಾಯು ಮಾಲಿನ್ಯ ಆತಂಕಕಾರಿ ಸ್ಥಿತಿ ತಲುಪಿದೆ ಎಂದು ಗ್ರೀನ್ ಪೀಸ್ ಇಂಡಿಯಾ ಸಂಸ್ಥೆ ಎರಡು ವರ್ಷಗಳ ಹಿಂದೆ ವರದಿ ಬಹಿರಂಗಗೊಳಿಸಿತ್ತು.

    ವಾಯು ಮಾಲಿನ್ಯ ಪ್ರಮಾಣ 100 ಪಿಎಂ(ಪರ್ಟಿಕ್ಯುಲರ್ ಪರ್ ಮ್ಯಾಟರ್) ಮೀರಬಾರದು. ಆದರೆ ತುಮಕೂರು ನಗರದ ವಾಯು ಮಾಲಿನ್ಯ ಅಪಾಯ ಪ್ರಮಾಣ ಮೀರಿದೆ, 160ರಿಂದ 200 ಪಿಎಂವರೆಗೆ ಇದೆ ಎಂದು ತಜ್ಞರು ಹೇಳಿದ್ದಾರೆ.ಈ ಅವಧಿಯಲ್ಲಿ ತುಮಕೂರು ನಗರದಲ್ಲಿ ಮಾಲಿನ್ಯವನ್ನು ತಹಬದಿಗೆ ತರುವ ಗಂಭೀರ ಪ್ರಯತ್ನಗಳು ಆಗಿಲ್ಲ. ಹೀಗಾಗಿ ನಗರದ ಮಾಲಿನ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಸಾಲದಕ್ಕೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಆರಂಭವಾಗಿ ನೆಲ ಅಗೆದು ತೆಗೆದ ಮಣ್ಣಿನ ಧೂಳು ನಗರದ ತುಂಬಾ ಆವರಿಸಿದೆ. ಇದೂವರೆಗೂ ಮಳೆಗಾಲವಿದ್ದ ಕಾರಣ ಧೂಳಿನ ಸಮಸ್ಯೆ ಅಷ್ಟಾಗಿ ಕಾಡಿರಲಿಲ್ಲ. ಮಳೆಗಾಲ ಮುಗಿದಿದ್ದು ಬೇಸಿಗೆವರೆಗೂ ಧೂಳಿನ ಪ್ರಮಾಣ ಹೆಚ್ಚಾಗಿ ನಗರದಲ್ಲಿ ವಾತಾವರಣ ಮತ್ತಷ್ಟು ಕಲುಶಿತಗೊಳ್ಳುವುದು ಖಚಿತ.

     ಸ್ಮಾರ್ಟ್ ಸಿಟಿ ಕಾಮಗಾರಿಯ ಧೂಳಿನಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ. ಕಾಮಗಾರಿ ನಿರ್ವಹಿಸುವ ಅಧಿಕಾರಿಗಳು, ಗುತ್ತಿಗೆದಾರರು ಪರಿಸರ ರಕ್ಷಣಾ ಕ್ರಮಗಳನ್ನು ಅನುಸರಿಸುತ್ತಿಲ್ಲ, ಇದರಿಂದ ಜನರಿಗೆ ಉಸಿರಾಟದ ತೊಂದರೆ, ಶ್ವಾಸಕೊಶ ಸಂಬಂಧಿಸಿದ ಕಾಯಿಲೆ ಬರುತ್ತವೆ. ಧೂಳು ನಿಯಂತ್ರಿಸಿ, ಸಾರ್ವಜನಿಕ ಆರೋಗ್ಯ ಕಾಪಾಡಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಹಂಚಾಟೆ ಸಂಜೀವ್ ಕುಮಾರ್‍ರವರಿಗೆ ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರ ಪತ್ರ ಬರೆದು ಮನವಿ ಮಾಡಿದೆ.

    ವಾಯು ಮಾಲಿನ್ಯ ನಿಯಂತ್ರಣಕ್ಕೆ ಹಸಿರುಕರಣವೇ ಪರಿಹಾರ ಎನ್ನುವ ಪರಿಸರ ತಜ್ಞರು, ತುಮಕೂರಿನಲ್ಲಿ ಗಿಡ ಮರ ಬೆಳೆಸುವ ಕೆಲಸಗಳು ಆಂದೋಲನದ ರೀತಿ ಆಗಿಲ್ಲ. ಸಂಬಂಧಿಸಿದ ಇಲಾಖೆಗಳಾಗಲಿ, ಸ್ಥಳೀಯ ಸಂಸ್ಥೆಯಾಗಲಿ ಹಸಿರೀಕರಣಕ್ಕೆ ಈವರೆಗೂ ಒತ್ತು ನೀಡಿಲ್ಲ. ಬದಲಿಗೆ ಅಭಿವೃದ್ಧಿ ಹೆಸರಿನಲ್ಲಿ, ಇದ್ದ ಮರಗಳನ್ನು ಕಡಿಯುವುದು ಮುಂದುವರೆದಿದೆ. ವಾಯು ಮಾಲಿನ್ಯವನ್ನು ನಿಯಂತ್ರಣ ಮಾಡದಿದ್ದರೆ ಭವಿಷ್ಯದಲ್ಲಿ ಹೆಚ್ಚು ಬೆಲೆ ತೆರಬೇಕಾಗುತ್ತದೆ ಎನ್ನುತ್ತಾರೆ.

      ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳು ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಕೇಬಲ್, ಪೈಪ್ ಲೈನ್ ಅಳವಡಿಕೆ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಎಲ್ಲಾ ರಸ್ತೆಗಳು ಧೂಳಾವೃತವಾಗಿವೆ. ಅದರಲ್ಲೂ ಬಸ್ ನಿಲ್ದಾಣ ಸುತ್ತಮುತ್ತಲಿನ ಅಶೋಕ ರಸ್ತೆ, ಎಂ.ಜಿ. ರಸ್ತೆ, ಜನರಲ್ ಕಾರ್ಯಪ್ಪ ರಸ್ತೆ, ಜೆ.ಸಿ.ರಸ್ತೆ, ಬಿ.ಹೆಚ್.ರಸ್ತೆಗಳಲ್ಲಿ ದೊಡ್ಡ ಮಟ್ಟದ ಕಾಮಗಾರಿಗಳು ಆರಂಭವಾಗಿರುವುದರಿಂದ ಈ ಪ್ರದೇಶ ಧೂಳುಮಯವಾಗಿದೆ. ವಾಹನ ಸಂಚಾರದಿಂದ ಧೂಳು ಮೇಲೆದ್ದು ದಟ್ಟವಾಗಿ ಆವರಿಸಿ ಗಾಳಿಯಲ್ಲಿ ಸೇರಿ ಮಾಲಿನ್ಯ ಉಂಟುಮಾಡುತ್ತಿದೆ.

       ದಿನವಿಡೀ ರಸ್ತೆಯಲ್ಲಿರುವ ಸಂಚಾರಿ ಪೊಲೀಸರು, ಇಲ್ಲಿನ ಅಂಗಡಿಗಳ ವ್ಯಾಪಾರಸ್ಥರು, ಸಾರ್ವಜನಿಕರು ಈ ಧೂಳಿನಿಂದ ಉಸಿರುಕಟ್ಟುವಂತಾಗಿದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಬಳಲುವಂತಾಗಿದೆ. ಜನರಲ್ಲದೆ, ವಾಯು ಮಾಲಿನ್ಯ ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.

     ಧೂಳಿನಿಂದಾಗಿ ಚರ್ಮದ ಅಲರ್ಜಿ, ತಲೆ ಕೂದಲು ಉದುರುವುದು, ನೆಗಡಿ, ಶೀತಾ ಜಾಸ್ತಿಯಾಗುತ್ತದೆ, ಕಣ್ಣಿನ ದೋಷ ಉಂಟಾಗುತ್ತದೆ. ಧೂಳಿನ ಸಣ್ಣ ಕಣಗಳು ಶ್ವಾಸಕೋಶದಲ್ಲಿ ಸಂಗ್ರಹವಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವೀರಭದ್ರಯ್ಯ ಹೇಳುತ್ತಾರೆ. ಈಗಾಗಲೇ ಇಂತಹ ಸಮಸ್ಯೆ ಅನುಭವಿಸುತ್ತಿರುವ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ, ಬೇಸಿಗೆ ವೇಳೆಗೆ ಧೂಳಿನ ಪ್ರಮಾಣ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳೂ ಹೆಚ್ಚಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ರಸ್ತೆ ಬದಿಯ ಕಟ್ಟಡಗಳು, ಮರ-ಗಿಡಗಳ ಮೇಲೆ ಸಂಗ್ರಹವಾಗಿರುವ ಧೂಳನ್ನು ಗಮನಿಸಿದರೆ ಗಾಳಿಯಲ್ಲಿ ಎಷ್ಟೊಂದು ಪ್ರಮಾಣದಲ್ಲಿ ಧೂಳು ಅಡಗಿದೆ ಎಂಬುದು ತಿಳಿಯುತ್ತದೆ. ಕಾಮಗಾರಿ ನಡೆದಿರುವ ಪ್ರಮುಖ ರಸ್ತೆಗಳಲ್ಲಿ ಅಗತ್ಯವಿರುವ ಕಡೆ ನೀರು ಹಾಕಿ ಧೂಳು ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತದೆ. ಇದರ ಹೊರತಾಗಿ ಕಸಕ್ಕೆ ಬೆಂಕಿ ಹಚ್ಚುವುದನ್ನು ತಡೆದು ವಾಯು ಮಾಲಿನ್ಯವಾದಂತೆ ನಿಯಂತ್ರಿಸಲಾಗುತ್ತದೆ ಎಂದು ನಗರ ಪಾಲಿಕೆ ಪರಿಸರ ಇಂಜಿನಿಯರ್ ಮೃತ್ಯುಂಜಯ ಹೇಳಿದರು.

     ರಸ್ತೆ ಕಾಮಗಾರಿಗಳ ಧೂಳನ್ನು ನೀರು ಹಾಕಿ ತಡೆಯುವುದು ಸಾಧ್ಯವೇ ಇಲ್ಲ, ತುಮಕೂರಿನಲ್ಲಿ ಕುಡಿಯುವ ನೀರಿಗೆ ತೊಂದರೆ ಇರುವಾಗ ರಸ್ತೆಗೆ ಸುರಿದು ಪೋಲು ಮಾಡುವಷ್ಟು ನೀರು ಯಥೇಚ್ಚವಾಗಿಲ್ಲ. ಸ್ಮಾರ್ಟ್ ಸಿಟಿ ಅಥವಾ ಇನ್ನಾವುದೇ ಕಾಮಗಾರಿಗಳನ್ನು ಸಕಾಲದಲ್ಲಿ ಮುಗಿಸುತ್ತಿಲ್ಲ, ತಿಂಗಳುಗಟ್ಟಲೆ ವಿಳಂಬ ಮಾಡಲಾಗುತ್ತದೆ, ಜೊತೆಗೆ ಕಾಮಗಾರಿ ಮುಗಿದಿರುವ ರಸ್ತೆಗಳಿಗೆ ಕೂಡಲೇ ಡಾಂಬರು ಹಾಕಿದರೆ ಧೂಳನ್ನು ತಕ್ಕಮಟ್ಟಿಗೆ ನಿಯಂತ್ರಿಸಬಹುದು ಎಂದು ಸಿಜ್ಞಾ ಯುವ ಸಂವಾದ ಕೇಂದ್ರದ ಜ್ಞಾನ ಸಿಂಧು ಸ್ವಾಮಿ ಹೇಳಿದರು.

    ತುಮಕೂರಿನ ವಾಯು ಮಾಲಿನ್ಯ ಸ್ಥಿತಿ ಅಪಾಯದಲ್ಲಿದೆ. ಗಿಡಮರ ಬೆಳೆಸುವುದಷ್ಟೇ ಇದಕ್ಕೆ ಪರಿಹಾರ. ರಸ್ತೆ ಬದಿ, ಪಾರ್ಕ್‍ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಬೆಳೆಸಬೇಕು. ಸ್ಮಾರ್ಟ್ ಸಿಟಿ ಲಿಮಿಟೆಡ್‍ನವರು ಕಟ್ಟಡಗಳನ್ನು ಕಟ್ಟುವ ಮೊದಲು ಹಸಿರು ಬೆಳೆಸುವ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿತ್ತು. ಕೆರೆ ಕಟ್ಟೆಗಳಲ್ಲಿ ನೀರು ಇದ್ದರೆ ನೀರಿನ ತೇವಾಂಶ ಧೂಳನ್ನು ಹೀರಿಕೊಳ್ಳುತ್ತಿತ್ತು. ನಗರದಲ್ಲಿ ನೀರು ಸಂಗ್ರಹಿಸಲು ಇದ್ದ ಅಮಾನಿಕೆರೆಯ ನೀರನ್ನು ಖಾಲಿ ಮಾಡಿ ಅಲ್ಲಿ ಕಾಮಗಾರಿ ಆರಂಭಿಸಲಾಗಿದೆ. ನಗರದಲ್ಲಿದ್ದ ಅದೆಷ್ಟೋ ಮರಗಳನ್ನು ರಸ್ತೆ ಅಗಲೀಕರಣಕ್ಕಾಗಿ ಕಡಿದುಹಾಕಲಾಗಿದೆ, ಅದಕ್ಕೆ ಪರ್ಯಾಯವಾಗಿ ಗಿಡ ಮರ ಬೆಳೆಸುವ ಪ್ರಯತ್ನಗಳಾಗಿಲ್ಲ ಅದರ ಪರಿಣಾಮ ಇಂದು ತುಮಕೂರಿನ ವಾಯು ಮಾಲಿನ್ಯ ತೀರಾ ಅಪಾಯದ ಮಟ್ಟದಲ್ಲಿದೆ ಎಂದರು.

    ಜನರಲ್ಲಿ ಗಿಡಮರ ಬೆಳೆಸು ಆಸಕ್ತಿ ಬೆಳೆದಿಲ್ಲ. ಕನಿಷ್ಟ ಇರುವ ಮರಗಳನ್ನು ಉಳಿಸಿಕೊಳ್ಳುವ ಕಾಳಜಿ ಇಲ್ಲ. ಎಲೆ ಉದುರಿ ಕಸವಾಗುತ್ತದೆ ಎಂಬ ಸಣ್ಣ ವಿಚಾರಕ್ಕೆ ಮನೆ ಮುಂದಿನ ಮರ ಕಡಿಸಲು ಮುಂದಾಗುತ್ತಾರೆ. ಇದನ್ನೆ ನೆಪ ಮಾಡಿ ಆ ಮರ ಅಪಾಯದಲ್ಲಿದೆ ಎಂದ ವರದಿ ಸಿದ್ಧಪಡಿಸಿ ಮರ ಕಡಿದು ಉರುಳಿಸುವ ವ್ಯವಸ್ಥಿತ ಲಾಬಿ ಇಲ್ಲಿ ಸಕ್ರಿಯವಾಗಿದೆ ಎಂದರು.

    ತುಮಕೂರಿನಲ್ಲಿ ವಾಯು ಮಾಲಿನ್ಯದಿಂದ ಜನ ಕಾಯಿಲೆಗೀಡಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯವ ಜೊತೆಗೆ ನಗರಕ್ಕೆ ಅಂಟಿರುವ ಮಾಲಿನ್ಯ ಎಂಬ ಕಾಯಿಲೆ ನಿವಾರಣೆಗೆ ಮುಂದಾಗದಿದ್ದರೆ, ನಗರದಲ್ಲಿ ಜನ ವಾಸ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link