ಪ್ರಸಕ್ತ ಕಾಲಘಟಕ್ಕೆ ಬಸವಣ್ಣರ ಚಿಂತನೆ ಪ್ರಸ್ತುತ: ಜಿಲ್ಲಾಧಿಕಾರಿ

ಚಿತ್ರದುರ್ಗ

    ದೇಶದ ಇತಿಹಾಸವನ್ನು ಗಮನಿಸಿದಾಗ 10-12 ನೇ ಶತಮಾನದ ಕಾಲಘಟ್ಟದಲ್ಲಿ ಭಕ್ತಿಯ ಚಿಂತನೆ ಉತ್ತುಂಗ ಸ್ಥಿತಿಯಲ್ಲಿತ್ತು. ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಅದನ್ನು ಸಾಮಾಜಿಕ ಚಿಂತನೆಯನ್ನಾಗಿ ಬದಲಾಯಿಸಿದವರು ಬಸವಣ್ಣನವರು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕತ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಸಮಾರಂಭವನ್ನು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

     ಭಾರತದಲ್ಲಿ 10 ರಿಂದ 11 ನೇ ಶತಮಾನದ ಕಾಲಘಟ್ಟ ಭಕ್ತಿ ಚಿಂತನೆಯ ಉತ್ತುಂಗದಲ್ಲಿತ್ತು. ಭಕ್ತಿ ಭಾವ ಸಮಾಜದಲ್ಲಿ ಬೀರಿದ ಪ್ರಭಾವದಿಂದ ಅನೇಕ ದಾರ್ಶನಿಕರು ಜನರ ಮನಸ್ಸಿನ ಮೇಲೆ ಭಕ್ತಿಯ ಭಾವನೆಯನ್ನು ಬೀರಿದರು. ಆದರೆ 12 ನೇ ಶತಮಾನದಲ್ಲಿ ಬಸವಣ್ಣನವರು ಹಾಕಿದ ಹಲವಾರು ಕ್ರಾಂತಿಕಾರಿ ಹೆಜ್ಜೆಗಳಿಂದ, ಭಕ್ತಿ ಭಾವನೆ, ಸಾಮಾಜಿಕ ಚಿಂತನೆಯತ್ತ ಜನರನ್ನು ತಿರುಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

     ಹೀಗಾಗಿ 12 ನೇ ಶತಮಾನ ದೇಶದ ದೃಷ್ಟಿಯಿಂದ ಅತ್ಯಂತ ಮಹತ್ವದ ಕಾಲಘಟ್ಟವಾಗಿದ್ದು, ಜಾತಿ, ಧರ್ಮಗಳ ಬೇಧ ಭಾವವನ್ನು ತೊಡೆದುಹಾಕಲು ಮಹತ್ವದ ವೇದಿಕೆಯಾಯಿತು, ಅಷ್ಟೇ ಅಲ್ಲದೆ ಪುರುಷ ಪ್ರಧಾನ ಸಮಾಜವನ್ನು ಸಮಾನತೆಯ ಸಮಾಜದತ್ತ ಕೊಂಡೊಯ್ಯಲು ನಾಂದಿ ಹಾಡಿತು. ಬಸವಣ್ಣನವರ ತತ್ವದಂತೆ ಇಷ್ಟ ಲಿಂಗ ಪೂಜಿಸುವುದು, ಅಂದರೆ, ನಮಗೆ ಏನು ಇಷ್ಟವೋ ಅದನ್ನೇ ಪಾಲಿಸಬೇಕು ಎನ್ನುವುದು.

      ಬಸವಣ್ಣನವರ ವಚನಗಳು ಕನ್ನಡ ಭಾಷೆಯಲ್ಲಿ ಅತ್ಯಂತ ಸರಳವಾಗಿ ಇದ್ದ ಕಾರಣಕ್ಕಾಗಿ, ಜನಸಾಮಾನ್ಯರಿಗೆ ಬಹು ಬೇಗ ಇಷ್ಟವಾಯಿತಲ್ಲದೆ, ಎಲ್ಲೆಡೆ ತಲುಪಲು ಸಾಧ್ಯವಾಯಿತು. ಬಸವಣ್ಣನವರ ತತ್ವ ಹಾಗೂ ಆದರ್ಶ ಸಿದ್ಧಾಂತಗಳು ಇಂದಿನ ಕಾಲಘಟ್ಟಕ್ಕೆ ಅತ್ಯಂತ ಪ್ರಸ್ತುತವೆನಿಸುತ್ತವೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಮಾತನಾಡಿ, ಬಸವಣ್ಣನವರು, ಸಮಾಜದಲ್ಲಿ ಮನೆ ಮಾಡಿದ್ದ ಕಂದಾಚಾರ, ಮೌಢ್ಯತೆ, ಜಾತೀಯತೆಯನ್ನು ವಿರೋಧಿಸಿದ ಮೊದಲಿಗರು. ಹಿಂದೂ ಧರ್ಮಕ್ಕೆ ಹೊಸ ಚೈತನ್ಯವನ್ನು ಅವರು ತುಂಬಿದರು. ಮಹನೀಯರ, ದಾರ್ಶನಿಕರನ್ನು ಇಂದು ನಾವು ಕೇವಲ ಭಾವಚಿತ್ರದೊಳಗಿರಿಸಿ, ಚೌಕಟ್ಟಿಗೆ ಸೀಮಿತಗೊಳಿಸಿದ್ದೇವೆ. ಮಹಾತ್ಮರನ್ನು ಹಾಗೂ ಅವರ ತತ್ವ ಸಿದ್ಧಾಂತಗಳನ್ನು ವಿಶಾಲವಾದ ಮನಸ್ಸಿನಿಂದ ನೋಡದೆ, ಸಣ್ಣ ದೃಷ್ಟಿಯಲ್ಲಿ ಕಾಣುತ್ತಿದ್ದೇವೆ.

      ದಾರ್ಶನಿಕರ ಜಯಂತಿ ಕಾರ್ಯಕ್ರಮಗಳು ಆಯಾ ಜಾತಿಗೆ ಮಾತ್ರ ಸೀಮಿತವಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಮಹಾತ್ಮಾ ಗಾಂಧೀಜಿ, ಬಸವಣ್ಣನಂತಹವರು ನಿಜಕ್ಕೂ ಇದ್ದರೇ ಎಂಬುದಾಗಿ ಮುಂದಿನ ವರ್ಷಗಳಲ್ಲಿ ನಮ್ಮ ಮಕ್ಕಳು ಪ್ರಶ್ನಿಸುವಂತಹ ಪರಿಸ್ಥಿತಿ ಬಂದರೂ ನಾವು ಅಚ್ಚರಿಪಡಬೇಕಿಲ್ಲ. ಸಂಕುಚಿತ ಮನೋಭಾವವನ್ನು ತೊರೆದು, ಜಾತಿ ವ್ಯವಸ್ಥೆ ತೊಡೆದು ಹಾಕಲು, ಬಸವಣ್ಣನವರು ಹಾಕಿಕೊಟ್ಟ ಮಾರ್ಗವನ್ನು ನಾವು ಅನುಸರಿಸಲು ಮುಂದಾಗಬೇಕಿದೆ ಎಂದರು.

        ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಮಹಾಂತೇಶ್ ಅವರು, ಜಾತಿ ಪದ್ಧತಿಯನ್ನು ವಿರೋಧಿಸಿ, ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದವರು ಬಸವಣ್ಣನವರು. ಬುದ್ಧ ಸಾಂಸ್ಕತಿಕ ವಿವೇಚನೆ, ವೈಚಾರಿಕತೆಯನ್ನು ಜಗತ್ತಿಗೆ ಕೊಟ್ಟರು. ಬಸವಣ್ಣನವರು ಕೂಡ ವೈಚಾರಿಕತೆಯನ್ನೇ ಬಿಂಬಿಸಿದರು. ಹೀಗಾಗಿ ಬಸವಣ್ಣನವರು ಪರ್ಯಾಯ ಬುದ್ಧ ಎಂಬುದರಲ್ಲಿ ಅನುಮಾನವಿಲ್ಲ.

       9 ಶತಮಾನಗಳ ಹಿಂದೆ ಬಸವಣ್ಣನವರು ಹುಟ್ಟಿದಾಗ ನಮ್ಮ ನಾಡಿನ ಸಮಾಜದ ಚಿತ್ರಣ ಬೇರೆಯೇ ಆಗಿತ್ತು. ಹಲವು ಮೂಢನಂಬಿಕೆಗಳು, ಜಾತಿ ಪದ್ಧತಿಗಳು ತೀವ್ರವಾಗಿತ್ತು. ಜಡ್ಡುಗಟ್ಟಿದ ಸಮಾಜಕ್ಕೆ ಚುರುಕು ಮೂಡಿಸಿ, ಸತ್ಯ, ಸರಳತೆ, ಸಜ್ಜನಿಕತೆಯನ್ನು ಬಸವಣ್ಣನವರು ಪರಿಚಯಿಸಿದರು. ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನಂತರದ ದಿನಗಳಲ್ಲಿ, ಅಂದರೆ ಐತಿಹಾಸಿಕ ಭಾರತದ ಸಮಾಜಕ್ಕೂ ಈಗಿನ ಸಮಾಜಕ್ಕೂ ಹೋಲಿಸಿದಾಗ ಊಹಿಸಲೂ ಸಾಧ್ಯವಾಗದಷ್ಟು ಬದಲಾವಣೆ ಆಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಬಸವಣ್ಣನವರು ಎಂದರೆ ಅತಿಶಯೋಕ್ತಿ ಆಗಲಾರದು.

      ಬಸವಣ್ಣನವರು ರೂಪಿಸಿದ ಅನುಭವ ಮಂಟಪ ವ್ಯವಸ್ಥೆ, ಇಡೀ ಜಗತ್ತಿನಲ್ಲಿ ಎಲ್ಲೂ ಇರಲಿಲ್ಲ ಎಂಬುದನ್ನು ಇತಿಹಾಸಕಾರರೇ ಒಪ್ಪುತ್ತಾರೆ. ಇಲ್ಲಿ ಎಲ್ಲರಿಗೂ ಸಮಾನತೆ ಇತ್ತು. ಕಲ್ಯಾಣ ಕ್ರಾಂತಿಯ ಬಳಿಕ, ಇದುವರೆಗೂ ಬಸವಣ್ಣನವರ ಸುಮಾರು 1500 ವಚನಗಳು ಮಾತ್ರ ದೊರೆತಿವೆ. ಅಲ್ಲಮಪ್ರಭು, ಮಡಿವಾಳ ಮಾಚಿದೇವರು ಸೇರಿದಂತೆ ಹಲವರು ವಚನ ಸಾಹಿತ್ಯ ಉಳಿಸಲು ಶ್ರಮಿಸಿದರು. ಜಾತಿ, ಧರ್ಮಗಳು, ಮೂಢನಂಬಿಕೆಗಳ ವಿರೋಧಗಳಂತಹ ವಿಷಯಗಳಲ್ಲಿ ಬಸವಣ್ಣನವರು ಮಾಡಿದಂತಹ ಕ್ರಾಂತಿಯನ್ನು ಇದುವರೆಗೂ ಯಾರೂ ಮಾಡಲು ಸಾಧ್ಯವಾಗಿಲ್ಲ. ಜಾತೀಯತೆಯನ್ನು ತೊಡೆದುಹಾಕಬೇಕೆ ಹೊರತು, ಅದನ್ನು ಇನ್ನಷ್ಟು ಬೆಳೆಸುವುದು ಸರಿಯಲ್ಲ. ಮನುಷ್ಯ ಮನುಷ್ಯನ್ನಾಗಿ ನೋಡಬೇಕೆ ಹೊರತು, ಜಾತಿಯಿಂದಲ್ಲ.

       ಆದರೆ ಇಂದಿನ ದಿನಮಾನಗಳಲ್ಲಿ ಜಾತೀಯತೆಯನ್ನು ಹೆಚ್ಚಿಸುವಂತಹ ಕಾರ್ಯಗಳೇ ನಡೆಯುತ್ತಿದ್ದು, ಬಸವಣ್ಣನವರ ವಚನ ತತ್ವಗಳಿಗೆ ವೈರುಧ್ಯವಾಗಿ ಸಮಾಜದಲ್ಲಿ ಜಾತಿ, ಧರ್ಮ ಎನ್ನುವ ಬೇಧಭಾವ ನಡೆಯುತ್ತಿರುವುದು ನಿಜಕ್ಕೂ ಇದು ಕಳವಳಕಾರಿ ಸಂಗತಿಯಾಗಿದೆ. ಬಸವಣ್ಣನವರ ತತ್ವ ಸಂದೇಶಗಳು ಸರ್ವಕಾಲಕ್ಕೂ ಸಲ್ಲುತ್ತವೆ. ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಸವಣ್ಣನವರನ್ನು ಗೌರವಿಸಿದಂತೆ ಎಂದರು.

         ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಡಿಡಿಪಿಐ ಅಂಥೋನಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ವಿವಿಧ ಸಮಾಜದ ಗಣ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕಲಾವಿದರು ಬಸವಣ್ಣನವರ ವಚನಗಾಯನ ಪ್ರಸ್ತುತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ