ಹಾವೇರಿ :
ಮಾನವ ಬದುಕಿನ ಸರ್ವ ಸಮಸ್ಯೆಗಳಿಗೆ ಪರಿಹಾರ ವಚನ ಸಾಹಿತ್ಯದಲ್ಲಿದ್ದು, ಇಂಥ ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದ್ದು, ಇದಕ್ಕೆ ನಾಂದಿ ಹಾಡಿದ ವಿಶ್ವ ಗುರು ಬಸವಣ್ಣ ಜಗತ್ತಿನ ಮೊಟ್ಟ ಮೊದಲ ಮಹಾನ ಮಾನವತಾದಿ ಆಗಿದ್ದಾರೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಾನುಭದಲ್ಲಿ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ 886 ನೇ ಜಯಂತಿ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
12 ನೇ ಶತಮಾನದ ಬಸವಣ್ಣ ಆದಿಯಾಗಿ ಎಲ್ಲ ಶಿವಶರಣರು ತಮ್ಮ ಕಾಯಕದ ಅನುಭವವನ್ನು ಅನುಭಾವದ ಮಟ್ಟಕ್ಕೇರಿಸಿ ವಚನ ಸಾಹಿತ್ಯ ರಚಿಸಿದರು. ಜಾತಿ ವರ್ಣಗಳ ಕಟ್ಟಳೆಗಳ ಮೂಲಕ ಹಾಕಿದ್ದ ನಿಗೂಡ ದಿಗ್ಭಂಧನವನ್ನು ವಚನಗಳ ಮೂಲಕ ಕಿತ್ತೆಸಿದು, ಇಡೀ ಮಾನವ ಕುಲ ಒಂದಾಗಿ ಸಕಲ ಜೀವಾತ್ಮರಿಗೂ ಲೇಸೆಸುವ ಹಾಗೆ ಬದುಕಿಗೆ ಮುನ್ನುಡಿ ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಶಿಗ್ಗಾವಿಯ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಮಾತನಾಡಿ ಆಧುನಿಕ ಯುಗದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳುಚುತ್ತಿದ್ದು, ವರ್ಣಬೇಧ, ಲಿಂಗಬೇಧ, ವರ್ಗಬೇಧಗಳ ಸಂಕೋಲೆಯನ್ನು ತೆಗೆದು ಹಾಕಿ, ಸರ್ವ ಜನಾಂಗದ ಏಳ್ಗೆಯನ್ನು ಬಯಸಿ ವೈಚಾರಿಕತೆ ತಳಹದಿಯ ಮೇಲೆ ಮಾನವೀಯ ಮೌಲ್ಯಗಳ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ ನಿಜವಾಗಿಯೂ ವಿಶ್ವಗುರುವಾಗಿದ್ದಾನೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಗೋವಿಂದಸ್ವಾಮಿ ಮಾತನಾಡಿ, ಕೇವಲ ಮೇಲ್ವರ್ಗ ಆಸ್ತಿಯಾಗಿದ್ದ ಸಾಹಿತ್ಯವನ್ನು ವಚನ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೂ ಮುಟ್ಟಿಸಿದ ಬಸವಾದಿ ಶರಣರು ಬಡವರ ಮನೆಗೆ ದೇವರನ್ನು ತಂದು ಗುರು ಮನೆಯನ್ನು ಅರಮನೆಯನ್ನಾಗಿಸಿದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಕಾಶವಾಣಿ ಕಲಾವಿದೆ ಭಾರತಿ ಯಾವಗಲ್ಲ ವಚನ ಸಂಗೀತ ಪ್ರಸ್ತುತ ಪಡಿಸಿದರು. ಬಸವ ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಮಾರಂಭದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಮಹಾಂತಪ್ಪ ಹಲಗಣ್ಣನವರ, ಕಾರ್ಯದರ್ಶಿ ರಾಜೇಂದ್ರಬಾಬು ಚೌಶೆಟ್ಟಿ, ಎಸ್.ಎಸ್ ಮುಷ್ಠಿ, ಉಳಿವೆಪ್ಪ ಪಂಪಣ್ಣನವರ, ಮುರುಗೆಪ್ಪ ಕಡೆಕೊಪ್ಪ, ಶಿವಬಸಪ್ಪ ಮುದ್ದಿ, ವಿಜಯಾ ಗೋವಿಂದಸ್ವಾಮಿ, ವಿ.ವಿ ಬನ್ನಿಮಟ್ಟಿ, ಎ.ಎಚ್. ಕೋಳಿವಾಡ, ಎಸ್.ಪಿ ಹಳೇಮನಿ, ಎಸ್.ವಿ ಹಿರೇಮಠ, ಶಿವಲಿಂಗಯ್ಯ ಮಠಪತಿ.ಬಿ.ಬಸವರಾಜ ಮಲ್ಲಿಕಾರ್ಜುನ ಹಿಂಚಿಗೇರಿ ಕೆ.ಆರ್. ನಾಶೀಪುರ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
