ಕ್ಯಾಂಟರ್ ಚಾಲಕನ ಬೆನ್ನಟ್ಟಿ ಕೊಲೆ..!

ಬೆಂಗಳೂರು

    ಕೆಲಸ ಮುಗಿಸಿಕೊಂಡು ಮನೆಗೆ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಕ್ಯಾಂಟರ್ ಚಾಲಕನನ್ನು ಬೆನ್ನಟ್ಟಿ ಬೈಕ್‍ಗಳಲ್ಲಿ ಬಂದು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ದುರ್ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾಥ್ರಿ ನಡೆದಿದೆ.

     ಕೊಲೆಯಾದವರನ್ನು ಕೆಬ್ಬೆಹಳ್ಳದ ಮಹೇಶ್‍ಕುಮಾರ್(35)ಎಂದು ಗುರುತಿಸಲಾಗಿದೆ.ಕ್ಯಾಂಟರ್ ಚಾಲಕನಾಗಿದ್ದ ಮಹೇಶ್‍ಕುಮಾರ್ ರಾಜಗೋಪಾಲನಗರದಲ್ಲಿ ಕ್ಯಾಂಟರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು.ರಾತ್ರಿ 10.15ರ ವೇಳೆ ಕೆಲಸ ಮುಗಿಸಿಕೊಂಡು ರಾಜಗೋಪಾಲನಗರದಲ್ಲಿ ಕ್ಯಾಂಟರ್‍ನಿಲ್ಲಿಸಿ ಮನೆಗೆ ಹೊಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದಾಗ ಎರಡು ಬೈಕ್‍ಗಳಲ್ಲಿ ನಾಲ್ವರು ಹಿಂಬಾಲಿಸಿಕೊಂಡು ಬಂದಿದ್ದಾರೆ.

     ಹಿಂಬಾಲಿಸಿ ಬರುತ್ತಿರುವರನ್ನು ಕಂಡು ಮಹೇಶ್‍ಕುಮಾರ್ ವೇಗವಾಗಿ ಸ್ಕೂಟರ್ ಚಲಾಯಿಸಿದರೂ ದುಷ್ಕರ್ಮಿಗಳು ಬೆನ್ನಟ್ಟಿ ಹೆಗ್ಗನಹಳ್ಳಿ ಕ್ರಾಸ್ ಬಳಿ ಅಡ್ಡಗಟ್ಟಿದ್ದಾರೆ ಸ್ಕೂಟರ್ ನಿಲ್ಲಿಸಿದ ಮಹೇಶ್‍ಕುಮಾರ್ ಮೇಲೆ ಏಕಾಎಕಿ ದಾಳಿ ನಡೆಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

      ಕೊಲೆಯಾದ ಮಹೇಶ್ ಕುಮಾರ್ 6 ವರ್ಷಗಳ ಹಿಂದೆ ಕೊಲೆಕೃತ್ಯವೊಂದರಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದು ಅಲ್ಲಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೇ ಕ್ಯಾಂಟರ್ ಚಾಲಕನಾಗಿ ಜೀವನ ನಡೆಸುತ್ತಿದ್ದ ಹಳೆ ದ್ವೇಷದ ಹಿನ್ನಲೆಯಲ್ಲಿ ಮಹೇಶ್‍ಕುಮಾರ್ ಅವರನ್ನು ಕೊಚ್ಚಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

     ಕೊಲೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ