ಶಾಂತಿಯುತ ಚುನಾವಣೆಗೆ ಸಹಕರಿಸಿ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ

      ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಎಲ್ಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ರಾಜಕೀಯ ಪಕ್ಷಗಳು ಶಾಂತಿಯುತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಹೇಳಿದರು.

       ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ನಾಮಪತ್ರಗಳನ್ನು ಅ.16ರವರೆಗೆ ಸಲ್ಲಿಸಬಹುದು. ನಾಮಪತ್ರಗಳ ಪರಿಶೀಲನೆ ಅ.17ರಂದು ಮತ್ತು ಅ.20ರಂದು ನಾಮಪತ್ರ ಹಿಂಪಡೆಯಬಹುದಾಗಿದೆ. ನ.3ರಂದು ಮತದಾನ ಮತ್ತು 6ರಂದು ಮತಏಣಿಕೆ ನಡೆಯಕಲಿದೆ ಎಂದು ವಿವರಿಸಿದ ಅವರು, ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಲಗತ್ತಿಸಬೇಕಾದ ದಾಖಲೆಗಳ ಕುರಿತಂತೆ ಸವಿವರವಾಗಿ ತಮಗೆ ವಿವರಿಸಲಾಗಿದೆ ಮತ್ತು ಜೊತೆಗೆ ದಾಖಲೆಗಳನ್ನು ನೀಡಲಾಗಿದೆ. ಎನಾದರೂ ಸಂದೇಹಗಳಿದ್ದಲ್ಲಿ ನಮ್ಮ ಕಚೇರಿಗೆ ಬಂದು ಪರಿಹರಿಸಿಕೊಳ್ಳಬಹುದು. ಅಭ್ಯರ್ಥಿಗೆ ವೆಚ್ಚ ಮಾಡಲು ಇರುವ ಮಿತಿ 70 ಲಕ್ಷ ರೂ.ಗಳಾಗಿದೆ ಎಂದರು.

      ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳನ್ನೇ ಇದಕ್ಕೆ ಬಳಸಿಕೊಳ್ಳಲಾಗುತ್ತಿದ್ದು,ಮೂರು ಹಂತದ ತರಬೇತಿಗಳನ್ನು ಅವರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.

      ರಾಜಕೀಯ ಪಕ್ಷಗಳ ಸಭೆ,ಸಮಾರಂಭಗಳು, ಪ್ರಚಾರಕ್ಕೆ ಅನುಮತಿ ಕೋರಿ ಸುವಿಧಾ ಎನ್ನುವ ಸಾಪ್ಟವೇರ್‍ನಲ್ಲಿ ಆನ್‍ಲೈನ್‍ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಅದನ್ನು ನಾವು 24 ಗಂಟೆಗಳಲ್ಲಿ ಇತ್ಯರ್ಥಪಡಿಸಿ ಅನುಮತಿ ನೀಡುತ್ತೇವೆ ಎಂದು ತಿಳಿಸಿದ ಅವರು, ಚುನಾವಣೆಯನ್ನು ಅಚ್ಚುಕಟ್ಟಾಗಿ ಮತ್ತು ಶಾಂತಿಯುತವಾಗಿ ಜರುಗಿಸುವ ನಿಟ್ಟಿನಲ್ಲಿ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಎಆರ್‍ಒಗಳನ್ನು ನೇಮಕ ಮಾಡಲಾಗಿದೆ. ಮಾದರಿ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಜಾರಿ ಮಾಡುವ ನಿಟ್ಟಿನಲ್ಲಿ ಗ್ರಾಮಮಟ್ಟದಿಂದ ಜಿಲ್ಲಾಮಟ್ಟದವರೆಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

     ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರು ಯಾವ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರೋ ಅದೇ ಮತಗಟ್ಟೆಗೆ ತೆರಳಿ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪಿಂಕ್ ಮತಗಟ್ಟೆಗೆ ವ್ಯವಸ್ಥೆ ಹಾಗೂ ವಿಕಲಚೇತನರಿಗೆ ಮತಗಟ್ಟೆ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ವಿವರಿಸಿದರು.

      ಜಿಲ್ಲೆಯಲ್ಲಿ 1708266 ಮತದಾರರಿದ್ದಾರೆ. 1901 ಮತಗಟ್ಟೆಗಳ ಸ್ಥಾಪನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನೀತಿ ಸಂಹಿತೆ ಜಾರಿ ಹಿನ್ನೆಲೆ ಫ್ಲೆಕ್ಸ್,ಹೋಲ್ಡಿಂಗ್ಸ್,ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದ ಅವರು ಅಭ್ಯರ್ಥಿಗಳು ಚುನಾವಣಾ ಸಂದರ್ಭದಲ್ಲಿ ಬಳಸುವ ವಸ್ತುಗಳಿಗೆ ರೇಟ್(ದರ) ಫೀಕ್ಸ್ ಮಾಡಿ ಅಧಿಸೂಚನೆ ಹೊರಡಿಸಲಾಗಿದ್ದು, ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಅ.11ರೊಳಗೆ ಸಲ್ಲಿಸಬಹುದು ಎಂದರು.

     ಈ ಸಂದರ್ಭದಲ್ಲಿ ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸೇರಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಚುನಾವಣಾ ತಹಸೀಲ್ದಾರ್ ಹಲೀಮಾ, ವೆಚ್ಚಕ್ಕೆ ಸಂಬಂಧಿಸಿದ ನೋಡಲ್ ಅಧಿಕಾರಿ ಚೆನ್ನಪ್ಪ, ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಇನ್ನೀತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap