ಬೆಂಗಳೂರು
ರಾಜ್ಯದ ಪ್ರತಿಷ್ಠಿತ ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಕೆಂಗೇರಿಯ ಅವರ ನಿವಾಸದಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರೊ. ಡಾ. ಜಿ. ನಂಜುಂಡನ್ ಬೆಂಗಳೂರು ವಿಶ್ವವಿದ್ಯಾಲಯದ ಸಾಂಖ್ಯಿಕ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಂಗೇರಿ ಬಳಿಯ ನಾಗದೇವನಹಳ್ಳಿಯ ಅವರ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ನಾಲ್ಕು ದಿನಗಳಿಂದ ನಂಜುಂಡನ್ ವಿಶ್ವವಿದ್ಯಾಲಯಕ್ಕೆ ತೆರಳಿರಲಿಲ್ಲ.ಸಾಂಖ್ಯಿಕ ವಿಭಾಗ ಸಿಬ್ಬಂದಿ ಪ್ರೊ. ಡಾ. ಜಿ. ನಂಜುಂಡನ್‌ಗೆ ಅನಾರೋಗ್ಯವಾಗಿರಬಹುದು ಎಂದು ಮನೆಗೆ ಬಂದಿದ್ದರು. ಎಷ್ಟು ಕರೆದರೂ, ಫೋನ್ ಮಾಡಿದರೂ ಬಾಗಿಲು ತೆರೆದಿರಲಿಲ್ಲ. ಆಗ ಪತ್ನಿಗೆ ಮಾಹಿತಿಯನ್ನು ನೀಡಿದ್ದರು ಎನ್ನಲಾಗಿದೆ.
ತಮಿಳುನಾಡಿನಲ್ಲಿದ್ದ ಪತ್ನಿ ಆಗಮಿಸಿ ಫೋನ್ ಮಾಡಿ, ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ಆಗ ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಾಗಿಲು ಒಡೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪ್ರೊ. ಡಾ. ಜಿ. ನಂಜುಂಡನ್ 4 ದಿನದ ಹಿಂದೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೊ. ಡಾ. ಜಿ. ನಂಜುಂಡನ್ ಅನುವಾದಕರಾಗಿಯೂ ಉತ್ತಮ ಹೆಸರುಗಳಿಸಿದ್ದರು. ಡಾ. ಯು. ಆರ್. ಅನಂತಮೂರ್ತಿ ಅವರ ಕೃತಿಗಳನ್ನು ತಮಿಳಿಗೆ ಅನುವಾದ ಮಾಡಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಹ ಪಡೆದಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ