ಬಿಐಎಎಲ್ 13 ಸಾವಿರ ಕೋಟಿ ರೂ ವೆಚ್ಚದ ಬೃಹತ್ ವಿಸ್ತರಣಾ ಯೋಜನೆ

0
9

ಬೆಂಗಳೂರು

        ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಶರವೇಗದಲ್ಲಿ ಪ್ರಗತಿಯಾಗಿದ್ದು, ವೈಮಾನಿಕ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಪ್ರಯಾಣಿಕರಿಗೆ ಮತ್ತಷ್ಟು ಸೌಲಭ್ಯ ಒದಗಿಸಿಕೊಡಲು ಬಿಐಎಎಲ್ 13 ಸಾವಿರ ಕೋಟಿ ರೂ ವೆಚ್ಚದ ಬೃಹತ್ ವಿಸ್ತರಣಾ ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.

         ಹೊಸ ಟರ್ಮಿನಲ್ ನಿರ್ಮಾಣ, ಎರಡನೇ ರನ್ ವೇ ಮತ್ತು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಸಹ ಈ ವಿಸ್ತರಣಾ ಯೋಜನೆಯಲ್ಲಿ ಸೇರಿದೆ.

        ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಮಾತನಾಡಿ, ನೂತನ ತಂತ್ರಜ್ಞಾನ ಬಳಕೆ ಮಾಡಿ ಎರಡನೇ ಟರ್ಮಿನಲ್ ಕಟ್ಟಡ ಕಟ್ಟಲಾಗುವುದು. ಇದು ಬೆಂಗಳೂರು ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

        ಇದನ್ನು ಬಹಳ ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವುದೂ ಕೂಡ ಬೆಂಗಳೂರು ನಾಗರಿಕರಿಗೆ ಹೆಮ್ಮೆ ತರುವ ಸಂಗತಿ ಎಂಬ ಅಂಶವನ್ನು ಅವರು ಪ್ರಸ್ತಾಪ ಮಾಡಿದ್ದಾರೆ.

        ಕಳೆದ 10 ವರ್ಷಗಳ ಅವಧಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದ ಹೆಬ್ಬಾಗಿಲು ಆಗಿದೆ. ಮುಂದಿನ ವಿಸ್ತರಣಾ ಯೋಜನೆಯ ನಂತರ ಇದು ಭಾರತದ ಹೆಬ್ಬಾಗಿಲು ಆಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

       ವಿಶ್ವದರ್ಜೆಯ ಮಾದರಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲು ಪಣ ತೊಡಲಾಗಿದೆ.ಈ ಯೋಜನೆ ಆರ್ಥಿಕ ಚಟುವಟಿಕೆ ಉತ್ತೇಜನಕ್ಕೆ ರಹದಾರಿಯಾಗಲಿದೆ. ಇದರಿಂದ ವ್ಯಾಪಾರ ವಹಿವಾಟು ಹೆಚ್ಚಾಗಲಿವೆ. ಪರಿಣಾಮವಾಗಿ ಜಾಗತಿಕ ಭೂಪಟದಲ್ಲಿ ಬೆಂಗಳೂರು ಮತ್ತಷ್ಟು ಪ್ರಸಿದ್ಧಿಯಾಗಲೂ ಕಾರಣವಾಗಲಿದೆ ಎಂದು ಹೇಳಿದರು.

      ಯೋಜನಾಧಿಕಾರಿ ಭಾಸ್ಕರ್ ಆನಂದ್ ರಾವ್ ಮಾತನಾಡಿ,ಕರ್ನಾಟಕ, ಬೆಂಗಳೂರು ಮಾತ್ರವಲ್ಲದೇ ದೇಶದ ಆರ್ಥಿಕ ಚಟುವಟಿಕೆಗೂ ಈ ವಿಸ್ತರಣಾ ಯೋಜನೆ ಸಹಕಾರಿಯಾಗಲಿದೆ. ಕೈಗೆಟಕುವ ದರದಲ್ಲಿ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆ ಒದಗಿಸುವ ಗುರಿ ಹೊಂದಲಾಗಿದೆ ಎಂದರು.

      ಯೋಜನಾಧಿಕಾರಿ ಟಾಮ್ ಶಿಮಿಮ್ ಮಾತನಾಡಿ, ಎರಡನೇ ಟರ್ಮಿನಲ್ ನ ಸರಳತೆಯನ್ನು ಕಾಯ್ದುಕೊಂಡು, ನಡೆಯುವ ಮಾರ್ಗ ಕಡಿಮೆ ಇರುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಆಯಾಸ ಕಡಿಮೆಯಾಗಲಿದೆ. ಜೊತೆಗೆ ವಿಶಿಷ್ಟ ಅನುಭೂತಿ ನೀಡಲಿದೆ.ಜೊತೆಗೆ ಪ್ರಯಾಣಿಕರ ಬೇಡಿಕೆ ಪೂರೈಸಲು, ಸ್ಪರ್ಧಾತ್ಮಕತೆ ಹೆಚ್ಚಿಸಲು ಇದು ಸಹಕಾರಿಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಬೆಂಗಳೂರಿಗೆ ಮತ್ತೊಂದು ಮಣಿ ಮುಕುಟವಾಗಲಿದೆ ಎಂದೂ ಅವರು ಹೇಳಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here