ದಾವಣಗೆರೆ :
ಚತುರ ರಾಜಕಾರಣಿ ಅನಂತಕುಮಾರ್ ಅವರ ಅಗಲಿಕೆಯಿಂದ ಬಿಜೆಪಿ ಅನಾಥವಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.ನಗರದ ರೇಣುಕಾಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೈಕಲ್ ತುಳಿದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಟ್ಟಿದ್ದ ನಂತರ ರಾಜಕೀಯ ಪ್ರವೇಶ ಪಡೆದ ಅನಂತಕುಮಾರ್ ಒಬ್ಬ ಚತುರ ರಾಜಕಾರಣಿಯಾಗಿ ಬಿಜೆಪಿಯನ್ನು ಸಂಘಟಿಸಿದ್ದರು. ಆದರೆ, ಈಗ ಅವರು ನಮ್ಮನ್ನು ಅಗಲಿರುವುದರಿಂದ ಪಕ್ಷ ಅನಾಥವಾದಂತಾಗಿದೆ ಎಂದು ಹೇಳಿದರು.
ಅನಂತ್‍ಕುಮಾರ್ ಹಾಗೂ ಬಿ.ಎಸ್.ಯಡಿಯೂರಪ್ಪ ಅವರುಗಳು ಜೋಡಿ ಎತ್ತುಗಳಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟನೆಗಾಗಿ ದುಡಿದಿದ್ದಾರೆ. ಅದರಲ್ಲೂ ಅನಂತಕುಮಾರ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಿ, ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಿ ಕರ್ನಾಟಕಕ್ಕೆ ಸಿಗಬೇಕಾಗಿದ್ದ ಅನುದಾನ ಮತ್ತು ಸೌಲಭ್ಯವನ್ನು ಕೊಡಿಸುತ್ತಿದ್ದರು ಎಂದು ಸ್ಮರಿಸಿದರು.
ಒಬ್ಬ ರಾಜಕೀಯ ಪಟು ಲೋಕಸಭೆಯಲ್ಲಿ ಯಾವ ರೀತಿ ಇರಬೇಕಂಬುದನ್ನು ತೋರಿಸಿಕೊಟ್ಟ ಅನಂತಕುಮಾರ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾದ ನಂತರದಲ್ಲಿ ರಸಗೊಬ್ಬರ ಖಾತೆ ಸಚಿವರಾಗಿ ಬೇವು ಲೇಪಿತ ಯೂರಿಯಾ ಗೊಬ್ಬರವನ್ನು ತಯಾರಿಸಿ, ಕಾಳಸಂತೆಯಲ್ಲಿ ಯೂರಿಯಾ ಬಿಕರಿಯಾಗದಂತೆ ತಡೆದು, ರೈತರು ಅನುಭವಿಸುತ್ತಿದ್ದ ಗೊಬ್ಬದ ಕೊರತೆಯನ್ನು ನೀಗಿಸುವಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು ಎಂದು ನೆನೆದರು.
ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ಒಬ್ಬ ಉತ್ತಮ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅನಂತ್‍ಕುಮಾರ್ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸಹ ಉಪಯುಕ್ತ ಸಲಹೆ ಕೊಡುತ್ತಿದ್ದರು. ಪಕ್ಷವನ್ನು ಕರ್ನಾಟಕದಲ್ಲಿ ಸದೃಢವಾಗಿ ಕಟ್ಟುವ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಪಕ್ಷದ ಋಣ ತೀರಿಸಿದ್ದಾರೆ. ತಮ್ಮ ಶಕ್ತಿ ಮೀರಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಸಾಕಷ್ಟು ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸಿದ್ದಾರೆ. ಎಲ್ಲಾ ಕಾರ್ಯಕರ್ತರನ್ನು ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.
ಚನ್ನಗಿರಿ ಶಾಸಕ ಮಾಡಾಳು ವಿರುಪಾಕ್ಷಪ್ಪ ಮಾತನಾಡಿ, ಚನ್ನಗಿರಿ ತಾಲೂಕು ಪಂಚಾಯಿತಿ ಚುನಾವಣೆ ನಡೆದ ಸಂದರ್ಭದಲ್ಲಿ ಸಂತೇಬೆನ್ನೂರಿನಲ್ಲಿ ಏರ್ಪಡಿಸಿದ್ದ ಪ್ರಚಾರಸಭೆಯ ವೇದಿಕೆಯಲ್ಲಿ ನನ್ನನ್ನು ಸೇರಿದಂತೆ 27 ಜನ ಮುಖಂಡರಿದ್ದರು. ಆ ಸಭೆಯಲ್ಲಿ ಅನಂತ್‍ಕುಮಾರ್ ಸಹ ಭಾಗಿಯಾಗಿದ್ದರು. ಸಭೆಯಲ್ಲಿ ನಾನು ಭಾಷಣ ಮಾಡುವಾಗ ಅನಂತ್‍ಕುಮಾರ್ ಒಬ್ಬ ಬುದ್ಧಿವಂತ ರಾಜಕಾರಣಿ ಎಂಬುದಾಗಿ ಬಣ್ಣಿಸಿದ್ದೆ. ಅನಂತ್ ತಮ್ಮ ಭಾಷಣದ ಸಂದರ್ಭದಲ್ಲಿ ವೇದಿಕೆಯಲ್ಲಿದವರ ಹೆಸರು ಬರೆದುಕೊಳ್ಳದೇ, ಎಲ್ಲರ ಹೆಸರನ್ನು ಪ್ರಸ್ತಾಪಿಸಿದ್ದರು.
ಆಗ ಇಷ್ಟು ಜನರ ಹೆಸರನ್ನು ಹೇಗೆ ನೆನಪಿಟ್ಟುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದರೆ. ಆಗ ನೀವು ಬುದ್ಧಿವಂತರೆಂದು ಹೇಳಿದ ಕಾರಣಕ್ಕೆ ಬುದ್ಧಿವಂತಿಕೆಯನ್ನು ತೋರಿಸಿದೆ ಎಂಬುದಾಗಿ ಹೇಳಿ ನಗೆ ಚಟಾಕಿ ಹಾರಿಸಿದ್ದರು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಸಂಸದ ಜಿ.ಎಂ.ಸಿದ್ದೇಶ್ವರ ಅವರ ತಮ್ಮನ ಮದುವೆಗೆ ಬಂದಿದ್ದ ಅನಂತ್‍ಕುಮಾರ್ ರಾಣಿಚೆನ್ನಮ್ಮ ಎಕ್ಸ್‍ಪ್ರೆಸ್ ರೈಲಿನಲ್ಲಿ ವಾಪಾಸ್ ತೆರಳಿದ್ದರು.
ಆದರೆ, ರೈಲು ಬರುವುದು ವಿಳಂಬವಾದ ಕಾರಣ ನಾನು ಅವರೊಂದಿಗೆ ರೈಲ್ವೆ ನಿಲ್ದಾಣದಲ್ಲಿಯೇ ದಾವಣಗೆರೆ ರಾಜಕಾರಣದ ಚಿತ್ರಣವನ್ನು ವಿವರಿಸಿದ್ದೆ. ಆಗ ಅನಂತ್‍ಕುಮಾರ್ ದಾವಣಗೆರೆ, ಹರಿಹರದಲ್ಲಿ ಬಿಜೆಪಿ ಶಾಸಕರು ಅಧಿಕಾರ ಹಿಡಿದರೆ ಮಾತ್ರ ರಾಜ್ಯದಲ್ಲಿ 150+ ಬಿಜೆಪಿ ಬರುತ್ತದೆ ಎಂದು ಹೇಳಿದ್ದರು. ಅಷ್ಟೂ ಮುಂದಾಲೋಚನೆ ಅವರಲ್ಲಿತ್ತು. ಇನ್ನೂ ಸದಾನಂದಗೌಡರಿಗೆ ರೈಲ್ವೆ ಖಾತೆ ನೀಡಿಲಾಗಿದೆ. ನಿಮಗೆ ರಸಗೊಬ್ಬರ ಖಾತೆ ನೀಡಲಾಗಿದೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಹ ಮೊದಲು ಇದೇ ಖಾತೆ ನಿರ್ವಹಿಸಿದ್ದರು ಎಂದು ಪ್ರತಿಕ್ರಯಿಸಿದ್ದರು ಎಂದು ಸ್ಮರಿಸಿದರು.
ಬಿಜೆಪಿ ಯುವ ಮುಖಂಡ ಹೆಚ್.ಎಸ್.ನಾಗರಾಜ್ ಮಾತನಾಡಿ, ಕರ್ನಾಟಕದ ಅನಂತಕುಮಾರ್ ದೆಹಲಿಮಟ್ಟದಲ್ಲಿ ಹೆಸರು ಮಾಡಿದ್ದರು. ಮೋದಿ ಅವರನ್ನು ಬಿಟ್ಟರೇ, ಅನಂತ್‍ಕುಮಾರ್‍ಗೆ ಪ್ರಧಾನಿಪಟ್ಟ ದೊರೆಯಲಿದೆ ಎಂಬುದಾಗಿ ಮಾಧ್ಯಮಗಳು ಸಹ ಸುದ್ದಿ ಮಾಡಿದ್ದವು. ಅವರು ಅಷ್ಟು ಚತುರ ರಾಜಕಾರಣಿಯಾಗಿದ್ದರು. ಆದರೆ, ಆ ಪಟ್ಟ ಸಿಗುವಷ್ಟರಲ್ಲಿ ಅನಂತ್ ನಮ್ಮನ್ನು ಬಿಟ್ಟು ಹೋದರು ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠದಿಂದ ಆರೋಗ್ಯ ಶಿಬಿರ ನಡೆಯಿತು. ಶಿಬಿರದಲ್ಲಿ 160ಕ್ಕೂ ಹೆಚ್ಚು ಜನ ತಪಾಸಣೆಗೆ ಒಳಪಟ್ಟರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಎನ್.ರಾಜಶೇಖರ್, ಬಿ.ರಮೇಶ್ ನಾಯ್ಕ, ಬಿಜೆಪಿ ಮುಖಂಡರಾದ ಜಯಪ್ರಕಾಶ್ ಅಂಬರ್‍ಕರ್, ಧನಂಜಯ್ ಕಡ್ಲೇಬಾಳು, ಜಗದೀಶ್, ಪ್ರಸನ್ನ, ಕೆ.ಬಿ.ಶಂಕರ್‍ನಾರಾಯಣ, ಹೇಮಂತ್‍ಕುಮಾರ್, ಜೀವನಮೂರ್ತಿ, ವೈ.ಮಲ್ಲೇಶ್, ಕಾಕನೂರು ಮಂಜಪ್ಪ, ಎಂ.ಪಿ.ನಾಯಕ್, ಸೋಮೇಶ್ವರ ವಿದ್ಯಾಲಯದ ಸುರೇಶ್‍ಕುಮಾರ್, ಪ್ರಸನ್ನಕುಮಾರ್, ಡಾ.ಮಂಜುನಾಥ್‍ಗೌಡ್ರು, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ, ಧನುಷ್‍ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
