ಬಳ್ಳಾರಿ
ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಅಂಗವಿಕಲರ ಸಮೀಕ್ಷೆಯನ್ನು ಅತ್ಯಂತ ಪ್ರಾಪರ್ ಆಗಿ ನಡೆಸಿ ಅಗತ್ಯ ಸೌಲಭ್ಯ ಕಲ್ಪಿಸಿ ಎಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ಬಸವರಾಜು ಅವರು ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ನಗರವು 5 ಲಕ್ಷ ಜನಸಂಖ್ಯೆ ಒಳಗೊಂಡಿದ್ದು, ಇದರಲ್ಲಿ ಶೇ.2ರಷ್ಟು ಜನರು ಅಂಗವಿಕಲರಿದ್ದಾರೆ. ನಿಖರ ಮಾಹಿತಿ ತಿಳಿದುಕೊಂಡು ಅವರಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅನುಕೂಲವಾಗುತ್ತದೆ ಎಂದರು. ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಎಂ.ಆರ್.ಡಬ್ಲ್ಯೂ ಗಳಿಗೆ ಸೂಕ್ತ ತರಬೇತಿ ನೀಡಿ ಶೀಘ್ರ ಸಮೀಕ್ಷೆ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಮಹಾನಗರ ಪಾಲಿಕೆ ಮತ್ತು ನಗರ ಸಂಸ್ಥೆಗಳು ಅಂಗವಿಕಲರಿಗೆ ಇದುವರೆಗೆ ಒದಗಿಸಿರುವ ಮೂಲಸೌಕರ್ಯಗಳನ್ನು ಕುರಿತು ನೀಡಿರುವ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇವಲ ಒಂದೆರಡು ನೀಡಿ ಕೈತೊಳೆದುಕೊಳ್ಳುವ ಕೆಲಸ ಮಾಡಬೇಡಿ ಎಂದರು.
ಅಂಗವಿಕಲರಿಗೆ ಮೀಸಲಿರಿಸಿರುವ ಅನುದಾನದಲ್ಲಿ ಕೇವಲ ದ್ವಿಚಕ್ರ ವಾಹನ ನೀಡುವುದಕ್ಕೆ ಮಾತ್ರವೇ ಎಲ್ಲ ಅನುದಾನ ಖರ್ಚು ಮಾಡುತ್ತಿ ರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಆಯುಕ್ತ ಬಸವರಾಜು ಅವರು ದ್ವಿಚಕ್ರ ವಾಹನವೊಂದೆ ಯಾಕೇ ಕೊಡ್ತಿರಾ ? ಗೈಡ್ ಲೈನ್ಸ್ ನಲ್ಲಿ ಅದೊಂದೆ ಇದೆಯಾ ? ಇನ್ನೂ ಅನೇಕ ಅಂಶಗಳು ಇವೆ; ಅವುಗಳನ್ನು ಓದಿ ಕ್ರಿಯಾಯೋಜನೆಯಲ್ಲಿ ಸೇರಿಸಿ ಅವುಗಳನ್ನು ಕಿಟ್ ರೂಪದಲ್ಲಿ ಕೊಡುವುದಕ್ಕೆ ಮುಂದಾಗಿ. ಈ ಮೂಲಕ ಹೆಚ್ಚಿನ ಸಂಖ್ಯೆಯ ಜನರಿಗೆ ಸೌಲಭ್ಯಗಳನ್ನು ಕಲ್ಪಿಸಿ ಎಂದು ತಾಕೀತು ಮಾಡಿದರು.
ಪಾಲಿಕೆ ಆಯುಕ್ತೆ ತುಷಾರಮಣಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹ್ಮದ್ ಮುನೀರ್ ಅವರು ಈ ವರ್ಷದ ಕ್ರಿಯಾಯೋಜನೆಯಲ್ಲಿ ಅಂಗವಿಕಲ ಸ್ನೇಹಿ ಶೌಚಾಲಯ ಹಾಗೂ ಪಾರ್ಕ್ ಗಳ ನಿರ್ಮಾಣ, ದ್ವಿಚಕ್ರ ವಾಹನವಷ್ಟೇ ಅಲ್ಲದೇ ಮನೆ ಒದಗಿಸುವಿಕೆ ಸೇರಿದಂತೆ ಇನ್ನೀತರ ಸೌಲಭ್ಯಗಳನ್ನು ನೀಡುವುದಕ್ಕೆ ಕ್ರಮವಹಿಸಲಾಗುವುದು ಎಂದರು.
ಅಂಗವಿಕಲರು ಬಳ್ಳಾರಿ ನಗರದಲ್ಲಿ ಅತಿಹೆಚ್ಚು ಬಳಸುವ 10 ಸ್ಥಳಗಳ ಪಟ್ಟಿ ಮಾಡಿ ಮತ್ತು ತುರ್ತಾಗಿ ಅಲ್ಲಿ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದ ಆಯುಕ್ತ ಬಸವರಾಜು ಅವರು ಸೂಚನೆ ನೀಡಿದರು. ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯಡಿ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಹಾಗೂ ಹಾಸ್ಟೆಲ್‍ಗಳಿಗೆ ಯಾರ್ಂಪ್, ಶೌಚಾಲಯ, ವ್ಹೀಲ್ ಚೇರ್ ಸೇರಿದಂತೆ ಅಂಗವಿಕಲ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲು ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ಅಂಗವಿಕಲರ ಕುಂದುಕೊರತೆ ಆಲಿಸಲು ಪ್ರತಿ ಇಲಾಖೆಗೆ ನೋಡಲ್ ಅಧಿಕಾರಿ ನೇಮಿಸಿ: ಅಂಗವಿಕಲರ ಕುಂದುಕೊರತೆಗಳನ್ನು ಆಲಿಸುವ ನಿಟ್ಟಿನಲ್ಲಿ ಪ್ರತಿ ಇಲಾಖೆಯಲ್ಲಿ ಒಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಯುಕ್ತ ಬಸವರಾಜು ಅವರು ಸೂಚಿಸಿದರು.
ಅಂಗವಿಕಲರು ಸಲ್ಲಿಸಿದ ಕುಂದುಕೊರತೆಗಳನ್ನು ಫಾಲೋ ಮಾಡಿ ಅವುಗಳನ್ನು ಬಗೆಹರಿಸಿ ಆದ್ಯತೆ ಮೇರೆಗೆ ಎಂದರು.
ಅಂಗವಿಕಲರ ಸ್ನೇಹಿ ಕೈಗಾರಿಕೆಗಳು, ಸಹಾಯಧನ, ತರಬೇತಿ ಸೇರಿದಂತೆ ಇನ್ನೀತರ ವಿಷಯಗಳು, ಕೃಷಿ ಸೌಲಭ್ಯಗಳ ಕುರಿತು ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು ನೀಡಿದ ಉತ್ತರಕ್ಕೆ ತೀವ್ರ ಅಸಮಾಧನ ವ್ಯಕ್ತಪಡಿಸಿದ ಆಯುಕ್ತರು ಮೊದಲು ಅಂಕಿ ಸಂಖ್ಯೆಗಳನ್ನಿಟ್ಟುಕೊಳ್ಳಿ ಸಮರ್ಪಕವಾಗಿ ಹಾಗೂ ಈ ರೀತಿಯ ಕೆಲಸಗಳು ಮಾಡುವುದಕ್ಕೆ ಕಾಳಜಿಬೇಕು; ಅದನ್ನು ಮೊದಲು ಬೆಳೆಸಿಕೊಳ್ಳಿ ಎಂದರು.
ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಕಲ್ಪಿಸಲಾದ ಸೌಲಭ್ಯಗಳು ಮತ್ತು ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಕೆ.ನಿತೀಶ್, ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಉಪ ಆಯುಕ್ತ ಪದ್ಮನಾಭ, ಸಲಹೆಗಾರ ಹಂಪಣ್ಣ, ಉಪ ವಿಭಾಗಾಧಿಕಾರಿಗಳಾದ ಲೋಕೇಶ, ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.