ಗುಡಿಸಲು ಮುಕ್ತ ಕಾರ್ಯಕ್ರಮಕ್ಕೆ ಎಳ್ಳುನೀರು ಬಿಟ್ಟ ಬಿಜೆಪಿ: ಈಶ್ವರ್ ಖಂಡ್ರೆ

ಬೆಂಗಳೂರು

      ಕಾಂಗ್ರೆಸ್ ಸರ್ಕಾರದ ಗುಡಿಸಲು ಮುಕ್ತ ಕರ್ನಾಟಕದ ಕಲ್ಪನೆಗೆ ಬಿಜೆಪಿ ಕೊಡಲಿಯೇಟು ಹಾಕಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಮನೆ ನಿರ್ಮಾಣ ಯೋಜನೆಗೆ ಈಗಿನ ಸರ್ಕಾರ ತಡೆಯೊಡ್ಡಿದೆ. ಆ ಮೂಲಕ ಬಿಜೆಪಿ ಬಡವರ ವಿರೋಧಿ ಧೋರಣೆ ತಾಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ, ಗುಡಿಸಲು ಮುಕ್ತ ಕಾರ್ಯಕ್ರಮ ಸಂಪೂರ್ಣ ರದ್ದಾಗಿದೆ. ಬಡವರ ಮನೆ ನಿರ್ಮಾಣಕ್ಕೆ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಯಾಗಬೇಕು. ಆದರೆ ಕೆಲವು ಕಡೆ ಒಂದೇ ಕಂತು ಮಾತ್ರ ಬಿಡುಗಡೆ ಆಗಿದ್ದು, ಇನ್ನೂ ಕೆಲವರಿಗೆ ಯಾವುದೇ ಕಂತೂ ಬಿಡುಗಡೆ ಆಗಿಲ್ಲ. ಸರ್ಕಾರ ಬಡವವರ ಪಾಲಿನ ಅನುದಾನ ತಡೆದರೆ ಅವರ ಗತಿಯೇನು?ಬಡವರ ವಸತಿ ಯೋಜನೆಗೆ ಸರ್ಕಾರದ ನಿರ್ಲಕ್ಷ್ಯವೇಕೆ ? ಎಂದು ಪ್ರಶ್ನಿಸಿದರು.

    ಎಂಟು ತಿಂಗಳಿಂದ ವಸತಿ ಯೋಜನೆಗೆ ಸರ್ಕಾರ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಆತ್ಮಹತ್ಯೆಯಂತಹ ಕೃತ್ಯಕ್ಕೆ ಬಡವರು ಒಳಗಾಗುತ್ತಿದ್ದು, ಅರ್ಧ ಮನೆ ನಿರ್ಮಿಸಿರುವವರು ಅನುದಾನವಿಲ್ಲದೇ ಗೋಳಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಡಿಸಲು ಮುಕ್ತ ರಾಜ್ಯದ ಕಲ್ಪನೆ ನಮ್ಮದಾಗಿತ್ತು. ಪಾರದರ್ಶಕವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೆವು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಅವಧಿಯಲ್ಲಿ 26,28,564 ಮನೆಗಳನ್ನು ನೀಡಲಾಗಿತ್ತು.

    ಸಾಮಾನ್ಯ ವಸತಿ ರಹಿತರಿಗೆ 1.20 ಸಾವಿರ, ಪರಿಶಿಷ್ಟರಿಗೆ 1.70 ಲಕ್ಷ ರೂ. ಹಣ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ನಿಲ್ಲಿಸಿದೆ. ಮಂಜೂರಾಗಿದ್ದ ಮನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಕಳೆದೆಂಟು ತಿಂಗಳುಗಳಿಂದ ಯೋಜನೆಯ ಅನುದಾನ ತಟಸ್ಥಗೊಂಡಿದೆ.13,57,11 ಮನೆಗಳಿಗೆ ಅನುಮತಿ ನೀಡಲಾಗಿತ್ತು. ಒಟ್ಟು 1,26,741 ಮನೆ ಬ್ಲಾಕ್ ಮಾಡಲಾಗಿದೆ. ಒಟ್ಟು 3,59,919 ಮನೆಗಳು ಪ್ರಗತಿಯಲ್ಲಿವೆ. 3,60,412 ಮನೆಗಳಿಗೆ ಅವಕಾಶ ನಿರಾಕರಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಮನೆ ನಿರ್ಮಾಣ ಯೋಜನೆಗೆ ಈಗಿನ ಸರ್ಕಾರ ತಡೆಯೊಡ್ಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.ವಸತಿ ಯೋಜನೆಗಳಿಗೆ ಕೂಡಲೆ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಕುಂಠಿತಗೊಂಡ ಯೋಜನೆಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap