ಬಿಸಿಲ ಧಗೆಯಲ್ಲಿಯೂ ಉತ್ಸಾಹದ ಮತದಾನ: ಹಲವೆಡೆ ಸ್ವಾರಸ್ಯಕರ ಸಂಗತಿ.

ಹೊಸಪೇಟೆ:

     ಒಂದೆಡೆ ಬಿಸಿಲ ಧಗೆಯಿಂದ ಕಾವು ಹೆಚ್ಚಾಗುತ್ತಿದ್ದರೆ, ಇತ್ತ ಕ್ಷೇತ್ರಾದ್ಯಂತ ಬೆಳಂಬೆಳಗ್ಗೆ ಮತದಾನದ ಕಾವು ನಿದಾನಗತಿಯಲ್ಲಿ ಇರಿದ್ದು ಹಲವು ಸ್ವಾರಸ್ಯಕರ ಸಂಗತಿಗಳಿಗೂ ಸಾಕ್ಷಿಯಾಗುವ ಮೂಲಕ ಮಂಗಳವಾರ ಗಮನ ಸೆಳೆಯಿತು.

      ಬಳ್ಳಾರಿ ಲೋಕಸಭೆ ಪರಿಶಿಷ್ಟ ಪಂಗಡ ಕ್ಷೇತ್ರ ವ್ಯಾಪ್ತಿಯ ವಿಜಯನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಹಲವು ಮತಗಟ್ಟೆಗಳಲ್ಲಿ ಮತದಾನ ಚುರುಕಿನಿಂದ ಸಾಗಿದ್ದರೆ, ಇತ್ತ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನದ ಬಳಿಕ ಮತದಾನ ಬಿರುಸುಗೊಂಡಿತು.

ನವವಧು ಮತದಾನ:

        ಕ್ಷೇತ್ರ ವ್ಯಾಪ್ತಿಯ ಮಲಪನಗುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 219ರಲ್ಲಿ ನವವಧು ಟಿ. ರಮಾ ಹಸಿಮಣೆ ಏರುವ ಮುನ್ನ ಮತ ಚಲಾಯಿಸುವ ಮೂಲಕ ವಿಶೇಷ ಗಮನ ಸೆಳೆದರು. ಮತ ಚಲಾಯಿಸಿದ ಬಳಿಕ ಮಾತನಾಡಿದ ನವವಧು, ಮತದಾನ ಬ್ರಹ್ಮಸ್ತ್ರವಿದ್ದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಬರುವ ಮತದಾನದ ಪವಿತ್ರ ದಿನದಂದು ತಪ್ಪದೇ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದರು. ನಂತರ ಕುಟುಂಬ ಸದಸ್ಯರೊಂದಿಗೆ ಮದುವೆ ಮಂಟಪಕ್ಕೆ ತೆರಳಿದರು.

ಸಖಿ ಕೇಂದ್ರ ಖಾಲಿ ಖಾಲಿ:

      ಮತದಾನ ಪ್ರಮಾಣ ಗಣನೀಯವಾಗಿ ಹೆಚ್ಚಿಸುವ ಸಲುವಾಗಿ ಹಾಗೂ ಮಹಿಳೆಯರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು ಎಂಬ ಸದ್ದುದೇಶದಿಂದ ಹೊಸಪೇಟೆ ನಗರಸಭೆ ವತಿಯಿಂದ 4 ಬಡಾವಣೆಗಳಲ್ಲಿ ಸಖಿ ಮತದಾನ ಕೇಂದ್ರಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 7ರಿಂದ9 ಗಂಟೆವರೆಗೆ ಮತದಾನ ಮಂದಗತಿಯಲ್ಲಿ ಸಾಗಿತ್ತು ನಂತರ 9ರಿಂದ 12ರೊಳಗೆ ಮಹಿಳೆಯರು, ಯುವತಿಯರು ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ನಂತರ ಬಹುತೇಕ ಸಖಿ ಕೇಂದ್ರಗಳು ಮಧ್ಯಾಹ್ನ 12ರಿಂದ 4ರವರೆಗೆ ಖಾಲಿ ಖಾಲಿಯಾಗಿತ್ತು. ಸಂಜೆ ನಂತರ ಮತದಾನ ಚುರುಕುಗೊಂಡಿತು.

ಮೊದಲ ಮತದಾನ:

       ವಿಜಯನಗರ ಕ್ಷೇತ್ರಾದ್ಯಂತ ಇದೇ ಮೊದಲ ಬಾರಿಗೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತದಾರ ಗುರುತಿನ ಚೀಟಿ ಕೈಯಲ್ಲಿ ಹಿಡಿದು ಉತ್ಸಾಹದಿಂದ ಮತಕೇಂದ್ರಗಳ ಬಳಿ ಧಾವಿಸಿ ಸರತಿಯಲ್ಲಿ ನಿಂತು ಮೊದಲ ಹಕ್ಕು ಚಲಾಯಿಸುವ ಮೂಲಕ ಸಂಭ್ರಮಿಸಿದ್ದು ಕಂಡುಬಂತು.

      ಮೊದಲ ಮತದಾನ ಖುಷಿ ತಂದಿದೆ. ಸದೃಢ ದೇಶ ನಿರ್ಮಾಣಕ್ಕೆ ಮತದಾನ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ನಗರದ ಬಸವೇಶ್ವರ ಬಡಾವಣೆಯ ಸಪ್ತಗಿರಿ ಶಾಲೆಯ ಮತಗಟ್ಟೆ ಸಂಖ್ಯೆ 67ರಲ್ಲಿ ಇದೇ ಮೊದಲ ಮತದಾನ ಮಾಡಿದ ಸ್ನೇಹ ರೇವಣ್ಣ ಸಿದ್ಧಪ್ಪ ತಿಳಿಸಿದರು.

ವಿಕಲಚೇತನರು ಮತದಾನ:

       ಬಹುತೇಕ ಮತಗಟ್ಟೆಗಳಲ್ಲಿ ವಿಕಲಚೇತನರ ಅನುಕೂಲಕ್ಕಾಗಿ ಮೂರುಚಕ್ರದ ಸೈಕಲ್ ಇರಿಸಲಾಗಿತ್ತು. ಮತಗಟ್ಟೆಗಳಿಗೆ ವಿಕಲಚೇತನರು ಸಹಾಯಕರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಮತಗಟ್ಟೆ ಸಂಖ್ಯೆ 128 ರಲ್ಲಿ 90 ವರ್ಷದ ದೇವಿಮೂರ್ತಿ ಹಾಗೂ ಬೂತ್ ಸಂಖ್ಯೆ 110ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಆನಂದಪ್ಪ ಸಹಾಯಕರೊಂದಿಗೆ ತೆರಳಿ ಮತದಾನಮಾಡುವ ಮೂಲಕ ಗಮನ ಸೆಳೆದರು.

       ವಸುದೈವಕಂ ಕುಟುಂಬಕಂ ಎಂಬ ಶಿರ್ಷೀಕೆಯಡಿ ವಿಜಯನಗರ ಕ್ಷೇತ್ರದ ಮೃತ್ಯುಂಜಯ ನಗರದಲ್ಲಿ 25ಕ್ಕೂ ಹೆಚ್ಚು ಕುಟುಂಬಗಳು ಮತಕೇಂದ್ರಕ್ಕೆ ಏಕಕಾಲಕ್ಕೆ ತೆರಳಿ ಮತ ಚಲಾಯಿಸುವ ಮೂಲಕ ವಿಶೇಷ ಗಮನ ಸೆಳೆದರು.

ಗಣ್ಯರಿಂದ ಮತದಾನ:

       ನಗರದ ಸರಕಾರಿ ಬಾಲಕಿಯರ ಪದವೀಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಶಾಸಕ ಆನಂದ್ ಸಿಂಗ್ ತಮ್ಮ ಪತ್ನಿ ಲಕ್ಷ್ಮೀ ಸಿಂಗ್, ತಂದೆ ಪೃಥ್ವಿರಾಜ್ ಸಿಂಗ್‍ರೊಂದಿಗೆ ಆಗಮಿಸಿ ಮತದಾನ ಚಲಾಯಿಸಿದರೆ, ಮಾಜಿ ಶಾಸಕ ಗವಿಯಪ್ಪ ತಮ್ಮ ಪತ್ನಿ ಕವಿತಾರೊಂದಿಗೆ ಪುಣ್ಯಮೂರ್ತಿ ರಾಘಪ್ಪ ಶೆಟ್ಟಿ ಶಾಲೆ ಮತಕೇಂದ್ರದಲ್ಲಿ ಮತ ಚಲಾಯಿಸಿದರು. ಸಪ್ತಗಿರಿ ಶಾಲೆ ಮತಗಟ್ಟೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ತಮ್ಮ ಪತಿ ಶ್ರೀನಿವಾಸ್ ರೆಡ್ಡಿ ಹಾಗೂ ಮಕ್ಕಳೊಂದಿಗೆ ಆಗಮಿಸಿ ಮತದಾನಮಾಡಿದರು.

     ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮೃತ್ಯುಂಜಯ ಜಿನಗಾ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೇಶವ್ ಜೀ, ಶ್ರೀನಿವಾಸ್, ಅನಿಲ್ ಜೋಶಿ ನಾನಾ ಮತ ಕೇಂದ್ರಗಳಿಗೆ ತೆರಳಿ ಮತದಾನ ಚುರುಕುಗೊಳಿಸುವಂತೆ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link