ಚಿತ್ರದುರ್ಗ :
ನೀವೆಲ್ಲ ಒಟ್ಟಾಗಿ ಬಸವ ಜಯಂತಿ ಆಚರಣೆ ಕಡೆಗೆ, ಬಸವಣ್ಣನ ವಿಚಾರಗಳ ಕಡೆಗೆ ಮುಖ ಮಾಡಿ ನಿಂತಿರುವುದು ಪ್ರಗತಿಪರ ಮತ್ತು ಬೆಳಕಿನೆಡೆಗೆ ಸಾಗುವ ಹೆಜ್ಜೆಯಾಗಿದ್ದು, ನಿಮ್ಮ ಜೀವನ ಸಾರ್ಥಕತೆಯತ್ತ ಸಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯ ಪಟ್ಟರು.
ಗ್ರಾಮದ ಬಸವಕೇಂದ್ರದ ವತಿಯಿಂದ ಬಸವಜಯಂತಿ ಮುನ್ನಾದಿನ ಆಯೋಜಿಸಿದ್ದ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ವಿಶೇಷ ಕಾರ್ಯಕ್ರಮದ ದಿವ್ಯಸಮ್ಮುಖ ವಹಿಸಿ ಶ್ರೀಗಳು ಮಾತನಾಡಿದರು ಬಸವಣ್ಣ ಕೇವಲ ವ್ಯಕ್ತಿ ಅಷ್ಟೇ ಅಲ್ಲ ಅವರೊಂದು ದೊಡ್ಡಶಕ್ತಿ. ಸಮಸ್ಯೆಗಳ ನಿವಾರಕ. ಸಮಾಜದ ವ್ಯಾದಿ ಪರಿಹಾರಕ. ಸಮಾಜದಲ್ಲಿ ನಾವು ಬದುಕಬೇಕಾದರೆ ಎಲ್ಲರೂ ಇರಬೇಕು. ಎಲ್ಲರೂ ಒಟ್ಟುಗೂಡಿ ಬದುಕಬೇಕು.
108 ವರ್ಷಗಳ ಹಿಂದೆ ಮೊಟ್ಟಮೊದಲು ಮುರುಘಾಮಠದ ಶಾಖಾಮಠವಾದ ದಾವಣಗೆರೆ ವಿರಕ್ತಮಠದಿಂದ ಬಸವ ಜಯಂತಿ ಆಚರಣೆಯನ್ನು ಪ್ರಾರಂಭಿಸಲಾಯಿತು. ಈಗ ಅದು ಅನೇಕ ದೇಶಗಳಲ್ಲಿ ಆಚರಿಸಲ್ಪಡುತ್ತಿದೆ ಎಂದ ಶರಣರು, ಈ ಭಾಗದ ನೀರಾವರಿ ವ್ಯವಸ್ಥೆಯ ಅಭಿವೃದ್ಧಿ ಹೋರಾಟಕ್ಕೆ ಮುರುಘಾಮಠ ಸದಾ ಸಿದ್ಧ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮದ ಭಂಡಾರಿ ಎಂ.ಎಂ. ರಾಜಪ್ಪ, ಬಸವಣ್ಣನ ತತ್ತ್ವಗಳು ಇಂದಿನ ಕಾಲಕ್ಕೆ ಅತ್ಯಗತ್ಯವಾಗಿವೆ. ಅವುಗಳನ್ನು ನಾವೆಲ್ಲ ಪಾಲಿಸಬೇಕು. ಆ ಹಿನ್ನೆಲೆಯಲ್ಲಿ ಮದ್ದೇರು ಗ್ರಾಮದಲ್ಲಿ ಈ ಉತ್ಸವವನ್ನು ಆಯೋಜಿಸಲಾಗಿದೆ. ನಮ್ಮಲ್ಲಿ ಸಮರ್ಥ ಯುವಪಡೆಯಿದೆ. ಆ ಎಲ್ಲಾ ಯುವಕರಿಗೆ ಮತ್ತು ಗ್ರಾಮಸ್ಥರಿಗೆ ಶರಣರ ಮಾರ್ಗದರ್ಶನ ಸದಾ ಇರಲಿ. ಮದ್ದೇರು ಗ್ರಾಮಕ್ಕು ಚಿತ್ರದುರ್ಗದ ಮುರುಘಾ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇದು ಬಹಳ ಹಿಂದಿನದು ಎಂದು ಹೇಳಿದರು.
ಹೊಳಲ್ಕೆರೆಯ ಮಾಜಿ ಶಾಸಕ ಎಂ.ಬಿ. ತಿಪ್ಪೇರುದ್ರಪ್ಪ, ಜಿ.ಪಂ. ಮಾಜಿ ಸದಸ್ಯ ಎಲ್.ಬಿ.ರಾಜಶೇಖರ್, ತಾಳ್ಯದ ಟಿ. ಹನುಮಂತಪ್ಪ, ಚಂದ್ರಶೇಖರ್ ಹಾಗು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ವೇದಿಕೆಯಲ್ಲಿದ್ದರು. ಮದ್ದೇರು ಗ್ರಾಮಸ್ಥರು ಮತ್ತು ಸುತ್ತಮುತ್ತ ಹಳ್ಳಿಗಳ ಸಾಕಷ್ಟು ಜನ ನೆರೆದಿದ್ದರು.ಮಾರುತಿ ಭಜನಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಡಾ. ಎಸ್.ಹೆಚ್. ಪಂಚಾಕ್ಷರಿ ಸ್ವಾಗತಿಸಿದರು. ಸ್ವಾಮಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
