ಬೆಂಗಳೂರು
ಶನಿವಾರ ರಾತ್ರಿ ನಿಧನರಾದ ಖ್ಯಾತ ನಟ, ಮಾಜಿ ಸಚಿವ ಅಂಬರೀಷ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ನಗರದ ಕಂಠೀರವ ಸ್ಟುಡಿಯೋ ಬಳಿಯ ರಾಜ್ ಕುಮಾರ್ ಸಮಾಧಿ ಪಕ್ಕ ಅಂಬರೀಷ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನೆರವೇರಿತು. ಚಿತ್ರರಂಗದ ನಾಲ್ಕೂವರೆ ದಶಕಗಳ ಕಾಲ ತಮ್ಮದೇ ಆದ ಛಾಪು ಮೂಡಿಸಿದ್ದ ಮೇರು ನಟ, ಎರಡೂವರೆ ದಶಕಗಳ ಕಾಲ ರಾಜಕೀಯ ರಂಗದಲ್ಲಿ ಹೆಗ್ಗುರುತುಗಳನ್ನು ಮೂಡಿಸಿದ್ದ ಅಂಬರೀಷ್ ಹೆಜ್ಜ್ಜೆಮೂಡದ ಹಾದಿಗೆ ಸರಿದರು.
ಅಂಬರೀಷ್ ಅವರ ಪುತ್ರ ಅಭಿಷೇಕ್ ಗೌಡ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಪತ್ನಿ ಸುಮಲತಾ ಹಾಗೂ ಅಪಾರ ಅಭಿಮಾನಿಗಳು, ಗಣ್ಯರ ಸಮ್ಮುಖದಲ್ಲಿ ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ನಂತರ ಶಿಷ್ಟಾಚಾರದಂತೆ ಅಂಬರೀಷ್ ಅವರ ಪಾರ್ಥೀವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಪೊಲೀಸರು ತೆರವುಗೊಳಿಸಿ ಅದನ್ನು ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದರು. ಮುಖ್ಯಮಂತ್ರಿ ಅವರು ನಂತರ ಅದನ್ನು ಪತ್ನಿ ಸುಮಲತಾ ಅವರಿಗೆ ನೀಡಿದರು.
ಎಲ್ಲಾ ರಾಜಕೀಯ ಪಕ್ಷಗಳ ನಾಯಕರು, ಚಿತ್ರೋದ್ಯಮದ ನಟ-ನಟಿಯರು, ಗಣ್ಯರು. ಸಮಾಜದ ಎಲ್ಲಾ ವರ್ಗಗಳ ಪ್ರಮುಖರು, ಅಭಿಮಾನಿಗಳ ಸಮ್ಮುಖದಲ್ಲಿ ಶೋಕಸಾಗರದಲ್ಲಿ ಅಂಬರೀಷ್ ಪಂಚ ಭೂತಗಳಲ್ಲಿ ಲೀನವಾದರು.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಸಭೆ ಪ್ರತಿಪಕ್ಷ ನಾಯಕ ಗುಲಾನಭಿ ಆಜಾದ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಡಿ.ಕೆ. ಶಿವಕುಮಾರ್, ಎಚ್.ಡಿ. ರೇವಣ್ಣ, ಕೆ.ಜೆ. ಜಾರ್ಜ್, ತೆಲಗು ನಟ ಮೋಹನ್ ಬಾಬು, ಚಿತ್ರೋದ್ಯಮಗದ ಗಣ್ಯರು ಅಂಬರೀಷ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್ ಹಾಗೂ ಕೆ.ಸಿ. ವೇಣುಗೋಪಾಲ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಸಂದೇಶದ ಪತ್ರವನ್ನು ಅಂಬರೀಶ್ ಪುತ್ರ ಅಭಿಷೇಕ್ ಗೌಡ ಅವರಿಗೆ ಹಸ್ತಾಂತರಿಸಿದರು.
ಇಂದು ಬೆಳಗ್ಗೆ ಮಂಡ್ಯದಿಂದ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಹೆಲಿಕಾಪ್ಟರ್ ಮೂಲಕ ನಗರಕ್ಕೆ ತಂದು ಕಂಠೀರವ ಸ್ಟುಡಿಯೋಗೆ ಮೆರವಣಿಗೆ ಮೂಲಕ ಕರೆ ತರಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
