ಬಳ್ಳಾರಿ:
ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಿರುವ ಸಿಎಂ ಯಡಿಯೂರಪ್ಪ ಅವರು, ಅದಕ್ಕಾಗಿ ಸಾವಿರಾರು ಕೋಟಿ ರೂ. ಕಿಕ್‍ಬ್ಯಾಕ್ ಹಣ ಪಡೆದಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ ಮಾಡಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದು ಲಕ್ಷದ 73 ಸಾವಿರ ಎಕರೆ ಜಮೀನಿಗೆ ಸಂಬಂಧಿಸಿದಂತೆ 13 ಸಾವಿರದ 265 ಪ್ರಕರಣಗಳು ಬಾಕಿ ಇವೆ. ಇವುಗಳನ್ನೆಲ್ಲ ಈ ಸರ್ಕಾರ ವಾಪಸ್ ಪಡೆಯುವ ಸಲುವಾಗಿ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಹೆಚ್ಚು ಆಸಕ್ತಿ ತೋರುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಅದಕ್ಕಾಗಿ ಸಾವಿರಾರು ಕೋಟಿ ರೂ. ಕಿಕ್‍ಬ್ಯಾಕ್ ಪಡೆದಿದ್ದಾರೆ ಎಂದರು.
ವಿಜಯೇಂದ್ರ ಗುತ್ತಿಗೆದಾರರಿಂದ ವಸೂಲಿ:
ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು, ಗೃಹ ನಿರ್ಮಾಣ ಕಂಪನಿಗಳಿಂದಲೂ ಕಿಕ್ ಬ್ಯಾಕ್ ಪಡೆದ ಬಗ್ಗೆ ಅನೇಕ ದಾಖಲೆಗಳು ಇವೆ. ಕಲ್ಕತ್ತದ ಯಾವ ಯಾವ ಏಳು ಕಂಪನಿಗಳಿಂದ ಆರ್‍ಟಿಜಿಎಸ್ ಮೂಲಕ ಹಣ ಪಡೆದಿರುವ ಬಗ್ಗೆ ದಾಖಲೆಗಳು ಇವೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸದನದಲ್ಲೇ ಪ್ರಶ್ನಿಸಲಾಗಿದೆ. ಆದರೆ, ಉಪಚುನಾವಣೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಕುಟುಂಬ ಮತ್ತು ಬಿಜೆಪಿ ಮುಖಂಡರ ಆದಾಯ, ಆಸ್ತಿ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು. ತಮ್ಮ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದಕ್ಕೆ ಮಾಧ್ಯಮಗಳ ಮೇಲೂ ದಮನಕಾರಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಉತ್ತರಪ್ರದೇಶದ ಹತ್ರಾಸ್‍ನಲ್ಲಿ ಮನೀಷಾ ವಾಲ್ಮೀಕಿಯ ಅತ್ಯಾಚಾರ, ಹತ್ಯೆ ಆಘಾತಕಾರಿ ಘಟನೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೂ, ಪ್ರಧಾನಿ ನರೇಂದ್ರ ಮೋದಿಯವರು ಘಟನೆ ಬಗ್ಗೆ ಒಂದೇ ಒಂದು ಮಾತೂ ಆಡಿಲ್ಲ. ಹಿಂದೆ ನಿರ್ಭಯಾ ಪ್ರಕರಣದ ವೇಳೆ ಬೀದಿಗಿಳಿದು ಹೋರಾಟ ನಡೆಸಿದ್ದ ಬಿಜೆಪಿ ಪಕ್ಷದ ಮುಖಂಡರಿರೂ ಇಂದಿನ ಮನಿಷಾ ವಾಲ್ಮೀಕಿ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಮೌನವೇಕೆ? ಎಂದು ಪ್ರಶ್ನಿಸಿದ ಉಗ್ರಪ್ಪ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಾದರೂ ಮಾತನಾಡಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಅವರೂ ಸಹ ಮೌನವಹಿಸಿದ್ದಾರೆ ಏಕೆ? ಎಂದವರು ಪ್ರಶ್ನಿಸಿದರು.
ಯುಪಿ ರಾವಣ ರಾಜ್ಯ:
ಅಯೋಧ್ಯೆಯಲ್ಲಿ ರಾಮ ಮಂದಿರ ಇರುವ ಕಾರಣ ಅದನ್ನು ರಾಮರಾಜ್ಯ ಎನ್ನಲಾಗುತ್ತಿತ್ತು. ಆದರೆ, ರಾಮಾಯಣ ಬರೆದಿದ್ದ ವಾಲ್ಮೀಕಿಯ ವಾರಸುದಾರಳಾದ ನಿಷಾ ವಾಲ್ಮೀಕಿ ಸೇರಿ ಮಹಿಳೆಯರಿಗೆ ರಕ್ಷಣೆ ಇಲ್ಲದ ಹಿನ್ನೆಲೆಯಲ್ಲಿ ಇದೀಗ ರಾವಣ ರಾಜ್ಯವಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿರುವ ಉತ್ತರ ಪ್ರದೇಶದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪಂಗಡ, ಬಡವರಿಗೆ, ಕೆಳವರ್ಗದವರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಅಲ್ಲಿನ ಮುಖ್ಯಮಂತ್ರಿಯನ್ನು ವಜಾಮಾಡಬೇಕು. ಯುವತಿಯ ಸಾಕ್ಷ್ಯ ನಾಶಮಾಡಿರುವ ಅಲ್ಲಿನ ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಡಿಸ್‍ಮಿಸ್ ಮಾಡಿ, ಅವರ ವಿರುದ್ಧ ಪ್ರಕರಣ ದಾಖಲಾಗಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪ್ರತಿಪಕ್ಷಗಳನ್ನು ದಮನ ಮಾಡುವ ಯತ್ನ ಮೋದಿ ಮತ್ತವರ ಗ್ಯಾಂಗ್‍ನಿಂದ ನಡೆಯುತ್ತಿದೆ ಎಂದು ಆರೋಪಿಸಿದ ಉಗ್ರಪ್ಪ, ಅದಕ್ಕಾಗಿಯೇ ಮನೀಷಾ ವಾಲ್ಮೀಕಿಯ ಕುಟುಂಬಸ್ಥರನ್ನು ಭೇಟಿಯಾಗಲು ಮನೆಗೆ ಹೋಗುತ್ತಿದ್ದ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್‍ಗಾಂಧಿ, ಪ್ರಿಯಾಂಕಾ ಗಾಂಧಿಯವರ ಮೇಲೆ ಪೊಲೀಸರಿಂದ ಅಡ್ಡಿಪಡಿಸಿದ್ದಾರೆ. ಕರೋನಾ ಸೋಂಕುನಿ ಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಅಲ್ಲದೇ ರಾಜ್ಯದಲ್ಲಿ ಕರೋನಾ ನಿಯಂತ್ರಣಕ್ಕೆ ಖರೀದಿಸಿದ ಉಪಕರಣಗಳಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಪುನರುಚ್ಛರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ