ಕೂಡ್ಲಿಗಿ:
ಕಳೆದ ಎಂಟು ವರ್ಷದಲ್ಲಿ ಮೂರು ಬಾರಿ ರಾಜಿನಾಮೆ ನೀಡಿದ್ದೇ ಶ್ರೀರಾಮುಲು ಅವರ ಬಹು ದೊಡ್ಡ ಸಾಧನೆ ಎಂದು ಲೋಕಸಭಾ ಉಪ ಚುನಾವಣೆಯ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ವ್ಯಂಗ್ಯವಾಡಿದರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಸಂಸತ್ ಸದಸ್ಯರಾಗಲು ರಾಷ್ಟ್ರದ ಬಗ್ಗೆ ಅರಿವಿರಬೇಕು, ಸಂವಿಧಾನದ ಜ್ಞಾನವಿರಬೇಕು ಎಲ್ಲದಕ್ಕಿಂತ ಹೆಚ್ಚಾಗಿ ಜನರ ಹೃದಯದಲ್ಲಿ ವಿಳಾಸ ಹೊಂದಿರಬೇಕು. ಆದರೆ ನನ್ನನ್ನು ಸ್ಥಳೀಯರಲ್ಲ, ಅವರಿಗೆ ವಿಳಾಸವಿಲ್ಲ ಎಂದು ಸಣ್ಣತನ ತೋರುವ ಶ್ರೀ ರಾಮುಲು ಯಾವ ಪುರುಷಾರ್ಥಕ್ಕೆ ರಾಜಿನಾಮೆ ನೀಡಿದ್ದಾರೆ? ಈ ಜಿಲ್ಲೆಗೆ ಅವರ ಕೊಡುಗೆ ಏನು? ಎಂದರು.
ಹದಿನೈದು ವರ್ಷಗಳಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯವರೇ ಸಂಸದರಾಗಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಇಂದಿರಾ ಗಾಂಧಿ ಅವರು ವಿಜಯನಗರ ಉಕ್ಕಿನ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಿದ್ದರಿಂದ ಇಂದು ಜಿಂದಾಲ್ ಕಂಪೆನಿಯಿಂದ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ. ರಾಜಕಾರಣ ಎಂಬುದು ಒಂದು ತಪ್ಪಸ್ಸೆ ಹೊರತು ಆಟವಲ್ಲ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಸಣ್ಣ ತಪ್ಪು ಮಾಡಿದ್ದನ್ನು ಸಾಬೀತುಪಡಿಸಿದರೆ ಅವರ ಕಾಲಿಗೆ ಬೀಳುವೆ ಎಂದು ಸವಾಲು ಹಾಕಿದವ ಅವರು, ಸಂಸತ್ತಿನಲ್ಲಿ ಮೋದಿ ವಿರುದ್ದ ದ್ವನಿ ಎತ್ತಲು ತಮ್ಮನ್ನು ಆಯ್ಕೆ ಮಾಡಬೇಕು ಎಂದು ಕೋರಿದರು.
ಜೆಡಿಎಸ್ ಮುಖಂಡ ಎನ್.ಟಿ. ಬೊಮ್ಮಣ್ಣ ಮಾತನಾಡಿ, ಶ್ರೀ ರಾಮುಲು ಒಬ್ಬ ಮಹಾನ್ ಸುಳ್ಳುಗಾರ. ಅವರು ಹತ್ತು ಜನಕ್ಕೆ ಕೆಲಸ ಮಾಡಿಕೊಟ್ಟಿದನ್ನು ಹಾಗೂ ಹತ್ತು ನಿಜ ನುಡಿದಿದ್ದನ್ನು ಯಾರದರೂ ತೋರಿಸಿದರೆ ನಾನು ರಾಜಕೀವನ್ನೇ ಬಿಡುತ್ತೇನೆ ಎಂದು ಸವಾಲೆಸದರು.
ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಒಂದಾಗಿದ್ದು, ಕ್ಷೇತ್ರದಲ್ಲಿ ಕೆಲವರು ಹಗಲು ಕಾಂಗ್ರೆಸ್ ಪರ, ರಾತ್ರಿ ಬಿಜೆಪಿ ಪರ ಇರುತ್ತಾರೆ. ಇಂತವರು ಪ್ರಮಾಣಿಕವಾಗಿ ಕೆಲಸ ಮಾಡುವ ಮೂಲಕ ಉಗ್ರಪ್ಪ ಅವರನ್ನು ಗೆಲ್ಲಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಚುನಾವಣಾ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಸಿರಾಜ್ ಶೇಕ್, ಸಂಡೂರು ಶಾಸಕ ಈ. ತುಕಾರಾಂ, ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿದರು.
ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್, ಸದಸ್ಯ ಉದಯ ಜನ್ನು, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಳಿಗಿ ವೀರೇಂದ್ರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಆಶಾಲತ, ಕಾರ್ಯದರ್ಶಿ ಜಿ. ನಾಗಮಣಿ, ರಾಬಕೋ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಗುರುಸಿದ್ದನಗೌಡ, ಎಸ್ಟಿ ಘಟಕದ ಅಧ್ಯಕ್ಷ ಸಿ.ಬಿ. ಜಯರಾಂ ನಾಯಕ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ. ಕಾರಪ್ಪ, ಕಾವಲ್ಲಿ ಶಿವಪ್ಪ ನಾಯಕ, ಬಿ. ಭಿಮೇಶ್, ಗುಜ್ಜಲ್ ರಘು, ಗುಜ್ಜಲ್ ನಾಗರಾಜ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
