ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಟ್ಟಿಯಲ್ಲಿ ನಾಯಕ ಬುಡಕಟ್ಟು ಸಮುದಾಯದ ದೇವರ ಭಕ್ತರು ತಮ್ಮ ಮನೆಯಲ್ಲೇ ಹುಟ್ಟಿ ಬೆಳೆದ ಜಾನುವಾರುಗಳನ್ನು ದೇವರ ಹೆಸರಿನಲ್ಲಿ ಬೊಮ್ಮದೇವರ ಹಟ್ಟಿಯಲ್ಲಿ ಮೀಸಲಿಟ್ಟು ಅದಕ್ಕಾಗಿಯೇ ನಿಯೋಗಿಸಿರುವ ಕಿಲಾರಿಗಳು ಇಂತಹ ದೇವರ ಎತ್ತುಗಳನ್ನು ಸುರಕ್ಷಿತವಾಗಿ ಸಾಕುವುದಲ್ಲದೆ ಪ್ರತಿಸೋಮವಾರ ಪೂಜಿಸುತ್ತಾರೆ.
ಆದರೆ, ಸದರಿ ಬೊಮ್ಮದೇವರಹಟ್ಟಿಯಲ್ಲಿ ಈಗಾಗಲೇ 300ಕ್ಕೂ ಹೆಚ್ಚು ಜಾನುವಾರುಗಳಿದ್ದು, ಕಳೆದ ಒಂದು ತಿಂಗಳಿನಿಂದ ಎಲ್ಲಾ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ. ಪ್ರತಿನಿತ್ಯ ಕಿಲಾರಿಗಳು ದೇವರ ಜಾನುವಾರುಗಳಿಗೆ ಬೆರೆಕಡೆಯಿಂದ ನೀರು ತಂದು ಬೊಗಸೆಯಲ್ಲೇ ನೀರನ್ನು ಕುಡಿಸಿ ಅವುಗಳ ಜೀವವನ್ನು ರಕ್ಷಣೆ ಮಾಡುತ್ತಿದ್ಧಾರೆ.
ಪ್ರತಿನಿತ್ಯ ಕಿಲೋಮೀಟರ್ ಗಟ್ಟಲೆ ಅಲೆಯುವ ದೇವರ ಎತ್ತುಗಳು ದಣಿವಾಗಿ ಬಾಯಾರಿದಾಗ ನೀರಿಗಾಗಿ ಅಂಗಲಾಚುತ್ತವೆ. ಈ ಸಂದರ್ಭದಲ್ಲಿ ಕಿಲಾರಿಗಳು ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿ ನೀರನ್ನು ತಂದು ಅವರದೆ ಬೊಗಸೆಯಲ್ಲಿ ಸ್ವಲ್ಪ ಸ್ವಲ್ಪ ಕುಡಿಸಿ ಅವುಗಳ ಪ್ರಾಣ ರಕ್ಷಿಸುತ್ತಿದ್ಧಾರೆ. ಕಳೆದ ಒಂದು ತಿಂಗಳಿನಿಂದ ಅಲ್ಲಿನ ಕಿಲಾರಿಗಳಾದ ಪಾಲಯ್ಯ, ಚಿನ್ನಯ್ಯ, ಜೋಗಯ್ಯ ತಮ್ಮ ಕಷ್ಟಗಳನ್ನು ಯಾರಿಗೆ ಹೇಳಬೇಕೆಂಬ ಚಿಂತೆಯಲ್ಲಿದ್ದಾರೆ. ನೀರಿನ ಅಭಾವ ಉಂಟಾಗಲು ದೇವರು ಕಾರಣನಲ್ಲ, ಬದಲಾಗಿ ಅಧಿಕಾರಿಗಳು ಎಂದರೆ ಎಲ್ಲರಿಗೂ ಆಶ್ಚರ್ಯವಾಗಬಹುದು.
ಪ್ರಸ್ತುತ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳು ವಾಸವಿರುವ ಜಾಗದಲ್ಲಿ ಎರಡು ಬೋರ್‍ವೆಲ್‍ಗಳಿಂದ ನೀರಿನ ತೊಟ್ಟಿಗಳಿದ್ದು, ಕಳೆದ ಕೆಲವು ತಿಂಗಳಿನಿಂದ ಬಂದ ಮಳೆಯಿಂದಾಗಿ ನೀರು ಸಮೃದ್ಧವಾಗಿ ಲಭ್ಯವಿತ್ತು. ಆದರೆ, ನೀರು ಸರಬರಾಜು ಮಾಡಲು ಬೆಸ್ಕಾಂ ಇಲಾಖೆ ಕೆಲವೇ ಅಡಿಗಳ ದೂರದಲ್ಲಿ ವಿದ್ಯುತ್ ಸಂಪರ್ಕಕ್ಕೆ ಹಾಕಿರುವ ಕಂಬದ ಟ್ರಾನ್ಸ್‍ಫಾರ್ಮ್ ಸುಟ್ಟು ಹೋಗಿ ತಿಂಗಳು ಕಳೆದಿದ್ದು,
ಈ ಬಗ್ಗೆ ಕಿಲಾರಿಗಳು ಹಾಗೂ ಗ್ರಾಮಸ್ಥರು ತಹಶೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಟ್ರಾನ್ಸ್‍ಫಾರ್ಮ್ ಸುಟ್ಟು ಹೋದ ಕಾರಣ ದೇವರ ಎತ್ತುಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಕೂಡಲೇ ಟ್ರಾನ್ಸ್‍ಫಾರ್ಮ್‍ರವರನ್ನು ರಿಪೇರಿಗೊಳಿಸಿ ಅಥವಾ ಬದಲಾಯಿಸಿ ಎಂದು ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಭೇಟಿ ನೀಡದೆ ನಿರ್ಲಕ್ಷ್ಯೆ ವಹಿಸಿದ್ದು,
ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಭೀಕರ ಸ್ಥಿತಿ ಉಂಟಾಗಿದೆ. ಪ್ರತಿನಿತ್ಯವೂ ಕಿಲಾರಿಗಳಿಗೆ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದೇ ಸವಲಾಗಿದೆ. ಸುಟ್ಟುಹೋದ ಟ್ರಾನ್ಸ್‍ಫಾರ್ಮ್‍ನ್ನು ರಿಪೇರಿ ಅಥವಾ ಬದಲಾಯಿಸುವ ಕಾರ್ಯವನ್ನು ಮಾಡಬೇಕಾದ ಬೆಸ್ಕಾಂ ಇಲಾಖೆ ಅಧಿಕಾರಿಗಳೇ ನಿರ್ಲಕ್ಷ್ಯೆ ವಹಿಸಿದ್ದು, ಜಾನುವಾರುಗಳ ಪ್ರಾಣಕ್ಕೆ ಸಂಚಕಾರವನ್ನು ತಂದೊಡ್ಡಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ