ಹಗರಿಬೊಮ್ಮನಹಳ್ಳಿ
ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿಯವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲು ರಾಜಕೀಯ ಪಕ್ಷಗಳೆಲ್ಲ ಒಂದಾಗಿ ಕಸರತ್ತು ನಡೆಸುತ್ತಿವೆ. ಆದರೂ ಅವರಲ್ಲಿ ಪ್ರಧಾನಮಂತ್ರಿ ಯಾರೆಂದು ಘಂಟಾಘೋಷವಾಗಿ ಹೇಳಲು ಆಗುತ್ತಿಲ್ಲ ಎಂದು ಮಾಜಿ ಸಂಸದ ಹಾಲಿ ಶಾಸಕ ಶ್ರೀರಾಮುಲು ಲೇವಡಿಮಾಡಿದರು.
ತಾಲೂಕಿನ ಹಂಪಾಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಸಂಸದ ಅಭ್ಯರ್ಥಿ ದೇವೇಂದ್ರಪ್ಪನವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಭ್ರಷ್ಟ, ದುರಾಡಳಿತ ನೀಡಿದ ಅನ್ಯಪಕ್ಷಗಳು ಒಂದಾಗಿ ಹೋರಾಟಮಾಡಿದರೂ ಬಿಜೆಪಿಯನ್ನು ಹಿಂದಿಕ್ಕಲಾಗಲಿ ಅಥವಾ ನರೇಂದ್ರ ಮೋದಿಯವರನ್ನು ಸೋಲಿಸಲಾಗಲಿ ಅವರಿಂದ ಸಾಧ್ಯವಿಲ್ಲ ಎಂದರು. ಬಿಜೆಪಿ ವಿರೋಧಿಸುವ ಹತ್ತಾರು ಜನರು ಪ್ರಧಾನಮಂತ್ರಿಗಳಾಗಬಯಸುವವರೇ ಇದ್ದಾರೆ. ವಾರದ ಪ್ರತಿದಿನಕ್ಕೊಬ್ಬರಂತೆ ಪ್ರಧಾನಮಂತ್ರಿ ಎಂದು ಘೋಷಣೆಯಾಗುತ್ತಿದೆ. ಆದರೆ, ಉತ್ತಮ ಆಡಳಿತ ನೀಡಿದ ಮೋದಿಯವರಂತೆ ಒಬ್ಬೇ ಒಬ್ಬ ಪ್ರಧಾನಮಂತ್ರಿಯಾಗುವ ಅರ್ಹತೆಯನ್ನು ಹೊಂದಿಲ್ಲವೆಂದು ಕುಟುಕಿದರು.
ನಾನು ಸಂಸದನಾಗಿ ಅನುದಾನ ಬಳಕೆಯಲ್ಲಿ ನಾನು ನಂ.1 ಆಗಿದ್ದು, ಬಳ್ಳಾರಿ ಲೋಕಸಭಾ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ರಸ್ತೆಗಳ, ಕುಡಿಯುವ ನೀರು, ನೀರಾವರಿ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲು ಮತ್ತು ಅಭಿವೃದ್ಧಿ ಪಡಿಸಲು ನಿರಂತರ ಪ್ರಯತ್ನಿಸಿದ್ದೇನೆ ಎಂದ ಅವರು. ಈ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಹಾಲಿ ಶಾಸಕ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮ ಬಿಜೆಪಿ ಆಡಳಿತ ಅವಧಿಯಲ್ಲಿ ನೇಮಿರಾಜ್‍ನಾಯ್ಕ ಶಾಸಕರಾಗಿದ್ದಾಗ ಹರಿದುಬಂದ ಅನುದಾನಕ್ಕಿಂತ ಈಗ ಕಡಿಮೆ ಇದ್ದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸಮಾಡುತ್ತಿದ್ದಾರೆ ಎಂದರು. ಒಟ್ಟಾರೆ ದೇಶದ ಅಭಿವೃದ್ಧಿಗೆ ದೇವೇಂದ್ರಪ್ಪನವರಿಗೆ ಮತನೀಡಿ ಆಯ್ಕೆಮಾಡಿ ಎಂದರು.
ಮಾಜಿ ಶಾಸಕ ನೇಮಿರಾಜ್‍ನಾಯ್ಕ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯಮಾಡುತ್ತಿರುವ ಶಾಸಕ ತಿಗಳನಕೆರೆ ಅಭಿವೃದ್ಧಿ ಮತ್ತು ನೀರು ತರುವಲ್ಲಿ ಜಾರಿಗೊಂಡ ಅನುದಾನ ಬಳಕೆಮಾಡದೆ ಕೈಬಿಟ್ಟ ಶಾಸಕ ಕ್ಷೇತ್ರದ ಅಭಿವೃದ್ಧಿ ಕುರಿತು ಬರೀ ಸುಳ್ಳನ್ನು ಹೇಳುತ್ತಾ ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು. ಮರಳು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆಲ್ಲ ಈ ಕ್ಷೇತ್ರದ ಶಾಸಕ ಕುಮ್ಮಕ್ಕು ಎಂದು ಶಾಸಕ ಭೀಮಾನಾಯ್ಕ ಹೆಸರೇಳದೆ ಟೀಕಿಸಿದರು. ಕ್ಷೇತ್ರ ಹಾಗೂ ಬಳ್ಳಾರಿ ಜಿಲ್ಲಾ ಅಭಿವೃದ್ಧಿಗಾಗಿ ಬಿಜೆಪಿಗೆ ಮತನೀಡಿ ಎಂದು ಮನವಿಮಾಡಿಕೊಂಡರು.
ಅಭ್ಯರ್ಥಿ ದೇವೇಂದ್ರಪ್ಪ ಮಾತನಾಡಿ ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಲು ಅವರನ್ನು ಬಲಪಡಿಸಲು ನಿಮ್ಮೆಲ್ಲರ ಆಶೀರ್ವದನಮಗೆ ಬೇಕು ಎಂದು ಮತಯಾಚಿಸಿದರು.ಇದಕ್ಕೂ ಮುನ್ನ ಮರಿಯಮ್ಮನಹಳ್ಳಿ, ಚಿಲಕನಹಟ್ಟಿ, ನಂತರ ತಂಬ್ರಹಳ್ಳಿ ಗ್ರಾಮಗಳಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ನರೆಗಲ್ ಕೊಟ್ರೇಶ್, ಜಿ.ಪಂ.ಸದಸ್ಯ ಮಲ್ಲಿಕಾರ್ಜುನ ನಾಯ್ಕ, ಗುರುಲಿಂಗನಗೌಡ, ಬಿಜೆಪಿ ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ನಿಂಗಪ್ಪ, ಹೊಳಗುಂದಿ ಶೇಖರಪ್ಪ, ಗಿರಿರಾಜರೆಡ್ಡಿ, ಕಿನ್ನಾಳ್ ಸುಭಾಷ್, ಬಾಳಪ್ಪ, ಶಿವಾನಂದ, ಮಹೇಂದ್ರ, ನಿರ್ಮಲ, ಚಿತ್ತವಾಡ್ಗಿ ಪ್ರಕಾಶ್, ಹರಪನಹಳ್ಳಿಯ ವಕೀಲ ಹಾಲೇಶ್, ರಾಜು ಪಾಟೀಲ್, ಉಮಾಪತಿ ಸ್ವಾಮಿ, ಹೋಟಲ್ ಸಿದ್ದರಾಜು ಮತ್ತಿತರರು ಇದ್ದರು.