ಬತ್ತಿದ ಜೀವಜಲಕ್ಕೆ ಜನ-ಜಾನುವಾರು ತತ್ತರ…!

ತುಮಕೂರು:

       ರಾಜ್ಯವಿಂದು ಎಂತಹ ಭೀಕರ ಸ್ಥಿತಿಗೆ ಸಿಲುಕಿದೆ ಎಂದರೆ ಧಾರ್ಮಿಕ ಕ್ಷೇತ್ರಗಳಲ್ಲೇ ನೀರಿಲ್ಲ. ಭಕ್ತರನ್ನು ಕ್ಷೇತ್ರಗಳಿಗೆ ಬರಬೇಡಿ ಎಂದು ಬೇಡಿಕೊಳ್ಳುವಷ್ಟರ ಸ್ಥಿತಿಗೆ ಧಾರ್ಮಿಕ ಕೇಂದ್ರಗಳು ಸಿಲುಕಿವೆ ಎಂದರೆ ನೀರಿನ ಹಾಹಾಕಾರ ಎಷ್ಟು ಗಂಭೀರತೆ ಪಡೆದಿದೆ ಎಂಬುದರ ಅರಿವಾಗುತ್ತದೆ.

       ಇನ್ನು ಜನ ಜಾನುವಾರುಗಳ ಪರಿಸ್ಥಿತಿಯಂತೂ ಚಿಂತಾಜನಕ. ಜನರಿಗೆ ಕುಡಿಯುವ ನೀರೇ ಸಿಗುತ್ತಿಲ್ಲದ ಈ ಸಂದರ್ಭದಲ್ಲಿ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಮತ್ತಷ್ಟು ಸಮಸ್ಯೆಯಾಗಿದೆ. ಎಲ್ಲೋ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಎಲ್ಲ ಕಡೆ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಒಂದೆರಡು ಉದಾಹರಣೆಗಳನ್ನು ಗಮನಿಸಿದರೆ ನೀರಿನ ಸಮಸ್ಯೆ ಎಷ್ಟು ಭೀಕರ ಎಂಬುದು ತಿಳಿಯುತ್ತದೆ.

       ಚಿತ್ರದುರ್ಗ ತಾಲ್ಲೂಕಿನ ಓಬಣ್ಣನ ಹಳ್ಳಿಯ ಜನ ಸ್ನಾನ ಮಾಡಿ ಎರಡು ವಾರಗಳು ಕಳೆದಿವೆಯಂತೆ. ಇಲ್ಲಿ ನೀರೇ ಸಿಗುತ್ತಿಲ್ಲ. ಸ್ನಾನ ಮಾಡಲು ಆಗುತ್ತಿಲ್ಲ. ಬೆವರಿನ ವಾಸನೆಯಿಂದ ಪಾರಾಗಲು ಒದ್ದೆಬಟ್ಟೆಯಲ್ಲಿ ಮೈ ಹೊರಸಿಕೊಳ್ಳುತ್ತಿದ್ದಾರೆ. ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯನ್ನೇ ಈ ಗ್ರಾಮ ಬಹಿಷ್ಕರಿಸಿತ್ತು. ಪಕ್ಕದ ಉಪ್ಪನಾಯಕನಹಳ್ಳಿಯ ರೈತರೊಬ್ಬರ ಕೊಳವೆ ಬಾವಿಯೇ ಈ ಗ್ರಾಮಕ್ಕೆ ಸದ್ಯ ನೀರಿನ ಆಸರೆ. ನಿತ್ಯ ಎರಡು ಗಂಟೆ ಮಾತ್ರವೇ ಅಲ್ಲಿ ನೀರು ದೊರಕುತ್ತಿದ್ದು, ಈ ನೀರಿಗಾಗಿ ಜನ ಸಾಲುಗಟ್ಟಿ ನಿಲ್ಲಬೇಕಾಗಿದೆ. ಇದು ಮಾಧ್ಯಮಗಳಲ್ಲಿ ಬಹಿರಂಗವಾಗಿರುವ ಒಂದು ವರದಿ.

         ಮೇ 17 ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಒಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದರು. ಕ್ಷೇತ್ರದಲ್ಲಿ ನೀರಿನ ಅಭಾವ ಎದುರಾಗಿರುವ ಕಾರಣ ಭಕ್ತರು ಪ್ರವಾಸ ಮುಂದೂಡುವಂತೆ ಮನವಿ ಮಾಡಿದರು. ಬಹುಶಃ ಇದೇ ಮೊದಲ ಬಾರಿಗೆ ಇಂತಹ ಪ್ರಕಟಣೆಯೊಂದು ಹೊರಬಿದ್ದಿರಬಹುದು. ಸದಾ ಹರಿಯುತ್ತಿದ್ದ ನೇತ್ರಾವತಿ ನದಿ ನೀರಿಲ್ಲದೆ ಬತ್ತಿ ಹೋಗಿದೆ. ಗುಂಡಿಗಳಲ್ಲಿ ಸಂಗ್ರಹವಾಗಿರುವ ನೀರೇ ಈಗ ಭಕ್ತರಿಗೆ ಆಸರೆ. ಇದೇ ನೀರಿನಲ್ಲಿ ಸ್ನಾನ ಮಾಡುವಂತಹ ಪರಿಸ್ಥಿತಿ. ಇದನ್ನೆಲ್ಲ ಗಮನಿಸಿಯೇ ಧರ್ಮಾಧಿಕಾರಿಗಳು ಈ ಮನವಿ ಮಾಡಿರುವುದು.

         ಮೇಲ್ಕಂಡ ಎರಡು ಉದಾಹರಣೆಗಳನ್ನು ಗಮನಿಸಿದರೆ ಸಾಕು ರಾಜ್ಯದಲ್ಲಿ ನೀರಿನ ಅಭಾವ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಇದೇ ಸಮಯಕ್ಕೆ ಶಿರಾ ತಾಲ್ಲೂಕು ಗುಮ್ಮನಹಳ್ಳಿ ಸಮತಾ ವಿದ್ಯಾಲಯದಲ್ಲಿ ಮೂರು ದಿನಗಳ ಸಮ್ಮೇಳನವೊಂದು ಆಯೋಜನೆಗೊಂಡಿತ್ತು. ಬರಮುಕ್ತ ಕರ್ನಾಟಕ ಶೀರ್ಷಿಕೆಯಡಿ ಆಯೋಜನೆಗೊಂಡ ಈ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿರುವ ಜಲತಜ್ಞ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಡಾ.ರಾಜೇಂದ್ರ ಸಿಂಗ್ ಬಹಳ ಗಂಭೀರವಾದ ವಿಷಯಗಳನ್ನು ಮುಂದಿಟ್ಟಿದ್ದಾರೆ. ನೀರಿಗೆ ಹಾಹಾಕಾರ ಉಂಟಾಗಿರುವ ಈ ಸಂದರ್ಭದಲ್ಲಿ ಇಂತಹ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವೂ ಇದೆ.

         ನೀರಿನ ಮಿತ ಬಳಕೆ ಹಿನ್ನೆಲೆಯಲ್ಲಿ ಜಲ ಸಾಕ್ಷರತಾ ಕೇಂದ್ರಗಳ ಸ್ಥಾಪನೆಯ ಬಗ್ಗೆ ಅವರು ಪ್ರತಿಪಾದಿಸಿದ್ದಾರೆ. ಜಲಮೂಲ ತಾಣಗಳನ್ನು ಅಭಿವೃದ್ಧಿಪಡಿಸಲು ಒತ್ತಾಯಿಸಿದ್ದಾರೆ. ಕೆರೆ, ಕುಂಟೆ, ಬಾವಿಗಳಲ್ಲಿ ನೀರು ಇರುವಂತೆ ನೋಡಿಕೊಳ್ಳುವ ಬಗ್ಗೆ ಪ್ರತಿಪಾದಿಸಿದ್ದಾರೆ. ಗ್ರಾಮಗಳಲ್ಲಿ ಗುಡಿ ಗೋಪುರಗಳನ್ನು ಕಟ್ಟುವ ಬದಲಿಗೆ ಗಂಗಮ್ಮನನ್ನೇ ದೇವರೆಂದು ಪೂಜಿಸಿ ಎಂದು ಕರೆ ಕೊಟ್ಟಿದ್ದಾರೆ. ಅತ್ಯಮೂಲ್ಯ ಸಲಹೆಗಳಿವು.

        ಮನುಷ್ಯ ಹಣ ತೆತ್ತು ಏನು ಬೇಕಾದರೂ ತನ್ನದಾಗಿಸಿಕೊಳ್ಳಬಹುದು. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ನೈಸರ್ಗಿಕವಾಗಿ ಏನೆಲ್ಲಾ ಕಳೆದುಕೊಳ್ಳಬೇಕೋ ಅದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದೇವೆ. ಅದರ ಪರಿಣಾಮವನ್ನು ನಾವು ಇಂದೇ ಉಣ್ಣಬೇಕಾಗಿದೆ.
ಬಹಳ ವರ್ಷಗಳು ಬೇಕಾಗಿಲ್ಲ. 25 ವರ್ಷಗಳ ಹಿಂದಿನ ದಿನಗಳನ್ನು ಒಮ್ಮೆ ಸ್ಮರಿಸಿಕೊಂಡರೆ ಸಾಕು. ಯಥೇಚ್ಛವಾಗಿ ಮುಂಗಾರು ಮಳೆ ಸುರಿಯುತ್ತಿತ್ತು.

        ಕೆರೆಕಟ್ಟೆಗಳು ಭರ್ತಿಯಾಗುತ್ತಿದ್ದವು. ಮಳೆಗಾಲ ನಿಂತರೂ ಕೆರೆಕಟ್ಟೆಗಳ ಹಿಂದೆ ಭತ್ತ ಇತ್ಯಾದಿ ಬೆಳೆಯುತ್ತಿದ್ದರು. ಬೇಸಿಗೆ ಬಂದರೂ ನೀರಿನ ಜೋಗು ಬತ್ತುತ್ತಿರಲಿಲ್ಲ. ಒಂದು ವೇಳೆ ಮೇಲ್ಭಾಗದಲ್ಲಿ ನೀರು ಬತ್ತಿ ಹೋಗಿದ್ದರೂ ಒರತೆ ತೆಗೆದರೆ ಸಾಕು ನೀರು ಉಕ್ಕುತ್ತಿತ್ತು. ಮರಳಿನ ರಾಶಿ ರಾಶಿಯೇ ಹಳ್ಳಕೊಳ್ಳಗಳಲ್ಲಿ ತುಂಬಿರುತ್ತಿತ್ತು. ಅಂತರ್ಜಲ ಎಲ್ಲ ಕಡೆ ವ್ಯಾಪಿಸಿತ್ತು. ಬೇಸಿಗೆ ಬಂದರೂ ಕುಡಿಯುವ ನೀರಿಗೆ ಸಂಕಷ್ಟ ಎದುರಾಗುತ್ತಿರಲಿಲ್ಲ.

        ಅಂತಹ ದಿನಗಳನ್ನೇ ಜನ ನೋಡಿರಲಿಲ್ಲ. ಆಗ ಬೋರ್‍ವೆಲ್‍ಗಳ ಸಂಖ್ಯೆಯೂ ಇಷ್ಟೊಂದು ಇರಲಿಲ್ಲ. ನಗರೀಕರಣ ಹೆಚ್ಚಾದಂತೆ, ಆಧುನಿಕ ಕಟ್ಟಡಗಳು ಹೆಚ್ಚು ಹೆಚ್ಚಾಗಿ ತಲೆ ಎತ್ತಿದಂತೆಲ್ಲಾ ಹಳ್ಳಕೊಳ್ಳಗಳ ಮರಳು ಕ್ರಮೇಣ ಕ್ಷೀಣಿಸಿತು. ಮರಳೆಲ್ಲ ಬೃಹತ್ ಕಟ್ಟಡದ ರೂಪವಾಗಿ ಪರಿವರ್ತನೆಯಾಯಿತು. ಕೃಷಿ ಭೂಮಿ ಒತ್ತುವರಿಯಾಯಿತು. ಅರಣ್ಯವನ್ನೂ ಬಿಡಲಿಲ್ಲ. ಬೆಟ್ಟವನ್ನೆಲ್ಲಾ ಅಗೆಯಲಾಯಿತು. ಕ್ರಮೇಣ ಗಿಡ, ಮರಗಳು ಒಂದೊಂದಾಗಿ ಉರುಳುತ್ತಾ ಹೋದವು. ಆಗಸದಲ್ಲಿ ಮೋಡವನ್ನು ಕರಗಿಸಬೇಕಾದ ಮರಗಳ ಸಾಲು ಕಡಿಮೆಯಾದಂತೆಲ್ಲಾ ಮೋಡಗಳು ನಿಲ್ಲದೆ ಗಾಳಿಯಲ್ಲಿ ತೇಲಿ ಹೋಗಲಾರಂಭಿಸಿದವು. ಹೀಗೆ ಒಂದೊಂದಾಗಿ ಮನುಷ್ಯನಿಂದಲೇ ಆದ ಎಡವಟ್ಟುಗಳ ಪರಿಣಾಮ, ಪರಿಸರದ ಮೇಲೆ ನಿರಂತರ ಹೊಡೆತದ ಪರಿಣಾಮವಾಗಿ ನಿಗದಿತ ಸಮಯಕ್ಕೆ ಮಳೆಯೂ ಬಾರದೆ ರೈತ ಆಗಸದತ್ತ ನೋಡುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದಾನೆ.

          ಕೃಷಿ ಭೂಮಿಯೂ ಇಂದು ಫಲವತ್ತಾಗಿಲ್ಲ. ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಬಳಸಿದ ಪರಿಣಾಮ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಾಣುಗಳು ಸತ್ತು ಹೋಗಿವೆ. ಎರೆಹುಳುಗಳಂತಹ ಜೀವಾಣುಗಳು ಮಣ್ಣನ್ನು ಫಲವತ್ತಾಗಿ ಹದಗೊಳಿಸುವುದು ಮಾತ್ರವಲ್ಲದೆ ನೀರು ಸಂಗ್ರಹಣೆಗೆ ಯೋಗ್ಯ ಜೀವಾಣುಗಳಾಗಿದ್ದವು. ಇಂತಹ ಜೀವಾಣುಗಳು ನಾಶವಾದಂತೆಲ್ಲಾ ಭೂಮಿ ತನ್ನಲ್ಲಿದ್ದ ನೀರು ಸಂಗ್ರಹ ಶಕ್ತಿಯನ್ನೇ ಕಳೆದುಕೊಂಡಿದೆ.

         ಮಳೆಗಾಲಕ್ಕೆ ಮುಂಚಿತವಾಗಿ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು. ಕೆರೆಕಟ್ಟೆಗಳನ್ನು ಸುಸ್ಥಿತಿಯಲ್ಲಿಡಬೇಕು. ನೀರು ಕೊಚ್ಚಿಹೋಗದಂತೆ ಏರಿಯನ್ನು ಸುಭದ್ರಗೊಳಿಸಬೇಕು. ಕೆರೆಯ ಹೂಳು ಎತ್ತಬೇಕು. ಇಂತಹ ಹಲವು ಸುಧಾರಣಾತ್ಮಕ ಕಾರ್ಯಗಳಿಗೆ ಹೆಚ್ಚು ಗಮನ ಕೊಡಲಾಗಲಿಲ್ಲ. ಇದರಿಂದಾಗಿ ಈಗಾಗಲೇ ಬರಿದಾಗುತ್ತಿರುವ ಅಂತರ್ಜಲ ಮತ್ತಷ್ಟು ಪಾತಾಳಕ್ಕೆ ಇಳಿಯಿತು. ನೀರು ಸಂಗ್ರಹಿಸುವ ಮೂಲಗಳತ್ತ ಹೆಚ್ಚು ಗಮನ ಹರಿಸಿದ್ದರೆ ಪರಿಸ್ಥಿತಿ ಇಷ್ಟೊಂದು ಹದಗೆಡುತ್ತಿರಲಿಲ್ಲ. ಎಲ್ಲವೂ ಮುಗಿದ ಮೇಲೆ ಎನ್ನುವಂತೆ ನೀರಿಗೆ ಹಾಹಾಕಾರ ಉಂಟಾಗುತ್ತಿರುವ ಈ ದಿನಗಳಲ್ಲಿ ನೀರಿನ ಸಂರಕ್ಷಣೆಯ ವಿವಿಧ ಯೋಜನೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

         ಸರ್ಕಾರಗಳ ನಿರ್ಲಕ್ಷ್ಯದಂತೆಯೇ ಜನರ ಉದಾಸೀನವೂ ಇಲ್ಲಿ ಎದ್ದು ಕಾಣುತ್ತದೆ. ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ. ಯೋಜನೆಗಳ ಫಲ ಅಧಿಕಾರಿಗಳ ಜೇಬು ತುಂಬಿಸುತ್ತಿವೆ. ಇದರಲ್ಲಿ ಪರ್ಸಂಟೇಜ್‍ಗಾಗಿ ರಾಜಕಾರಣಿಗಳು ಬಾಯ್ತೆರೆಯುತ್ತಿದ್ದಾರೆ. ಭವಿಷ್ಯದ ದಿನಗಳು ಉಜ್ವಲವಾಗಿರಲಿ ಎಂಬ ಕಾಳಜಿ ಈ ಎರಡೂ ವರ್ಗಗಳಿಗಿಲ್ಲ.

          ಹೋಗಲಿ ಮತ ಕೊಟ್ಟು ಗೆಲ್ಲಿಸಿದ ಮತದಾರನಿಗಾದರೂ ಇರಬೇಕಿತ್ತಲ್ಲ ಅದೂ ಇಲ್ಲ. ನೀರಿನ ಮಿತವ್ಯಯ, ನೀರಿನ ಸಂರಕ್ಷಣೆಯ ಬಗ್ಗೆ ಉದಾರವಾಗಿ ಯೋಚಿಸದ ಜನಸಮುದಾಯ ತಮ್ಮ ಸ್ವಾರ್ಥಕ್ಕಷ್ಟೇ ನೀರಿನ ಬಳಕೆಯ ಬಗ್ಗೆ ಉತ್ಸುಕನಾಗುತ್ತಿದ್ದಾನೆ. ನೀರಿನ ಸಂರಕ್ಷಣೆಯ ಬಗ್ಗೆ ಗ್ರಾಮಗಳಲ್ಲಿ ಅರಿವು ಮೂಡುತ್ತಿಲ್ಲ. ಪ್ರತಿಯೊಂದು ಗ್ರಾಮದಲ್ಲಿಯೂ ಒಂದೊಂದು ದೇವರ ಗುಡಿಗಳನ್ನು ಎತ್ತುವ, ಅದರ ಜೀರ್ಣೋದ್ಧಾರ ಮಾಡುವ ಕಾಯಕಕ್ಕೆ ಎಲ್ಲರೂ ಆಸಕ್ತಿ ವಹಿಸುತ್ತಿದ್ದಾರೆ.

         ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಸುರಿಯುತ್ತಿದ್ದಾರೆ. ಅದಕ್ಕಾಗಿ ಭಿಕ್ಷೆ ಎತ್ತುತ್ತಾರೆ. ಅಂತೂ ಗುಡಿ ಗೋಪುರಗಳು ತಲೆ ಎತ್ತುತ್ತಿವೆ. ಆದರೆ ಊರಿನ ಪಕ್ಕದಲ್ಲೇ ಇರುವ ಕೆರೆ ಕಟ್ಟೆಗಳು ಒತ್ತುವರಿಯಾಗುತ್ತಿದ್ದು, ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿವೆ. ಕರಾಬು ಜಮೀನುಗಳು ಅತಿಕ್ರಮಣವಾಗುತ್ತಿವೆ. ಇವೆಲ್ಲವೂ ಜಲಸಂರಕ್ಷಣೆಯ ತಾಣಗಳು. ಇವುಗಳು ನಾಶವಾದಂತೆಲ್ಲ ಮುಂದಿನ ದಿನಗಳು ಮತ್ತಷ್ಟು ಭಯಾನಕ ಎನ್ನಿಸತೊಡಗಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap