ದಿವಾಳಿ ಎದ್ದಿರುವ ಕಾಂಗ್ರೆಸ್: ಕಟೀಲ್

ದಾವಣಗೆರೆ:

     ದೇಶದಲ್ಲಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ದಿವಾಳಿ ಎದ್ದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

     ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಬಿಜೆಪಿ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷವು ವೈಚಾರಿಕವಾಗಿ, ಬೌದ್ಧಿಕವಾಗಿ ಹಾಗೂ ಕಾರ್ಯಕರ್ತರ ವಿಷಯದಲ್ಲೂ ದಿವಾಳಿ ಎದ್ದಿದೆ. ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ ಮುಖಂಡರು ನೀಡುತ್ತಿರುವ ಹೇಳಿಕೆಗಳೇ ಆ ಪಕ್ಷದ ದಿವಾಳಿತನಕ್ಕೆ ಸಾಕ್ಷಿಯಾಗಿವೆ ಎಂದು ಲೇವಡಿ ಮಾಡಿದರು.

     ಮಹಾತ್ಮ ಗಾಂಧೀಜಿಯವರ ವಿಚಾರಧಾರೆಯನ್ನು ಕಾಂಗ್ರೆಸ್ ಮೂಲೆ ಗುಂಪು ಮಾಡಿದೆ. ಆದರೆ, ನಮ್ಮ ಬಿಜೆಪಿ ಗಾಂಧಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡಲು ಮುಂದಾಗಿದೆ. ಆದರೆ, ಇದನ್ನು ಸಹಿಸದ ಕಾಂಗ್ರೆಸ್‍ನವರು ನಮ್ಮನ್ನು ಕೋಮುವಾದಿಗಳು ಎಂಬುದಾಗಿ ತೆಗಳುತ್ತಿದ್ದಾರೆ. ಕಾಂಗ್ರೆಸ್‍ನ ಇಂತಹ ಟೀಕೆಗಳಿಗೆ ಈಗಾಗಲೇ ರಾಜ್ಯದ ಜನತೆ ತಕ್ಕ ಉತ್ತರ ನೀಡಿದ್ದು, ಇನ್ನೂ ಮುಂದೆ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿಯೇ ಅಧಿಕಾರ ನಡೆಸಲಿದೆ ಎಂದು ಹೇಳಿದರು.

    ಬಿಜೆಪಿಗೆ ಸುಲಭವಾಗಿ ಅಧಿಕಾರ ಸಿಕ್ಕಿಲ್ಲ. ನಮ್ಮ ನಾಯಕರ ಕಾರ್ಯಪದ್ಧತಿ, ಪಕ್ಷದ ಸಿದ್ಧಾಂತ ಮತ್ತು ಹಿರಿಯರ ಆದರ್ಶ ಮತ್ತು ತ್ಯಾಗ ಬಲಿದಾನದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದ ಅವರು, ನಮ್ಮ ವಿಚಾರಧಾರೆಯಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೇ, ವ್ಯಕ್ತಿಗಿಂತ ಪಕ್ಷ ದೊಡ್ಡದು, ಅದಕ್ಕಿಂತ ದೇಶ ದೊಡ್ಡದು ಎಂಬ ಧೈಯೋದ್ದೇಶದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ರಾಷ್ಟ್ರವನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸವನ್ನು ಪಕ್ಷ ಮಾಡುತ್ತಿದ್ದು, ಹಿರಿಯ ಆದರ್ಶದ ಹಾದಿಯಲ್ಲಿ ಪ್ರಪಂಚದಲ್ಲೇ ಭಾರತವನ್ನು ಸೂಪರ್ ಪವರ್ ರಾಷ್ಟ್ರವನ್ನಾಗಿ ನಮ್ಮ ಸರ್ಕಾರ ಮಾಡುವಲ್ಲಿ ಯಶಸ್ಸಾಗಿದೆ ಎಂದರು.

     ಭಾರತೀಯ ಜನತಾ ಪಕ್ಷದಲ್ಲಿ ನಾವು ಬೇಡಿದ್ದು ಸಿಗುವುದಿಲ್ಲ. ಕೊಟ್ಟಿದ್ದನ್ನು ಸ್ವೀಕರಿಸಿ ಕೆಲಸ ಮಾಡಬೇಕು. ನನಗೆ ಹೆಚ್ಚು ಭಾಷಣ ಮಾಡುವ ಹುಚ್ಚು. ಹೀಗಾಗಿ ನನಗೆ ಬಜರಂಗ ದಳಕ್ಕೆ ಕಳುಹಿಸಿ ಎಂದು ನಾನು ಕೇಳಿಕೊಂಡಿದ್ದೆ. ಆದರೆ, ಸಂಘ ಪರಿವಾರದ ನಾಯಕರು ಬೇಡ ನೀನು ರಾಜಕೀಯ ಮಾಡು ಎಂಬುದಾಗಿ ಕಳುಹಿಸಿದರು. ಇದನ್ನು ನೋಡಿದರೆ ಪಕ್ಷ ಏನೂ ಕೊಡುತ್ತೋ ಅದನ್ನು ಮಾಡಬೇಕಿದೆ ಎಂದು ಹೇಳುವ ಮೂಲಕ ಸಚಿವ ಆಕಾಂಕ್ಷಿಗಳಿಗೆ ಕಟೀಲ್ ಪರೋಕ್ಷವಾಗಿ ಬಿಸಿ ಮುಟ್ಟಿಸಿದರು.

     ಒಬ್ಬ ಸಾಮಾನ್ಯ ಹಳ್ಳಿ ಹುಡುಗ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗುವುದು, ಚಾ ಮಾರುವ ಒಬ್ಬ ಹುಡುಗ ದೇಶದ ಪ್ರಧಾನಿಯಾಗುವ ಅವಕಾಶಗಳೆನಿದ್ದರೂ ಅದು ಬಿಜೆಪಿಯಲ್ಲಿ ಮಾತ್ರ. ಆದರೆ, ಕಾಂಗ್ರೆಸ್‍ನಲ್ಲಿ ಎಷ್ಟೋ ವರ್ಷಗಳಿಂದ ಸೋನಿಯಾ ಗಾಂಧಿ ಅವರೇ ಆ ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

     ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಸರ್ಕಾರ ಸುಭದ್ರವಾಗಿ ಮಾಡಿಕೊಂಡಿದ್ದೇವೆ. ಆದರೆ, ಸಚಿವ ಸ್ಥಾನ ನೀಡುವುದು ದೊಡ್ಡ ಕಗ್ಗಂಟಾಗಿದೆ. ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರುಗಳು ಜೋಡೆತ್ತುಗಳಾಗಿ ಕೆಲಸ ಮಾಡಿದ್ದರಿಂದ ಇನ್ನೂ ಮೂರುವರೆ ವರ್ಷಗಳ ಕಾಲ ಬಿ.ಎಸ್. ಯಡಿಯೂರಪ್ಪ ಅವರು ಉತ್ತಮ ಆಡಳಿತ ನೀಡಲಿದ್ದಾರೆ ಎಂದರು.

     ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎ. ರವೀಂದ್ರನಾಥ, ಮಾಡಾಳ್ ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ಪ್ರೊ. ಲಿಂಗಣ್ಣ, ಎಸ್.ವಿ. ರಾಮಚಂದ್ರಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಮುಖಂಡರಾದ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಎಸ್. ದತ್ತಾತ್ರಿ, ಪ್ರೊ. ನರಸಿಂಹಪ್ಪ, ಜೀವನಮೂರ್ತಿ, ರಮೇಶ್ ನಾಯ್ಕ, ಹೆಚ್.ಎನ್. ಶಿವಕುಮಾರ್, ಧನಂಜಯ್ಯ ಕಡ್ಲೇಬಾಳು ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link