ಕಾರ್ಮಿಕರ ದುಡಿಮೆಯಿಂದ ಮೂಲಭೂತ ಸೌಲಭ್ಯ ಸೃಷ್ಟಿ

ದಾವಣಗೆರೆ :

    ಕಾರ್ಮಿಕರ ಹಗಲಿರುಳು ದೈಹಿಕ ದುಡಿಮೆಯ ಪ್ರತಿಫಲವಾಗಿ ಸಮಾಜದಲ್ಲಿ ಮೂಲಭೂತ ಸೌಕರ್ಯಗಳ ಸ್ಥಾಪನೆಯಾಗಿದ್ದು, ಅವರಿಗೆ ಸಲ್ಲಬೇಕಾದ ಸೌಲಭ್ಯಗಳು ಹಾಗೂ ಈ ಕುರಿತು ಅರಿವು ಮೂಡಿಸಬೇಕಾಗಿರುವುದು ಕಾರ್ಮಿಕ ಇಲಾಖೆಯ ಕರ್ತವ್ಯವಾಗಿದೆ ಎಂದು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರಿ ಕಾರ್ಯದರ್ಶಿ ಈ. ಚಂದ್ರಕಲಾ ನೀಡಿದರು.

    ನಗರದ ಕರೂರು ಇಂಡಸ್ಟ್ರಿಯಲ್ ಏರಿಯಾದ ಮಯೂರ ಆಪರೆಲ್ಸ್‍ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕರ ಇಲಾಖೆ ಹಾಗೂ ಮಯೂರ ಆಪರೆಲ್ಸ್ ಇವುಗಳ ಸಹಯೋಗದಲ್ಲ್ಲಿ ‘ಕಾರ್ಮಿಕ ಕಾನೂನುಗಳ ಹಾಗೂ ಸರಕು ವಾಹನಗಳಲ್ಲಿ ಕಾರ್ಮಿಕರ ಸಾಗಾಣಿಕೆ ತಡೆ’ ಕುರಿತು ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

     ಜನತೆ ಕಾನೂನು ಚೌಕಟ್ಟಿನಲ್ಲಿ ನಡೆದಾಗ ಅವರಿಗೆ ಕಾನೂನು ನೆರವಾಗುತ್ತದೆ. ಇಂದಿನ ದಿನಗಳಲ್ಲಿ ಮಹಿಳಾ ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಆರ್ಥಿಕ ಸಬಲತೆಗೆ, ಕುಟುಂಬ ನಿರ್ವಹಣೆಗೆ ದುಡಿಯುತ್ತಿದ್ದು, ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ಸುರಕ್ಷತೆ, ಭದ್ರತೆ, ವೇತನ ಮತ್ತು ಪರಿಹಾರಗಳ ಬಗ್ಗೆ ತಿಳಿಸುವುದು ಅವಶ್ಯಕವಾಗಿದೆ ಎಂದರು.

     ಕಾರ್ಮಿಕರು ತಮ್ಮ ಕೆಲಸಗಳಿಗೆ ಹೋಗುವ ಸಂದರ್ಭದಲ್ಲಿ ಪ್ರಯಾಣಿಕರಿಗಾಗಿ ಇರುವ ವಾಹನಗಳಲ್ಲಿ ಪ್ರಯಾಣಿಸಬೇಕು. ಸರಕು ವಾಹನಗಳಲ್ಲಿ ಪ್ರಯಾಣಿಸುವುದು ಕಾನೂನು ಬಾಹಿರವಾಗಿದ್ದು, ಸರಕು ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಂಭವಿಸಬಹುದಾದ ಅವಘಡ, ಅಪಘಾತಗಳಿಗೆ ಕಾನೂನಿನಡಿಯಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

   ಇಂದು ಮಹಿಳೆಯರು ಕೈಗಾರಿಕೆ, ಆಸ್ಪತ್ರೆ, ಶಾಲಾ-ಕಾಲೇಜು, ಕಾರ್ಖಾನೆ, ಗಣಿ ಮತ್ತು ಚಹಾ ತೋಟಗಳಲ್ಲಿ ದುಡಿಯುತ್ತಿದ್ದು, ಇವರಲ್ಲಿ ಸಂಘಟಿತ ವಲಯದ ವ್ಯಾಪ್ತಿಗೆ ಬಂದ ಮಹಿಳಾ ಕಾರ್ಮಿಕರು ತಮ್ಮ ಸಂಘಟಿತ ಶ್ರಮಶಕ್ತಿಯ ಫಲವಾಗಿ ಪ್ರಯೋಜನಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದರು.

    ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ಮಹಮ್ಮದ್ ಖಾಲೀದ್ ಮಾತನಾಡಿ, ಕಾರ್ಮಿಕರಿಗೆ ಸಂಚಾರ ಸುರಕ್ಷತೆ ಬಗ್ಗೆ ಅರಿವು ಹಾಗೂ ಭದ್ರತೆ ಅಗತ್ಯ. ಕಾರ್ಮಿಕರು ಸಣ್ಣ ಉಳಿತಾಯಕ್ಕಾಗಿ ಸುರಕ್ಷತಾರಹಿತ ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವದರಿಂದ ಭವಿಷ್ಯತ್ತಿನಲ್ಲಿ ದೊಡ್ಡ ಆಘಾತಗಳಿಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು. ಯಾವುದೇ ಕಾರಣಕ್ಕೂ ವೈಟ್‍ಬೋರ್ಡ್, ಗೂಡ್ಸ್‍ಗಾಡಿ ಟ್ರಾಕ್ಟರ್‍ಗಳಂತಹ ವಾಹನಗಳಲ್ಲಿ ಚಲಾಯಿಸುವುದು ಒಳಿತಲ್ಲ ಎಂದು ಸಲಹೆ ನೀಡಿದರು.

     ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹಮ್ಮದ್ ಜಹೀರ್ ಬಾಷಾ ಮಾತನಾಡಿ, ಕಾರ್ಮಿಕರು ಕಾರ್ಯನಿರ್ವಹಿಸುವ ಸ್ಥಳವು ದೂರವಿದ್ದಲ್ಲಿ, ಸಂಚರಿಸಲು ಸಮಸ್ಯೆ ಇದ್ದಲ್ಲಿ ಸಾರಿಗೆ ಅಧಿಕಾರಿಯ ಬಳಿ ತಮ್ಮ ಸಮಸ್ಯೆಯನ್ನು ಹಾಗೂ ಮನವಿಯನ್ನು ತಿಳಿಸಿ. ನಂತರ ನಾವು ಕೆಎಸ್‍ಆರ್‍ಟಿಸಿ ಅಧಿಕಾರಗಳೊಂದಿಗೆ ಚರ್ಚಿಸಿ ಕಾರ್ಮಿಕರ ಸುರಕ್ಷಿತ ಸಂಚಾರಕ್ಕೆ ಬಸ್ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

       ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‍ಕುಮಾರ್ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕಾರ್ಮಿಕರ ಒಳಿತಿಗಾಗಿ ಸುಮಾರು 45 ಕಾನೂನುಗಳಿವೆ. ಕಾರ್ಮಿಕರಿಗೆ ತಲುಪಬೇಕಾದ ಸೌಲಭ್ಯ, ಪರಿಹಾರ ಹಾಗೂ ಸುರಕ್ಷತೆಗೆ ಸಂಬಂಧಿಸಿದಂತೆ ಸೌಲಭ್ಯ ಪಡೆದುಕೊಳ್ಳುಲು ಕಾರ್ಮಿಕರಲ್ಲಿ ಸಂಘಟನೆ ಅತಿ ಮುಖ್ಯ. ದೇಶದ ಒಟ್ಟು ರಾಷ್ಟ್ರೀಯ ಉತ್ಪಾದನೆಯಲ್ಲಿ ಸಂಘಟಿತ ಕಾರ್ಮಿಕರ ಕೊಡುಗೆ ಶೇ.45 ರಷ್ಟು ಇದೆ. ಸಮೀಕ್ಷೆಗಳ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕಾರ್ಮಿಕರ ಸಂಖ್ಯೆ ಶೇ.35 ಆದರೂ, ಸಂಘಟಿತ ಕಾರ್ಮಿಕರ ಸಂಖ್ಯೆ ಶೇ.3 ಮಾತ್ರ.

       ನಗರ ಪ್ರದೇಶಗಳಲ್ಲಿ ಇರುವ ಎಲ್ಲಾ ಕಾರ್ಮಿಕರೂ ಕೂಡ ಸಂಘಟಿತರಾಗಿಲ್ಲ. ಅಸಂಘಟಿತ ಕಾರ್ಮಿಕರನ್ನು ಸಂಘಟಿಸುವ ಮೂಲಕ ಕಾರ್ಮಿಕ ವರ್ಗ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸಿ ಗುರಿ ಮಟ್ಟುಬೇಕಾಗಿದೆ ಎಂದರು.

        ದೇಶದ ಒಟ್ಟು ಉತ್ಪಾದನೆಯಲ್ಲಿ ಕಾರ್ಮಿಕರದ್ದೆ ಬಹುಪಾಲು. ಅವರ ಶ್ರಮದ ಫಲದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ದೇಶದ ಉಳಿವಿಗೆ ಕಾರ್ಮಿಕರು ಹಾಗೂ ರೈತರು ಅತಿ ಅವಶ್ಯಕ. ಬಂಡವಾಳ ಶಾಹಿ ವರ್ಗದ ದಬ್ಬಾಳಿಕೆಯನ್ನು ಹತ್ತಿಕಲು 1848 ರಲ್ಲಿ ಕಾರ್ಮಿಕರ ಚಳುವಳಿಯ ಪಿತಾಮಹ ಕಾರ್ಲ್‍ಮಾಕ್ರ್ಸ್ ಸಮ ಸಮಾಜ ನಿರ್ಮಾಣಕ್ಕೆ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಲು ಶ್ರಮಿಸಿದರು.

      ಕಾರ್ಮಿಕರು ಸಂಘಟಿತರಾದರೆ ಮಾತ್ರ ಸರ್ಕಾರದ ಸೌಲತ್ತುಗಳನ್ನು ಪಡೆಯಲು ಸಾಧ್ಯ. ಪ್ರಸ್ತುತ ಖಾಯಂ ಕಾರ್ಮಿಕರಿಗಿಂತ ಅರೆಕಾಲಿಕ ಕಾರ್ಮಿಕರು, ಅಪ್ರೆಂಟಿಸ್ ತರಬೇತಿದಾರರು, ಗುತ್ತಿಗೆ ಆಧಾರದ ಕಾರ್ಮಿಕರು ಹೆಚ್ಚಾಗುತ್ತಿದ್ದಾರೆ. ಇದರಿಂದ ಕಾರ್ಮಿಕರ ಸುಧಾರಣೆ ಹೆಸರಲ್ಲಿ ಕಾರ್ಮಿಕರನ್ನು ಕಡೆಗಣೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಮಿಕರಿಗೆ ಇರುವ ಕಾನೂನುಗಳ ಅರಿವು ಪಡೆದುಕೊಂಡು, ಮೊದಲು ಸಂಘಟಿತರಾಗಿ ತಮಗೆ ದೊರಕಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

       ಅನುಗ್ರಹ ಗಾರ್ಮೆಂಟ್ಸ್‍ನ ಮಾಲೀಕ ರಘು ಮೊಸಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರಿಗೆ ತಮ್ಮ ಸುರಕ್ಷತೆ ಬಗ್ಗೆ ಅರಿವಿರಬೇಕು. ಅಧಿಕಾರಿಗಳು ಹೇಳಿದಂತೆ ಯಾವುದೇ ಖಾಸಗಿ ಗೂಡ್ಸ್‍ಗಾಡಿಗಳಲ್ಲಿ ಸಂಚಾರ ಬೇಡ. ಇದರಿಂದ ಕಾರ್ಮಿಕರ ಭದ್ರತೆಗೆ ಅಪಾಯವೇ ಹೆಚ್ಚು. ನಮ್ಮಂತೆಯೇ ಇರುವ ಇತರೆ ಗಾರ್ಮೆಂಟ್ಸ್‍ನ ಮಾಲೀಕರ ಪರವಾಗಿ ಕೇಳಿಕೊಳ್ಳುವುದೇನೆಂದರೆ ಕಾರ್ಮಿಕರಿಗೆ ಬೆಳಿಗ್ಗೆ ಹಾಗೂ ಸಂಜೆ ಕೆಲಸ ಬಿಡುವ ವೇಳೆಗೆ ಅಗತ್ಯ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ದುಡಿಯುವ ಕೈಗಳಿಗೆ ನೆರವಾಗಬೇಕು ಎಂದು ಸಭೆಯಲ್ಲಿದ್ದ ಅಧಿಕಾರಿಗಳಲ್ಲಿ ಮನವಿ ಮಾಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್, 2ನೇ ವೃತ್ತ ಕಾರ್ಮಿಕ ನಿರೀಕ್ಷಕರಾದ ಮಮ್ತಾಜ್ ಬೇಗಂ, 3ನೇ ವೃತ್ತ ಕಾರ್ಮಿಕ ನಿರೀಕ್ಷಕರಾದ ವೇಮಣ್ಣ, ಕಾರ್ಯಕ್ರಮದ ಯೋಜನಾ ನಿರ್ದೇಶಕ ಪ್ರಸನ್ನಕುಮಾರ್ ಸೇರಿದಂತೆ ಮಯೂರ ಆಪರೆಲ್ಸ್ ಕಾರ್ಮಿಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap