ಬಳ್ಳಾರಿ
ಕ್ರೀಡಾಕೂಟದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಪದವಿಪೂರ್ವ ಶಿಕ್ಷಣ ಇಲಾಖೆ, ಬಿ.ಪಿ.ಎಸ್.ಸಿ. ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ, ತಾಲೂಕು ಮಟ್ಟದ ಪಿ.ಯು ಕಾಲೇಜುಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶವು ಜನಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ;ಆದರೆ ಏಷ್ಯನ್ ಗೇಮ್ಸ್‍ನಲ್ಲಿ 9ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದ ಅವರು, ಈ ದೇಶದ ಬಹಳಷ್ಟು ಕ್ರೀಡಾಪಟುಗಳು ಬಡತನದಿಂದ ಬಂದವರೇ; ಅವರನ್ನು ಸ್ಪೂರ್ತಿದಾಯಕವಾಗಿ ತೆಗೆದುಕೊಂಡು ಯುವಕರು ಕ್ರೀಡೆಯಲ್ಲಿ ಭಾಗವಹಿಸಿ ದೇಶಕ್ಕೆ ಉತ್ತಮ ಹೆಸರನ್ನು ತರಬೇಕು ಎಂದರು.
ಕೇವಲ ವಿದ್ಯಾಭ್ಯಾಸವಲ್ಲದೇ ಕ್ರೀಡೆಯಲ್ಲಿ ಸಹ ಭಾಗವಹಿಸಬೇಕು ಎಂದು ಹೇಳಿದ ಸಚಿವರು ತಾಲೂಕಿನಲ್ಲಿ 40 ಪದವಿಪೂರ್ವ ಕಾಲೇಜಿನಲ್ಲಿ ಕೇವಲ 14 ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ಮಾತನಾಡಿ, ವಿದ್ಯಾರ್ಥಿಗಳು ವಿಧ್ಯಾಭ್ಯಾಸದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಇದರಿಂದ ನಿಮ್ಮ ಜೀವದ ಗುರಿ ತಲುಪಲು ಸಾಧ್ಯ ಎಂದರು.
ಮಹಾನಗರಪಾಲಿಕೆಯ ಮಹಾಪೌರರಾದ ಆರ್.ಸುಶೀಲಾಬಾಯಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ತಿಮ್ಮಪ್ಪ ಅವರು ಮಾತನಾಡಿದರು.
ಬಸವರಾಜೇಶ್ವರಿ ಪಬ್ಲಿಕ್ ಸೂಲ್ಕ್ ಮತ್ತು ಕಾಲೇಜಿನ ಪ್ರಾಚಾರ್ಯರರಾದ ಹರಿ ಕುಮಾರ್ ಅವರು ಸ್ವಾಗತಿಸಿದರು . ಈ ಸಂದರ್ಭದಲ್ಲಿ ಮಾಜಿ ಮೇಯರ್ ನಾಗಮ್ಮ , ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕೂರ್ , ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ರಾಮಾಂಜಿನೇಯ, ಬಸವರಾಜೇಶ್ವರಿ ಪಬ್ಲಿಕ್ ಸೂಲ್ಕ್ ಮತ್ತು ಕಾಲೇಜಿನ ಸಂಸ್ಥಾಪಕರಾದ ಅಶೋಕ್ ಭೂಪಾಲ್ ಸೇರಿದಂತೆ ಪ್ರಾಚಾರ್ಯರಾದ ಪ್ರಸಾದ್ ರೆಡ್ಡಿ, ಹನುಮಂತ ರೆಡ್ಡಿ ವಿದ್ಯಾರ್ಥಿಗಳು ಹಾಗೂ ಇತರೆ ಗಣ್ಯವ್ಯಕ್ತಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








