ಹೊಸದುರ್ಗ :
“ಕೊರೊನ” ಎನ್ನುವ ಹೆಮ್ಮಾರಿ, ರಕ್ಕಸಿಯ ಹಾವಳಿ ತಡಗಟ್ಟಲು ಸರ್ಕಾರ, ಮಾದ್ಯಮಗಳು, ವೈದ್ಯರು, ಪೊಲೀಸ್ ಇಲಾಖೆ, ವಿವಿಧ ಧಾರ್ಮಿಕ, ಸಾಮಾಜಿಕ ನೇತಾರರು ಕೊಡುವ ಕರೆಯನ್ನು ಇನ್ನೂ ಕೆಲವರು ಉಪೇಕ್ಷೆ ಮಾಡುತ್ತಿರುವುದು ಅವರ ಬೇಜವಾಬ್ದಾರಿಯ ಪರಮಾವಧಿ ಎಂದು ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶ್ರೀ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಮೆರಿಕ, ಇಟಲಿ, ಜಪಾನ್ ಮತ್ತಿತರ ದೇಶಗಳಲ್ಲಿ ಕೊರೊನ ಅಟ್ಟಹಾಸವನ್ನು ತಡೆಗಟ್ಟಲು ಸಾಧ್ಯವಾಗದೆ ನಿತ್ಯವೂ ಜನರು ನರಕಯಾತನೆ ಅನುಭವಿಸುತ್ತ ಸಾಯುತ್ತಿದ್ದಾರೆ. ಪುಣ್ಯಕ್ಕೆ ನಮಗಿನ್ನೂ ಆ ಪರಿಸ್ಥಿತಿ ಬಂದಿಲ್ಲ. ಆದರೆ ಹೀಗೆಯೇ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಯಾವ ದೇವರಾಗಲಿ, ಬಾಬಾಗಳಾಗಲಿ, ಬುರುಡೆ ಜ್ಯೋತಿಷಿಗಳಾಗಲಿ ನಮ್ಮನ್ನು, ನಿಮ್ಮನ್ನು ರಕ್ಷಿಸಲು ಸಾದ್ಯವಿಲ್ಲ ಎಂದರು.
ಈಗಾಗಲೇ ಪ್ರಸಿದ್ಧ ದೇವಾಲಯ, ಮಸಿದಿ, ಚರ್ಚುಗಳ ಬಾಗಿಲಿಗೆ ಭದ್ರವಾದ ಬೀಗ ಜಡಿಯಲಾಗಿದೆ. ಇದನ್ನು ಅರಿತಾದರೂ ಜನರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೊಟ್ಟಿರುವ 14ರವರೆಗಿನ ಲಾಕ್ ಡೌನ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮನೆ ಬಿಟ್ಟು ಹೊರಬರದಂತೆ ತಮಗೆ ತಾವೇ ದಿಗ್ಬಂಧನ ವಿಧಿಸಿಕೊಳ್ಳಬೇಕು ಎಂದು ತಿಳಿಸಿದರು
ಆಹಾರದ ತೊಂದರೆ ಅನುಭವಿಸುವವರಿಗೆ ಕೈಲಾದ ಸಹಾಯ ಮಾಡಬೇಕು. ಉಡಾಫೆ ಮಾಡದೆ ನಮ್ಮ ಜೀವದ ಜೊತೆ ಇತರರ ಜೀವವನ್ನೂ ಕಾಪಾಡಬೆಕು. ನಮ್ಮ ಜೀವ, ಹಣ, ಆಸ್ತಿ, ಅಂತಸ್ತು, ಅಧಿಕಾರ, ವೈದ್ಯರ ಕೈಯಲ್ಲಿ ಇಲ್ಲ. ಅದಿರುವುದು ನಮ್ಮ ನಮ್ಮ ಕೈಯಲ್ಲೇ. ನಾವಷ್ಟೇ ಅಲ್ಲ ನಮ್ಮ ಪ್ರೀತಿ ಪಾತ್ರರನ್ನು ರಕ್ಷಿಸುವ ಹೊಣೆಗಾರಿಕೆಯೂ ನಮ್ಮ ಮೇಲೇ ಇದೆ. ಇದನ್ನರಿತು ಸಾರ್ವಜನಿಕರು ಮನೆಯಿಂದ ಹೊರಬರದೆ ಕರೋನ ಮಹಾಮಾರಿಗೆ ಮಂತ್ರ ಹಾಕಿ ನಮ್ಮ ದೇಶದಿಂದಲೇ ಓಡಿಸುವ ಸಂಕಲ್ಪವಷ್ಟೇ ಅಲ್ಲ; ಕಾರ್ಯರೂಪಕ್ಕೆ ತರಬೇಕು. ಇಲ್ಲದಿದ್ದರೆ ಮತ್ತೂ ಒಂದು ತಿಂಗಳು ಭಾರತ ಲಾಕ್ ಡೌನ್ ಆಗಬಹುದು ಎಂದರು.
ನಂತರ ಲಾಕ್ ಔಟ್ ಕೂಡ ಆಗಬಹುದು ಅದನ್ನು ನೋಡಲು ನಾವೇ ಇಲ್ಲದಿದ್ದರೆ ಗತಿ ಏನು? ಯಾವ ಪುರುಷಾರ್ಥಕ್ಕಾಗಿ ಈ ಹುಂಬುತನ, ಉಡಾಫೆ, ನಿರ್ಲಕ್ಷ್ಯ? ಆದುದರಿಂದ ಸಾರ್ವಜನಿಕರು ಉದಾಸೀನ, ಬೇಜವಾಬ್ದಾರಿ ತೋರದೆ ತಮ್ಮ ತಮ್ಮ ಮನೆಗಳಲ್ಲಿದ್ದೇ ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಬದುಕನ್ನು ಸುಧಾರಿಸಿಕೊಳ್ಳುವ ಸಂಕಲ್ಪ ಮಾಡಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
