ಬಳ್ಳಾರಿ ಲೋಕಸಭಾ ಚುನಾವಣೆಗೆ ಇಂದು ಮತದಾನ: ಸಕಲ ಸಿದ್ಧತೆ

ಬಳ್ಳಾರಿ

     ಬಳ್ಳಾರಿ ಲೋಕಸಭಾ ಚುನಾವಣೆಗೆ ಏ.23ರಂದು(ಇಂದು) ಮತದಾನ ನಡೆಯಲಿದ್ದು, ಸೂಸುತ್ರವಾಗಿ ಮತದಾನ ಪ್ರಕ್ರಿಯೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ.

     ಏ.23ರಂದು ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6ರವರೆಗೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ ಸೇರಿದಂತೆ ಒಟ್ಟು 11 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿದಿದ್ದು 1751911 ಮತದಾರರು ಅಭ್ಯರ್ಥಿಗಳ ಹಣೆ ಬರಹವನ್ನು ಮತಯಂತ್ರದಲ್ಲಿ ದಾಖಲಿಸಲಿದ್ದಾರೆ. ಇದಕ್ಕಾಗಿ ಲೋಕಸಭಾ ಕ್ಷೇತ್ರದಾದ್ಯಂತ 1925 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.19 ಸಖಿ ಮತಗಟ್ಟೆಗಳು ಹಾಗೂ 1 ವಿಕಲಚೇತನ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 541 ಸೂಕ್ಷ್ಮ ಮತಗಟ್ಟೆಗಳು, 236 ಭಯಗ್ರಸ್ಥ ಮತಗಟ್ಟೆಗಳೆಂದು ಗುರುತಿಸಲಾಗಿದೆ.

     10907 ಜನರನ್ನು ಮತದಾನ ಪ್ರಕ್ರಿಯೆಯ ಮತಗಟ್ಟೆಗಳ ಕಾರ್ಯಕ್ಕೆ, 2180 ಪೊಲೀಸ್ ಸಿಬ್ಬಂದಿ, 58 ಟ್ರಾನ್ಸ್‍ಪೋರ್ಟ್ ಮತ್ತು ಇತರೆ 2261 ಜನರು ಸೇರಿದಂತೆ ಒಟ್ಟು 15406 ಜನರು ಈ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅವರು ಬಳ್ಳಾರಿ ನಗರ ಕ್ಷೇತ್ರದ ಮಸ್ಟರಿಂಗ್ ನಡೆಯುವ ಕೋಟೆ ಪ್ರದೇಶದ ಸಂತ್ ಜಾನ್ ಶಾಲಾ ಆವರಣದ ಸ್ಥಳಕ್ಕೆ ಭೇಟಿ ನೀಡಿ ನಡೆಯುತ್ತಿರುವ ಕಾರ್ಯಗಳನ್ನು ಪರಿಶೀಲಿಸಿ ಅವರು ಮಾತನಾಡಿದರು.

     425 ಬಸ್‍ಗಳ ಬಳಕೆ: ಚುನಾವಣಾ ಕಾರ್ಯಕ್ಕೆ 425 ಬಸ್‍ಗಳನ್ನು ಉಪಯೋಗಿಸಲಾಗುತ್ತಿದೆ. 109 ಮಿನಿ ಬಸ್ಸು, 83 ಕ್ಯಾಬ್,ಟಾಟಾ ಸುಮೋ ಮತ್ತು ಜೀಪ್‍ಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ತಿಳಿಸಿದರು.

    2313 ಸಿಯು, ಬಿಯು 2313 ಮತ್ತು 2509 ವಿವಿಪ್ಯಾಟ್‍ಗಳು ಲಭ್ಯವಿದ್ದು, ಅಗತ್ಯಕ್ಕಿಂತ ಶೇ.20ರಷ್ಟು ಹೆಚ್ಚಾಗಿವೆ. ಯಾವುದೇ ರೀತಿಯ ಮತಯಂತ್ರಗಳ ಕೊರತೆ ನಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.ಬಳ್ಳಾರಿಯಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊಂಡಿರುವ ಆಂಧ್ರದ 5 ಕಿ.ಮೀ ಗಡಿಯ ಹಳ್ಳಿಗಳಲ್ಲಿ 22 ವೈನ್ ಮತ್ತು ಬಾರ್ ಮತ್ತು ರೆಸ್ಟೊರೆಂಟ್‍ಗಳನ್ನು ಬಂದ್ ಮಾಡಲಾಗಿದೆ ಎಂದು ಅವರು ವಿವರಿಸಿದರು.

    ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ತುಷಾರಮಣಿ, ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link