ಚಿತ್ರದುರ್ಗ :
ಜಿಲ್ಲೆಯಲ್ಲಿ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿಗಾಗಿ ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆ ಕಾರ್ಯ ಸಮರ್ಪಕವಾಗಿ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಪೂರ್ವ ಮಳೆ ಪಾರಂಭವಾಗಿದೆ, ಶೀಘದಲ್ಲಿಯೇ ಮುಂಗಾರು ಕೂಡ ಆರಂಭವಾಗಲಿದ್ದು, ರೈತರು ಈಗಾಗಲೆ ಭೂಮಿ ಸಿದ್ಧಪಡಿಸಿಕೊಂಡಿದ್ದಾರೆ. ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಸಮರ್ಪಕವಾಗಿ ವಿತರಿಸಲು ಇಲಾಖೆ ಅಧಿಕಾರಿಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ರೈತರು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಅಥವಾ ಕೃಷಿ ಪರಿಕರಗಳನ್ನು ಪಡೆಯಲು ಯಾವುದೇ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಂಟಿಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೆನವರ್ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಕಡಿಮೆ ಇದ್ದು, ಸಿರಿಧಾನ್ಯ ಬೆಳೆಗಳು ಕಡಿಮೆ ನೀರಿನಲ್ಲಿಯೂ ಉತ್ತಮ ಇಳುವರಿ ನೀಡಲು ಶಕ್ತವಾಗಿವೆ. ಅಲ್ಲದೆ ಸಿರಿಧಾನ್ಯ ಬೆಳೆಗಳಿಗೆ ವ್ಯಾಪಕ ಬೇಡಿಕೆ ಇದೆ. ಜಿಲ್ಲೆಯಲ್ಲಿ ಕಳೆದ ವರ್ಷ ಕಡಿಮೆ ಮಳೆಯಲ್ಲಿಯೂ ಉತ್ತಮ ಸಿರಿಧಾನ್ಯ ಬೆಳೆದು ಹಲವು ರೈತರು ಲಾಭ ಕಂಡುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ವರ್ಷ ವಾಡಿಕೆ ಪ್ರಮಾಣದಲ್ಲಿಯೇ ಮಳೆಯಾದರೂ, ಸಮರ್ಪಕ ರೀತಿಯಲ್ಲಿ ಸಕಾಲಕ್ಕೆ ಮಳೆ ಹಂಚಿಕೆಯಾಗದ ಕಾರಣದಿಂದ ರೈತರು ಬೆಳೆ ನಷ್ಟ ಅನುಭವಿಸುವಂತಾಯಿತು. ಜಿಲ್ಲೆಯಲ್ಲಿ ಈಗಾಗಲೆ ಎಳ್ಳು ಮತ್ತು ಹೆಸರು ಬೆಳೆ ಬಿತ್ತನೆ ಪ್ರಾರಂಭವಾಗಿದೆ. ಮುಂಗಾರು ಹಂಗಾಮಿಗೆ ಶೇಂಗಾ, ಮೆಕ್ಕೆಜೋಳ, ರಾಗಿ, ಸೂರ್ಯಕಾಂತಿ, ತೊಗರಿ ಸೇರಿದಂತೆ ಹಲವು ಬೆಳೆಗಳ ಬಿತ್ತನೆ ಬೀಜ ವಿತರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ 26 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ.
ಅಗತ್ಯಕ್ಕೆ ಅನುಗುಣವಾಗಿ ಬಿತ್ತನೆ ಬೀಜ ಮತ್ತು ಗೊಬ್ಬರ ಪೂರೈಕೆಯಾಗುತ್ತಿದ್ದು, ಯಾವುದೇ ಕೊರತೆ ಉಂಟಾಗದಂತೆ ಕ್ರಮ ಕೈಗೊಳಲಾಗುವುದು. ಜಿಲ್ಲೆಯ 22 ರೈತ ಸಂಪರ್ಕ ಕೇಂದ್ರಗಳಲ್ಲದೆ, ಕೆಒಎಫ್, ಮತ್ತು ಸಹಕಾರ ಸಂಘಗಳ ಮೂಲಕ ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ ಪೂರೈಸಲು ಸಿದ್ಧತೆ ಆಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ರಾಸಾಯನಿಕ ಗೊಬ್ಬರಗಳ ಅತಿ ಹೆಚ್ಚು ಬಳಕೆ ಮಾಡುವ ಬದಲು, ಜೈವಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಕೆಗೆ ರೈತರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು, ಕೃಷಿ ಇಲಾಖೆಯ ಯೋಜನೆಗಳ ಕುರಿತು ರೈತರಿಗೆ ಕೃಷಿ ಅಭಿಯಾನ ಮೂಲಕ ತಲುಪಿಸುವ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಉದ್ಯೋಗಖಾತ್ರಿಯಡಿ ರೈತರಿಗೆ ಉದ್ಯೊಗ ಜಿಲ್ಲೆಯಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ರೈತರಿಗೆ ಹೆಚ್ಚಿನ ವಯಕ್ತಿಕ ಉದ್ಯೋಗ ನೀಡುವುದು , ಕೃಷಿಹೊಂಡ, ಬದು ನಿರ್ಮಾಣ, ಎರೆಹುಳು ತೊಟ್ಟಿ, ಜಮೀನು ಸಮತಟ್ಟು, ದನಕ ಕೊಟ್ಟಿಗೆ ನಿರ್ಮಾಣಕ್ಕೆ ಉದ್ಯೋಗ ನೀಡಲಾಗುತ್ತಿದೆ. ಅಲ್ಲಿದೆ ಮಾವು, ಸಪೋಟ, ನುಗ್ಗೆ ಮುಂತಾದ 32 ಬಗೆಯ ತೋಟಗಾರಿಕೆ ಬೆಳೆಗಳಿಗೆ ಖಾತ್ರಿಯಡಿ ಉದ್ಯೋಗ ನೀಡಿ, ಅವರ ಜಮೀನಿನಲ್ಲಿ ಅವರೇ ದುಡಿದು, ಕೂಲಿ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ನೀಡಲು ಅನುಕೂಲವಾಗುವಂತೆ ಈಗಾಗಲೆ ಎಲ್ಲ ಗ್ರಾಮ ಪಂಚಾಯತ್‍ಗಳಿಗೆ ಬಿಪಿಎಲ್ ಕುಟುಂಬಗಳ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ರೈತರು ಜಮೀನುಗಳಲ್ಲಿ ಎಲ್ಲಿ ನೀರಿ ಸಂಗ್ರಹಣೆಯಾಗುವ ಸಾಧ್ಯತೆ ಇದೆಯೋ ಅಲ್ಲಿಯೇ ಕೃಷಿಹೊಂಡ ನಿರ್ಮಿಸಿಕೊಳಬೇಕು.
ನೀರು ನಿಲ್ಲಿಸಿ, ನೀರು ಹಿಡಿದಿಡುವ ಕಾಮಗಾರಿಗಳನ್ನು ಹೆಚ್ಚಾಗಿ ಈ ವರ್ಷ ಜಿಲ್ಲೆಯಲ್ಲಿ ಕೈಗೊಳಲಾಗುವುದು. ಇದರಿಂದ ಅಂತರ್ಜಲ ಮಟ್ಟ ವೃದ್ಧಿಸಲು ಸಹಕಾರಿಯಾಗಲಿದೆ. ಅಧಿಕಾರಿಗಳು ರೈತರಿಗೆ ಎಲ್ಲೆಲ್ಲಿ ಸೌಲಭ್ಯ ಗಳು ದೊರಕಿಸಲು ಅವಕಾಶವಿದೆಯೋ, ಅಲ್ಲೆಲ್ಲ ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುವ ಕಾರ್ಯ ಮಾಡುವಂತೆ ಸೂಚನೆ ನೀಡಿದರು.ಅರಣ್ಯ ಇಲಾಖೆ ಅಧಿಕಾರಿ ಮಂಜುನಾಥ್ ಮಾತನಾಡಿ, ರೈತರು ಕೇವಲ ವಾರ್ಷಿಕ ಬೆಳೆಗಳನ್ನು ಬೆಳೆಯಲಷ್ಟೇ ಸೀಮಿತರಾಗದೆ ಅಧಿಕ ಲಾಭ ನೀಡುವ ಮರಗಳನ್ನು ಬೆಳೆಯಬೇಕು.
ಸದ್ಯ ನೆಲ್ಲಿ ಮತ್ತು ನೇರಳೆಗೆ ವ್ಯಾಪಕ ಬೇಡಿಕೆ ಇದೆ. ಈ ಬೆಳೆಗಳಿಗೆ ಎಂದಿಗೂ ಬೇಡಿಕೆ ಕಡಿಮೆಯಾಗುವುದಿಲ್ಲ. ನೆಲ್ಲಿ, ನೇರಳೆ, ಹೊಂಗೆ, ಹುಣಸೆ, ಹಲಸು ಬೆಳೆಯಲು ಅಲ್ಪ ನೀರು ಮತ್ತು ಕಡಿಮೆ ಖರ್ಚು. ತಳಿಗಳ ಕುರಿತು ಸಂಶೋಧನೆ ನಡೆಸಿ, ಇಲ್ಲಿನ ಹವಾಗುಣಕ್ಕೆ ಸೂಕ್ತವೆನಿಸುವ ತಳಿ ಸೃಷ್ಟಿಸಿ, ರೈತರಿಗೆ ತಲುಪಿಸುವ ಕಾರ್ಯ ಆಗಬೇಕಿದೆ.
ಒಬ್ಬ ರೈತ ಬೆಳೆದನೆಂದು ಎಲ್ಲ ರೈತರು ಒಂದೇ ತೆರನಾದ ಬೆಳೆಗೆ ಹೊಂದಿಕೊಳದೆ, ವಿವಿಧ ರೀತಿಯ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಕೃಷಿ ವಿಜಾನ ಕೇಂದ್ರದ ಮುಖ್ಯಸ್ಥ ಓಂಕಾರಪ್ಪ ಸೇರಿದಂತೆ ಪಶುಸಂಗೋಪನೆ, ರೇಷ್ಮೆ, ತೋಟಗಾರಿಕೆ ಹಾಗೂ ವಿವಿಧ ಇಲಾಖೆಗಳ ಜಿಲಾ ಮಟ್ಟದ ಅಧಿಕಾರಿಗಳು, ಪ್ರಗತಿಪರ ರೈತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ