ಬೆಂಗಳೂರು
ಮಹಾಮಾರಿ ಕೊರೊನಾ ಸೋಂಕು ರಾಜ್ಯದಲ್ಲಿ ಒಬ್ಬರನ್ನು ಬಲಿ ಪಡೆದುಕೊಂಡ ನಂತರ, ಇದನ್ನೇ ಬಂಡವಾಳ ಮಾಡಿಕೊಂಡು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮೆಡಿಕಲ್ ಶಾಪ್ ಗಳ ಮೇಲೆ, ಸಿಟಿ ಕ್ರೈಂ ಬ್ರಾಂಚ್ (ಸಿಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆಯೇ, ಮಾಸ್ಕ್ ಮತ್ತು ಸ್ಯಾನಿಟೈಜರ್ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಕೃತಕ ಅಭಾವವನ್ನು ಸೃಷ್ಟಿಸಿ, ಈ ಎರಡನ್ನು ಒಂದಕ್ಕೆ ಐದರಿಂದ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು.
ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ನಗರದ ಹಲವು ಮೆಡಿಕಲ್ ಶಾಪ್ ಗಳ ಮೇಲೆ ದಾಳಿ ನಡೆಸಿದ್ದಾರೆ. ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮೆಡಿಕಲ್ ಶಾಪ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ, ದುಬಾರಿ ಬೆಲೆಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ಮಾರುತ್ತಿದ್ದ ಐವರು ಮೆಡಿಕಲ್ ಶಾಪ್ ಮಾಲೀಕರು ಸೆರೆಸಿಕ್ಕಿದ್ದಾರೆ. ಜಯನಗರ, ಕಲಾಸಿಪಾಳ್ಯ, ಮಹಾಲಕ್ಷ್ಮೀ ಲೇಔಟ್, ಸಂಜಯ ನಗರ ಮುಂತಾದ ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
