ರವಿಕುಮಾರ್ ಹೇಳಿಕೆ : ಶಿರಾದಲ್ಲಿ ಬಿಜೆಪಿಗೆ ಅಚ್ಚರಿ ಫಲಿತಾಂಶ

ತುಮಕೂರು

     ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಅಭ್ಯರ್ಥಿ ಚಿದಾನಂದಗೌಡರ ಗೆಲುವಿಗೆ ಕ್ಷೇತ್ರದ 5 ಜಿಲ್ಲೆಗಳಲ್ಲೂ ಒಂದೊಂದು ತಂಡ ರಚನೆ ಮಾಡಲಾಗಿದ್ದು, ಎಲ್ಲಾ 1.6 ಲಕ್ಷ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮತಯಾಚನೆ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

    ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸಚಿವರು, ಸಂಸದರು, ಶಾಸಕರು, ಮಾಜಿ ಶಾಸಕರು, ಮುಖಂಡರು ಅವರ ವ್ಯಾಪ್ತಿಯಲ್ಲಿ ಚುನಾವಣೆಗೆ ಕೆಲಸ ಮಾಡುವರು. ಆಗ್ನೇಯ ಪದವೀಧರರ ಕ್ಷೇತ್ರ ಬಿಜೆಪಿ ಒಲವಿರುವ ಕ್ಷೇತ್ರ, ಇಲ್ಲಿ ಹೆಚ್ಚು ಬಾರಿ ಬಿಜೆಪಿ ಗೆದ್ದಿದೆ. ಈ ಬಾರಿಯೂ ಪಕ್ಷದ ಜಯ ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರಕ್ಕೆ ತಂಡಗಳನ್ನು ರಚಿಸಲಾಗಿದ್ದು, ತಂಡದ ಮುಖಂಡರು ಮತದಾರರನ್ನು ಭೇಟಿ ಮಾಡಿ ಮನವೊಲಿಸುತ್ತಾರೆ. ಅಭ್ಯರ್ಥಿ ಚಿದಾನಂದಗೌಡರು ಈಗಾಗಾಲೇ ಕ್ಷೇತ್ರ ವ್ಯಾಪಿ 3-4 ಸುತ್ತು ಪ್ರವಾಸ ಮಾಡಿ ಪದವೀಧರ ಮತದಾರರನ್ನು ಭೇಟಿ ಮಾಡಿದ್ದಾರೆ. ಈಗ ಮತ್ತಷ್ಟು ಚುರುಕಿನ ಪ್ರಚಾರ ಆರಂಭಿಸಲಿದ್ದಾರೆ ಎಂದು ರವಿಕುಮಾರ್ ಹೇಳಿದರು.

    ಬಿಜೆಪಿಯಲ್ಲಿ ಬಂಡಾಯವಿಲ್ಲ. ಸ್ಪರ್ಧೆಗೆ ಅವಕಾಶ ಸಿಗದ ಟಿಕೆಟ್ ಆಕಾಂಕ್ಷಿಗಳಿಗೆ ನಿರಾಶೆಯಾಗಿರಬಹುದು, ಅವರೊಂದಿಗೆ ಮಾತನಾಡಿ ಮನವೊಲಿಸಿದ್ದೇನೆ. ಟಿಕೆಟ್ ಬಯಸಿದ್ದ ಬಿಜೆಪಿ ಮುಖಂಡರಾದ ಡಾ.ಆನಂದ್, ಪೆಪ್ಸಿ ಬಸವರಾಜು, ಹಾಲನೂರು ಲೇಪಾಕ್ಷ್ ಅವರೊಂದಿಗೆ ಮತ್ತೊಮ್ಮೆ ಮಾತನಾಡುತ್ತೇನೆ ಎಂದರು.

    ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಮಾತನಾಡಿ, ಈ ಬಾರಿ ಆಗ್ನೇಯ ಪದವೀಧರ ಕ್ಷೇತ್ರವನ್ನು ತುಮಕೂರು ಜಿಲ್ಲೆಗೆ ಉಳಿಸಿಕೊಳ್ಳಬೇಕಾಗಿದೆ. ಪಕ್ಷದ ಎಲ್ಲಾ ನಾಯಕರು, ಮುಖಂಡರ ಬೆಂಬಲದೊಂದಿಗೆ ಚುನಾವಣೆ ಪ್ರಚಾರ ನಡೆದಿದೆ ಎಂದರು.
ತಾವು ಖಾಸಗಿ ಶಿಕ್ಷಣ ಸಂಸ್ಥೆ ಹೊಂದಿದ್ದು ಸರ್ಕಾರಿ ಶಾಲೆಗಳ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವರ್ಷ 30 ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ಉಚಿತ ವಸತಿ, ಶಿಕ್ಷಣ ನೀಡುತ್ತಿದ್ದೇನೆ. ಶಿರಾ ತಾಲ್ಲೂಕಿನಲ್ಲಿ ಈವರೆಗೆ ಯಾರೂ ಐಎಎಸ್‍ನಲ್ಲಿ ಆಯ್ಕೆಯಾಗಿಲ್ಲ, ಈ ಕಾರಣಕ್ಕೆ ಐಎಎಸ್ ಅಕಾಡೆಮಿ ಸ್ಥಾಪನೆ ಮಾಡಿ ತರಬೇತಿ ನೀಡಲಾಗುತ್ತಿದೆ ಎಂದರು.

    ತಾವು ಚುನಾವಣೆಯಲ್ಲಿ ಆಯ್ಕೆಯಾದ ನಂತರ ಸರ್ಕಾರಕ್ಕೆ ಮನವಿ ಮಾಡಿ ಕೌಶಲ್ಯಾಭಿವೃದ್ಧಿ ನಿಗಮದಿಂದ ನಿರುದ್ಯೋಗಿ ಯುವಜನರಿಗೆ ಅಗತ್ಯ ಉದ್ಯೋಗಾಧಾರಿತ ತರಬೇತಿ ಕೊಡಿಸಲು ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ತರಬೇತಿ ಕೇಂದ್ರ ಆರಂಭಿಸುವ ಉದ್ದೇಶವಿದೆ ಎಂದು ಚಿದಾನಂದಗೌಡ ಹೇಳಿದರು.

ಹೆದ್ದಾರಿಯಲ್ಲಿ ಶಿರಾ ಕ್ಷೇತ್ರದ ಗೆಲುವು ಬಾಕಿ

    ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ವ್ಯಾಪ್ತಿಯಲ್ಲಿ ಶಿರಾ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದಿದೆ. ಈ ಬಾರಿಯ ಉಪಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲೂ ಬಿಜೆಪಿ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

    ಇತ್ತೀಚೆಗೆ ಬಿಜಿಪಿ ಸೇರ್ಪಡೆಯಾದ ಡಾ.ರಾಜೇಶ್‍ಗೌಡ, ಎಸ್.ಆರ್.ಗೌಡ ಹಾಗೂ ಬಿ.ಕೆ.ಮಂಜುನಾಥ್ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ, ಈ ಮೂವರಲ್ಲಿ ಒಬ್ಬರನ್ನು ಅಭ್ಯರ್ಥಿಯಾಗಿ ವರಿಷ್ಠರು ಘೋಷಿಸಲಿದ್ದಾರೆ. ಶಿರಾ ಕ್ಷೇತ್ರದ ಎಲ್ಲಾ 36 ಗ್ರಾಮ ಪಂಚಾಯ್ತಿಗಳಲ್ಲೂ ಕಾರ್ಯಕರ್ತರ ಸಭೆ ಮಾಡಲಾಗಿದೆ. ರಾಜ್ಯಾಧ್ಯಕ್ಷರು ಬಂದು ಸಭೆ ನಡೆಸಿದ್ದಾರೆ. ಮುಖಂಡರ ಜೊತೆ ಅಭ್ಯರ್ಥಿ ಬೂತ್‍ಮಟ್ಟದಲ್ಲಿ ಸಭೆ ನಡೆಸಿ ಪ್ರಚಾರ ಮಾಡಲಿದ್ದಾರೆ ಎಂದರು.ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್‍ಗೌಡ, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಮಾಜಿ ಎಂಎಲ್‍ಸಿ ಡಾ. ಹುಲಿನಾಯ್ಕರ್, ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಎಂ.ಬಿ.ನಂದೀಶ್, ವಿನಯ್ ಬಿದರೆ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap